ADVERTISEMENT

Paralympic Games | ಕೋವಿಡ್ ಗೆದ್ದ ಪ್ರವೀಣ; ಹರ್ವಿಂದರ್ ‘ಕಿಂಗ್’

ಹೈಜಂಪ್‌ನಲ್ಲಿ ಬೆಳ್ಳಿ ಪದಕ ಗಳಿಸಿದ ಉತ್ತರಪ್ರದೇಶದ ಅಥ್ಲೀಟ್‌; ಆರ್ಚರಿಯಲ್ಲಿ ರೋಚಕ ಗೆಲುವು

ಪಿಟಿಐ
Published 3 ಸೆಪ್ಟೆಂಬರ್ 2021, 21:32 IST
Last Updated 3 ಸೆಪ್ಟೆಂಬರ್ 2021, 21:32 IST
ಪ್ರವೀಣ್ ಕುಮಾರ್ ಅವರ ಜಿಗಿತದ ಭಂಗಿ –ಪಿಟಿಐ ಚಿತ್ರ
ಪ್ರವೀಣ್ ಕುಮಾರ್ ಅವರ ಜಿಗಿತದ ಭಂಗಿ –ಪಿಟಿಐ ಚಿತ್ರ   

ಟೋಕಿಯೊ: ಕೋವಿಡ್‌ನಿಂದ ಸೃಷ್ಟಿಯಾದ ‘ಲಾಕ್‌ಡೌನ್‌’ ‍ಪರಿಸ್ಥಿತಿಯಲ್ಲೂ ಛಲ ಬಿಡಲಿಲ್ಲ. ತನ್ನದೇ ರೀತಿಯಲ್ಲಿ ವಿಶೇಷ ಸೌಲಭ್ಯ ಸೃಷ್ಟಿಸಿ ಅಭ್ಯಾಸ ಮುಂದುವರಿಯಿತು. ಹೀಗಿದ್ದೂ ಪದಕ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಆದರೆ ಪ್ರವೀಣ್ ಕುಮಾರ್ ಶುಕ್ರವಾರ ಪದಕ ಗೆಲ್ಲುವುದರೊಂದಿಗೆ ಏಷ್ಯಾ ಮಟ್ಟದ ದಾಖಲೆಯನ್ನೂ ನಿರ್ಮಿಸಿದರು.

18ನೇ ವಯಸ್ಸಿನಲ್ಲೇ ಪ್ಯಾರಾಲಿಂಪಿಕ್ಸ್‌ನ ಹೈಜಂಪ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಉತ್ತರಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ರೈತಮ ಪುತ್ರ ಪ್ರವೀಣ್ ಕುಮಾರ್ ಅವರು ಕೋವಿಡ್‌ನಿಂದಾಗಿ ಕ್ರೀಡಾಂಗಣಗಳು ಮುಚ್ಚಿದ್ದರಿಂದ ಗಾಬರಿಯಾಗಿದ್ದರು. ಏಪ್ರಿಲ್‌ನಲ್ಲಿ ಅವರಿಗೆ ಕೋವಿಡ್ ಸೋಂಕು ಕೂಡ ಉಂಟಾಯಿತು. ಆ ಆಘಾತದಿಂದ ಚೇತರಿಸಿಕೊಂಡ ನಂತರ ಅಭ್ಯಾಸ ಮಾಡುವ ಹುಮ್ಮಸ್ಸು ಇತ್ತು. ಆದರೆ ಲ್ಯಾಂಡಿಂಗ್ ಪಿಟ್ ಇರಲಿಲ್ಲ. ಕೊನೆಗೆ ಹೊಂಡವೊಂದನ್ನು ತೋಡಿ ಅದರಲ್ಲಿ ಮೆದುವಾದ ಮಣ್ಣು ತುಂಬಿಸಿ ಜಿಗಿದು ಅಭ್ಯಾಸ ಮಾಡಿದರು.

ದೆಹಲಿಯ ಮೋತಿಲಾಲ್ ನೆಹರು ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಯಾಗಿರುವ ಪ್ರವೀಣ್ ಕುಮಾರ್ ಅವರಿಗೆ ಸತ್ಯಪಾಲ್ ಕೋಚಿಂಗ್ ನೀಡುತ್ತಿದ್ದಾರೆ. 2019ರಲ್ಲಿ ಜೂನಿಯರ್ ಪ್ಯಾರಾ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಮತ್ತು ಪ್ಯಾರಾ ಅಥ್ಲೆಟಿಕ್ಸ್‌ ಗ್ರ್ಯಾನ್‌ಪ್ರಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ADVERTISEMENT

ಹರ್ವಿಂದರ್‌ಗೆ ‘ಮೊದಲ’ ‍ಪದಕ
ರೋಚಕ ಶೂಟ್ ಆಫ್‌ನಲ್ಲಿ ಗೆಲುವು ಸಾಧಿಸಿದ ಹರ್ವಿಂದರ್ ಸಿಂಗ್ ಭಾರತಕ್ಕೆ ಆರ್ಚರಿಯಲ್ಲಿ ಮೊದಲ ಪದಕ ತಂದುಕೊಟ್ಟರು. ಶುಕ್ರವಾರ ನಡೆದ ಪುರುಷರ ವೈಯಕ್ತಿಕ ರಿಕರ್ವ್‌ ವಿಭಾಗದ ಸ್ಪರ್ಧೆಯಲ್ಲಿ ಅವರು ಕೊರಿಯಾದ ಕಿಮ್ ಮಿನ್‌ ಸು ಎದುರು ಜಯ ಗಳಿಸಿದರು.

23 ವರ್ಷದ ಹರ್ವಿಂದರ್ ಸಿಂಗ್ 2018ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಪ್ರಮುಖ ಪ್ಯಾರಾಲಿಂಪಿಕ್‌ ಕ್ರೀಡಾಕೂಟವೊಂದರಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದರು. ಹರಿಯಾಣದ ಕೈತಾಲ್‌ನಲ್ಲಿರುವ ಗುಹ್ಲಾ ಚೀಕಾ ಗ್ರಾಮದಲ್ಲಿ ಜನಿಸಿ ಬೆಳೆದ ಅವರು ಪಟಿಯಾಲದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಗಳಿಸಿದ್ದಾರೆ.

ಒಂದೂವರೆ ವರ್ಷದ ಮಗುವಾಗಿದ್ದಾಗ ಹರ್ವಿಂದರ್‌ ಅವರಿಗೆ ಡೆಂಗಿಯಾಗಿತ್ತು. ಚಿಕಿತ್ಸೆ ನೀಡಿದ ಸ್ಥಳೀಯ ವೈದ್ಯರೊಬ್ಬರು ನೀಡಿದ ಚುಚ್ಚುಮದ್ದಿನಿಂದಾಗಿ ಅವರ ಕಾಲುಗಳು ಸ್ವಾದೀನ ಕಳೆದುಕೊಂಡಿದ್ದವು.

ಚೊಚ್ಚಲ ಕೂಟ: ಲೇಖರಾಗೆ ‘ಡಬಲ್’ ಸಂಭ್ರಮ
10 ಮೀಟರ್ಸ್ ಏರ್‌ ರೈಫಲ್‌ನಲ್ಲಿ ಚಿನ್ನ ಗೆದ್ದು ನಾಲ್ಕು ದಿನಗಳ ಒಳಗೆ ಅವನಿ ಲೇಖರಾ ಮತ್ತೊಂದು ಪದಕಕ್ಕೆ ಮುತ್ತು ನೀಡಿದರು. ಶುಕ್ರವಾರ ನಡೆದ 50 ಮೀ ರೈಫಲ್–3 ಪೊಸಿಷನ್‌ನಲ್ಲಿ ಕಂಚಿನ ಪದಕ ಅವರ ಕೊರಳಿಗೇರಿತು.

19 ವರ್ಷದ ಅವನಿ ಅವರಿಗೆ ಇದು ಚೊಚ್ಚಲ ಪ್ಯಾರಾಲಿಂಪಿಕ್ಸ್‌. ಪ್ರಬಲ ಪೈಪೋಟಿ ಇದ್ದ ಸ್ಪರ್ಧೆಯಲ್ಲಿ ಉಕ್ರೇನ್‌ನ ಐರಿನಾ ಶೆಟ್ನಿಕ್ ಅವರನ್ನು ಹಿಂದಿಕ್ಕಿ ಅವನಿ ಪದಕ ಗಳಿಸಿದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡರು. ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಶ್ರೇಯವೂ ಅವರದಾಗಿದೆ. ಜೋಗಿಂದರ್ ಸಿಂಗ್ ಸೋಧಿ, ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗಳಿಸಿದ ಭಾರತದ ಏಕೈಕ ಕ್ರೀಡಾಪಟು ಆಗಿದ್ದರು. 1984ರಲ್ಲಿ ಅವರು ಬೆಳ್ಳಿ ಮತ್ತು ಕಂಚು ಗೆದ್ದಿದ್ದರು. ದೇವೇಂದ್ರ ಜಜಾರಿಯ ಮೂರು ಪದಕ ಗಳಿಸಿದ್ದಾರೆ. ಆದರೆ ಈ ಮೂರು ಪದಕಗಳು ಮೂರು ಕೂಟಗಳಲ್ಲಿ ಬಂದಿವೆ.

ಶುಕ್ರವಾರದ ಸ್ಪರ್ಧೆಯಲ್ಲಿ ಚೀನಾದ ಜಾಂಗ್ ಕೂಪಿಂಗ್ ಚಿನ್ನ ಗಳಿಸಿದರು. ಜರ್ಮನಿಯ ಹಿಲ್‌ಟ್ರಾಪ್ ನಟಾಶ ಬೆಳ್ಳಿ ಪದಕ ಗೆದ್ದುಕೊಂಡರು.

ಪ್ರಮೋದ್–ಪಲಕ್‌ ಜೋಡಿ ಸೆಮಿಫೈನಲ್‌ಗೆ
ಭಾರತದ ಪ್ರಮೋದ್ ಭಗತ್ ಮತ್ತು ಪಲಕ್ ಕೊಹ್ಲಿ ಅವರು ಬ್ಯಾಡ್ಮಿಂಟನ್‌ನ ಮಿಶ್ರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದರು. ನೋಯ್ಡಾದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಸುಹಾಸ್ ಯತಿರಾಜ್ ಅವರು ಸಿಂಗಲ್ಸ್ ವಿಭಾಗದಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿದರು.

ಪ್ರಮೋದ್ ಮತ್ತು ಪಲಕ್ ಥಾಯ್ಲೆಂಡ್‌ನ ಸಿರಿಪಾಂಗ್ ತಿಮರೊಮ್ ಮತ್ತು ನಿಪಾಡ ಸೆನ್ಸುಪಾ ಅವರನ್ನು 21-15, 21-19ರಲ್ಲಿ ಮಣಿಸಿದರು.

ಸುಹಾಸ್ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ಮೂರನೇ ಕ್ರಮಾಂಕದ ಆಟಗಾರ ಇಂಡೊನೇಷ್ಯಾದ ಹ್ಯಾರಿ ಸುಸಾಂತೊ ಅವರನ್ನು 21–6, 21–12ರಲ್ಲಿ ಸೋಲಿಸಿದರು. ಕೇವಲ 19 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಂಡಿತ್ತು.

ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ತರುಣ್ ಧಿಲಾನ್ ಕೊರಿಯಾದ ಶಿನ್ ಕ್ಯುಂಗ್ ವಿರುದ್ಧ 21–18, 15–21, 21–17ರಲ್ಲಿ ಜಯ ಗಳಿಸಿದರೆ ಮನೋಜ್ ಸರ್ಕಾರ್ 21–16, 21–9ರಲ್ಲಿ ಉಕ್ರೇನ್‌ನ ಅಲೆಕ್ಸಾಂಡ್ರ ಚಿರ್ಕೊವ್ ಎದುರು ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿದರು.

*
ಶಾಲಾ ದಿನಗಳಲ್ಲಿ ಕ್ರೀಡೆಗೇ ಒತ್ತು ಕೊಡುತ್ತಿದ್ದೆ. ಮೊದಮೊದಲು ವಾಲಿಬಾಲ್ ಆಡುತ್ತಿದ್ದೆ. ನಂತರ ನಿಧಾನಕ್ಕೆ ಪ್ಯಾರಾಲಿಂಪಕ್ಸ್ ಕಡೆಗೆ ಹೊರಳಿದೆ, ಹೈಜಂಪ್ ಅಭ್ಯಾಸ ಆರಂಭಿಸಿದೆ.
-ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆದ್ದ ಅಥ್ಲೀಟ್‌

*
ಚಿನ್ನ ಗೆದ್ದಾಗ ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವುದು ಸರಿಯಲ್ಲ ಎಂದುಕೊಂಡಿದ್ದೆ. ಮತ್ತೊಂದು ಪದಕವೇನೋ ಬಂತು. ಆದರೆ ಈಗಲೂ ಪೂರ್ಣ ತೃಪ್ತಿ ಇಲ್ಲ. ಫೈನಲ್‌ನಲ್ಲಿ ಸ್ವಲ್ಪ ಗಾಬರಿಯಾಗಿದ್ದೆ. ಹೀಗಾಗಿ ಚಿನ್ನ–ಬೆಳ್ಳಿ ಗೆಲ್ಲುವ ಅವಕಾಶ ತಪ್ಪಿತು.
-ಅವನಿ ಲೇಖರಾ ಶೂಟಿಂಗ್‌ನಲ್ಲಿ ಕಂಚು ಗೆದ್ದ ಕ್ರೀಡಾಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.