ADVERTISEMENT

ರಾಷ್ಟ್ರೀಯ ಬಾಕ್ಸಿಂಗ್‌: ಹಸಮುದ್ದೀನ್‌ಗೆ ಆಘಾತ; ರೋಹಿತ್‌ ಚಾಂಪಿಯನ್‌

ತಂಡ ಪ್ರಶಸ್ತಿ ಗೆದ್ದ ಸರ್ವಿಸಸ್‌; ರಾಜ್ಯದ ನಿಶಾಂತ್ ದೇವ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 16:57 IST
Last Updated 21 ಸೆಪ್ಟೆಂಬರ್ 2021, 16:57 IST
ನಿಶಾಂತ್ ದೇವ್ ಗೆಲುವಿನ ಸಂಭ್ರಮ
ನಿಶಾಂತ್ ದೇವ್ ಗೆಲುವಿನ ಸಂಭ್ರಮ   

ಬಳ್ಳಾರಿ: ಹಾಲಿ ಚಾಂಪಿಯನ್‌, ಸರ್ವಿಸಸ್‌ನ ಮೊಹಮ್ಮದ್ ಹಸಮುದ್ದೀನ್ ಅವರಿಗೆ ಆಘಾತ ನೀಡಿದ ದೆಹಲಿಯ ರೋಹಿತ್ ಮೋರ್ ಇಲ್ಲಿನಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಚಿನ್ನದ ಪದಕ ಗೆದ್ದುಕೊಂಡರು.

ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಡಿದ್ದ ಹಸಮುದ್ದೀನ್ 57 ಕೆಜಿ ವಿಭಾಗದಲ್ಲಿ ಭರವಸೆಯಿಂದಲೇ ಕಣಕ್ಕೆ ಇಳಿದಿದ್ದರು. ಆದರೆ ಬಲಶಾಲಿ ಪಂಚ್ ಮತ್ತು ಅಮೋಘ ತಂತ್ರಗಳ ಮೂಲಕ ರೋಹಿತ್ ಅವರು ಹಸಮುದ್ದೀನ್‌ ವಿರುದ್ಧ ಮೇಲುಗೈ ಸಾಧಿಸಿದರು. 5–0ಯಿಂದ ಬೌಟ್ ಗೆದ್ದರು.

ಅಸ್ಸಾಂನ ಶಿವ ಥಾಪಾ ಸರ್ವಿಸಸ್‌ನ ದಲ್ವೀರ್ ಸಿಂಗ್ ತೋಮರ್ ವಿರುದ್ಧ 5–0ಯಿಂದ ಗೆದ್ದು 63.5 ಕೆಜಿ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ADVERTISEMENT

92 ಕೆಜಿ ವಿಭಾಗದಲ್ಲಿ ಹಾಲಿ ಏಷ್ಯನ್ ಚಾಂಪಿಯನ್‌, ಸರ್ವಿಸಸ್‌ನ ಸಂಜೀತ್‌ ಹರಿಯಾಣದ ನವೀನ್ ಕುಮಾರ್ ಎದುರು ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು. ಸರ್ವಿಸಸ್‌ನ ದೀಪಕ್‌ (51 ಕೆಜಿ), ಆಕಾಶ್‌ (54 ಕೆಜಿ), ಆಕಾಶ್‌ (67 ಕೆಜಿ), ಸುಮಿತ್‌(75 ಕೆಜಿ), ಸಚಿನ್ ಕುಮಾರ್ (80 ಕೆಜಿ), ಲಕ್ಷ್ಯ (86 ಕೆಜಿ), ನರೇಂದ್ರ (92 ಕೆಜಿ) ಅವರಿಗೂ ಚಿನ್ನದ ಪದಕ ಒಲಿಯಿತು. ದೀಪಕ್ ಅವರು ಚಾಂಪಿಯನ್‌ಷಿಪ್‌ನ ಶ್ರೇಷ್ಠ ಬಾಕ್ಸರ್ ಎನಿಸಿಕೊಂಡರು.

ಎಂಟು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚು ಗೆದ್ದುಕೊಂಡ ಸರ್ವಿಸಸ್ ತಂಡ ಚಾಂಪಿಯನ್‌ ಪಟ್ಟ ತನ್ನಲ್ಲೇ ಉಳಿಸಿಕೊಂಡಿತು. ಎರಡು ಚಿನ್ನ, ಮೂರು ಬೆಳ್ಳೀ ಮತ್ತು ಎರಡು ಕಂಚಿನ ಪದಕ ಗೆದ್ದ ರೈಲ್ವೇಸ್‌ ಎರಡನೇ ಸ್ಥಾನ ಗಳಿಸಿದರೆ ಒಂದು ಚಿನ್ನ, ನಾಲ್ಕು ಕಂಚು ಗಳಿಸಿದ ದೆಹಲಿ ಮೂರನೇ ಸ್ಥಾನ ಗಳಿಸಿತು.

60 ಕೆಜಿ ವಿಭಾಗದಲ್ಲಿ ರೈಲ್ವೇಸ್‌ನ ವರಿಂದರ್ ಸಿಂಗ್ ಸರ್ವಿಸಸ್‌ನ ಎತಾಶ್ ಖಾನ್ ವಿರುದ್ಧ ಗೆದ್ದು ಚಿನ್ನ ಗಳಿಸಿದರೆ 48 ಕೆಜಿ ವಿಭಾಗದಲ್ಲಿ ರೈಲ್ವೇಸ್‌ನ ಗೋವಿಂದ್ ಸಹಾನಿ ಚಂಡೀಗಢದ ಕುಲದೀಪ್ ಅವರನ್ನು ಮಣಿಸಿ ಚಾಂಪಿಯನ್ ಆದರು. 71 ಕೆಜಿ ವಿಭಾಗದಲ್ಲಿ ರಾಜ್ಯದ ನಿಶಾಂತ್ ದೇವ್ ಅವರು ಅಮಿತ್ ಕುಮಾರ್ ವಿರುದ್ಧ ಗೆದ್ದು ಪ್ರಶಸ್ತಿ ಗಳಿಸಿದರು.

ಚಿನ್ನ ಗೆದ್ದ ಎಲ್ಲರೂ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದರು. ಚಾಂ‍ಪಿಯನ್‌ಷಿಪ್ ಅಕ್ಟೋಬರ್ 24ರಿಂದ ನವೆಂಬರ್ 6ರ ವರೆಗೆ ಸರ್ಬಿಯಾದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.