ADVERTISEMENT

127 ಮೀ. ಉದ್ದದ ಬೆಂಕಿ ಸುರಂಗದಲ್ಲಿ ಬೈಕ್‌ ಸವಾರಿ

ಐದು ಹಳೆ ದಾಖಲೆ ಮುರಿದ ಯೋಧರು l ನಾಲ್ಕು ಹೊಸ ದಾಖಲೆ ನಿರ್ಮಾಣ?

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 22:42 IST
Last Updated 10 ನವೆಂಬರ್ 2020, 22:42 IST
ದೊಮ್ಮಲೂರಿನ ಎಎಸ್‍ಸಿ ಸೆಂಟರ್ ಮತ್ತು ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಸಾಹಸ ಪ್ರದರ್ಶನಗಳಲ್ಲಿ ಬೆಂಕಿಯ ಸುರಂಗದ ಮೂಲಕ ಹಾಯ್ದು ಬಂದ ಎಸಿಎಸ್ ಟೊರ್ನಾಡೋಸ್ ತಂಡದ ಶಿವಂ ಸಿಂಗ್ ವಿಶ್ವದಾಖಲೆ ಮಾಡಿದರು-ಪ್ರಜಾವಾಣಿ ಚಿತ್ರ : ಅನೂಪ್ ರಾಘ .ಟಿ.
ದೊಮ್ಮಲೂರಿನ ಎಎಸ್‍ಸಿ ಸೆಂಟರ್ ಮತ್ತು ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಸಾಹಸ ಪ್ರದರ್ಶನಗಳಲ್ಲಿ ಬೆಂಕಿಯ ಸುರಂಗದ ಮೂಲಕ ಹಾಯ್ದು ಬಂದ ಎಸಿಎಸ್ ಟೊರ್ನಾಡೋಸ್ ತಂಡದ ಶಿವಂ ಸಿಂಗ್ ವಿಶ್ವದಾಖಲೆ ಮಾಡಿದರು-ಪ್ರಜಾವಾಣಿ ಚಿತ್ರ : ಅನೂಪ್ ರಾಘ .ಟಿ.   

ಬೆಂಗಳೂರು: ಸೇನೆಯ ಸೇವಾ ಘಟಕದ (ಎಎಸ್‌ಸಿ) ಮೋಟಾರ್‌ ಬೈಕ್‌ ಸಾಹಸ ಪ್ರದರ್ಶನ ತಂಡವಾದ ‘ಟಾರ್ನಡೋಸ್‌’ 127 ಮೀ. ಉದ್ದದ ಬೆಂಕಿ ಸುರಂಗವನ್ನು ಹಾದು ಹೋಗುವುದು ಸೇರಿದಂತೆ ಒಟ್ಟು ಒಂಬತ್ತು ವಿಶ್ವದಾಖಲೆಗಳನ್ನು ನಿರ್ಮಿಸುವ ಪ್ರಯತ್ನ ನಡೆಸಿದೆ.

ಕ್ಯಾ.ಶಿವಂ ಸಿಂಗ್‌ ನೇತೃತ್ವದ 34 ಮಂದಿ ಸಾಹಸೀ ಸೈನಿಕರ ತಂಡವು ನಗರದಲ್ಲಿ ಸೋಮವಾರ ಮತ್ತು ಮಂಗಳವಾರ ನಾಲ್ಕು ಹೊಸ ದಾಖಲೆ ನಿರ್ಮಿಸುವ ಹಾಗೂ ಐದು ಹಳೆ ದಾಖಲೆಗಳನ್ನು ಮುರಿಯುವ ಪ್ರಯತ್ನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಬೆಂಕಿಯ ಸುರಂಗದಲ್ಲಿ ಬೈಕಿನಲ್ಲಿ ಸಾಗುವ ಸಾಹಸ, ಬೈಕ್‌ನಲ್ಲಿ ಮಾನವ ಪಿರಮಿಡ್‌ಗಳು ಸಾಗುವ ಪರಿ, ಹಿಮ್ಮುಖವಾಗಿ ಬೈಕ್‌ ಚಲಾಯಿಸುವ ಚಾಲಾಕಿತನಗಳು ಮೈನವಿರೇಳಿಸಿದವು.

2014ರ ಸೆ.5ರಂದು ದಕ್ಷಿಣ ಆಫ್ರಿಕಾದ ಎನ್ರಿಕೊ ಶೋಮನ್‌ ಮತ್ತು ಆ್ಯಂಡ್ರೆ ಡಿಕಾಕ್‌ ಅವರು ಬೆಂಕಿಯ ಸುರಂಗದಲ್ಲಿ 120.4 ಮೀ. ದೂರವನ್ನು ಕ್ರಮಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ಟಾರ್ನಡೋಸ್ ತಂಡದ ಕ್ಯಾ.ಶಿವಂ ಸಿಂಗ್‌ 130 ಮೀ.ಉದ್ದದ ಬೆಂಕಿ ಸುರಂಗವನ್ನು ಗುರಿಯನ್ನು ಹೊಂದಿದ್ದರು. 127 ಮೀ ಉದ್ದದ ಸುರಂಗವನ್ನು ಕ್ರಮಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.

ADVERTISEMENT

ಎರಡು ಬೈಕ್‌ಗಳಲ್ಲಿ 15 ಮಂದಿಯ ಪಿರಮಿಡ್‌ ಹೊತ್ತು 1 ಕಿ.ಮೀ ದೂರವನ್ನು 48.12 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದ ದಾಖಲೆಯನ್ನು ಟಾರ್ನಡೋಸ್‌ ತಂಡ ಸುಧಾರಿಸಿಕೊಂಡಿದೆ. 2015ರಲ್ಲಿ ಟಾರ್ನಡೋಸ್‌ ಈ ದಾಖಲೆಯನ್ನು ನಿರ್ಮಿಸಿತ್ತು. ಈ ಬಾರಿ 17 ಮಂದಿ ಎರಡು ಬೈಕ್‌ಗಳಲ್ಲಿ 1 ಕಿ.ಮೀ ದೂರವನ್ನು 46.26 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಕ್ಯಾ.ಶಿವಂ ಸಿಂಗ್‌ ಹಾಗೂ ನೀಲಾಂಜನ್‌ ಬೇಜ್‌ ಬೈಕ್‌ ಚಲಾಯಿಸಿದ್ದರು.

ಮೂರು ಬೈಕ್‌ಗಳಲ್ಲಿ 32 ಮಂದಿಯ ಪಿರಮಿಡ್‌ ಹೊತ್ತು 1 ಕಿ.ಮೀ ದೂರವನ್ನು 56.23 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದ ಟಾರ್ನಡೋಸ್‌ ತಂಡದ ಈ ಹಿಂದಿನ ದಾಖಲೆಯೂ ಮುರಿದುಬಿತ್ತು. ಈ ಬಾರಿ 34 ಮಂದಿ ಮೂರು ಬೈಕ್‌ಗಳಲ್ಲಿ 1 ಕಿ.ಮೀ ದೂರವನ್ನು 54.35 ಸೆಕೆಂಡ್‌ಗಳಲ್ಲಿ ತಲುಪಿದರು. ಹೃಷಿಕೇಶ್‌ ಯಾದವ್‌, ಅಮ್ಜದ್‌ ಖಾನ್‌ ಹಾಗೂ ದೀಪಕ್‌ ಕುಮಾರ್‌ಯಾದವ್‌ ಬೈಕ್‌ ಚಲಾಯಿಸಿದ್ದರು.

ಹಿಮ್ಮುಖವಾಗಿ ಬೈಕಿನಲ್ಲಿ ಅತಿ ದೂರ ಚಲಿಸುವ ಹಳೆ ದಾಖಲೆಯನ್ನೂ ಉತ್ಸಾಹಿ ಸೈನಿಕರು ಅಳಿಸಿಹಾಕಿದರು. ಈ ಹಿಂದೆ 2014ರ ಅ.07ರಂದು ಡೇರ್‌ ಡೆವಿಲ್ಸ್‌ ತಂಡವು ಬೈಕಿನಲ್ಲಿ ಹಿಮ್ಮುಖವಾಗಿ ಚಲಿಸಿ202 ಕಿ.ಮೀ ದೂರವನ್ನು ಕ್ರಮಿಸಿತ್ತು. ಟಾರ್ನಡೋಸ್‌ ತಂಡದ ಪ್ರದೀಪ್‌ ಎಸ್.ಎಸ್‌ 204.4 ಕಿ.ಮೀ ದೂರವನ್ನು ಹಿಮ್ಮುಖವಾಗಿ ಕ್ರಮಿಸಿದರು.

ಹಿಂದಿನ ಸೀಟಿನಲ್ಲಿ ಮಂಡಿಯೂರಿ ಕುಳಿತು ಬೈಕ್‌ ಚಲಾಯಿಸುವ ಹಳೆ ದಾಖಲೆಯೂ ಪತನಗೊಂಡಿತು. 2015ರಲ್ಲಿ ಇದೇ ತಂಡದ ಸವಾರ 19 ಕಿ.ಮೀ ದೂರವನ್ನು 22 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದು ದಾಖಲೆಯಾಗಿತ್ತು. ಎಸ್‌.ವಿ.ರಿನು ಈ ರೀತಿ 305.4 ಕಿ.ಮೀ ದೂರವನ್ನು ಕ್ರಮಿಸಿದರು.

‘ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌, ಗಿನ್ನಿಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ ಹಾಗೂ ವರ್ಲ್ಡ್‌ ರೆಕಾರ್ಡ್ಸ್‌ ಸಂಸ್ಥೆಗಳ ಅಧಿಕಾರಿಗಳು ಸಾಹಸ ಪ್ರದರ್ಶನದ ಸ್ಥಳದಲ್ಲಿ ಹಾಜರಿದ್ದರು. ಈ ಸಾಹಸ ಪ್ರದರ್ಶನದ ವಿಡಿಯೋ ದಾಖಲೆಗಳನ್ನು ಅವರಿಗೆ ಒದಗಿಸಲಿದ್ದೇವೆ. ಒಂದು ತಿಂಗಳಲ್ಲಿ ಈ ದಾಖಲೆಗಳ ದೃಡೀಕರಣ ಪತ್ರ ಕೈಸೇರುವ ನಿರೀಕ್ಷೆ ಇದೆ’ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಗುರುಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶ್ವ ದಾಖಲೆ: ಹೊಸ ಪ್ರಯತ್ನಗಳು

* ಒಂದೇ ಬೈಕಿನಲ್ಲಿ 12 ಮಂದಿಯ ಮಾನವ ಪಿರಮಿಡ್‌ ಹೊತ್ತು 1 ಕಿ.ಮೀ ದೂರವನ್ನು 51.30 ಸೆಕೆಂಡ್‌ನಲ್ಲಿ ಕ್ರಮಿಸುವ ಹೊಸ ಪ್ರಯತ್ನವನ್ನು ಕ್ಯಾ.ಶಿವಂ ಸಿಂಗ್‌ ಮಾಡಿದರು.

* ಟಾರ್ನಡೋಸ್‌ ತಂಡ ಐದು ಬೈಕ್‌ಗಳಲ್ಲಿ 44 ಮಂದಿಯ ಪಿರಮಿಡ್‌ ಹೊತ್ತು 1 ಕಿ.ಮೀ ದೂರವನ್ನು 53.30 ಸೆಕೆಂಡ್‌ಗಳಲ್ಲಿ ಕ್ರಮಿಸಿತು. ಮಹಾಂತೇಶ್‌ ಕಲಾಮದಿ, ಬಿ.ಕೆ.ರಾಮಜಿ, ಅಭಿನ್‌ ಭುಜೆಲ್‌, ಮನೀಶ್‌ ಹಾಗೂ ಶೈಲೇಶ್‌ ಬೈಕ್‌ ಚಲಾಯಿಸಿದ್ದರು.

* 39 ಮಂದಿಯ ಪಿರಮಿಡ್‌ನೊಂದಿಗೆ ಏಳು ಬೈಕ್‌ಗಳಲ್ಲಿ ಸಾಗುವ ಮೂಲಕ 1200 ಮೀ ದೂರವನ್ನು 1 ನಿಮಿಷ 11 ಸೆಕೆಂಡ್‌ಗಳಲ್ಲಿ ಕ್ರಮಿಸುವ ಮೂಲಕ ಟಾರ್ನಡೋಸ್‌ ಹೊಸ ದಾಖಲೆ ಸೃಷ್ಟಿಸಿದೆ. ಈ ಪಿರಮಿಡ್‌ 209 ಇಂಚುಗಳಷ್ಟು ಎತ್ತರವಿತ್ತು. ಕ್ಯಾ.ಶಿವಂ ಸಿಂಗ್‌, ನೀಲಾಂಜನ್‌ ಬೇಜ್‌, ಮಲ್ಲಿಕಾರ್ಜುನ, ಜೆ.ಎಸ್‌.ಯಾದವ್‌, ಪ್ರದೀಪ್‌ ಎಸ್‌.ಎಸ್‌, ಘರ್ಗ್‌ ವಿಜಯ್‌, ಪಿ. ಮುರುಗೇಶನ್‌ ಬೈಕ್‌ ಚಲಾಯಿಸಿದ್ದರು.

* ಕಾಲಿನಲ್ಲೇ ಬೈಕ್‌ನ ಹ್ಯಾಂಡಲ್‌ ನಿಯಂತ್ರಿಸಿ 305.4 ಕಿ.ಮೀ ಕ್ರಮಿಸುವ ಹೊಸ ಪ್ರಯತ್ನವನ್ನು ಶೆವಾಲೆ ರವೀಂದ್ರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.