ADVERTISEMENT

ನನ್ನ ಸಾಧನೆಗೆ ನೀರಜ್‌ ಚೋಪ್ರಾ ಸ್ಫೂರ್ತಿ: ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಸುಮಿತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2021, 10:21 IST
Last Updated 3 ಸೆಪ್ಟೆಂಬರ್ 2021, 10:21 IST
ಸುಮಿತ್‌ ಅಂತಿಲ್‌
ಸುಮಿತ್‌ ಅಂತಿಲ್‌    

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್‌ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸುಮಿತ್‌ ಅಂತಿಲ್‌ ಅವರು ತಮ್ಮ ಸಾಧನೆಯ ಶ್ರೇಯವನ್ನು ನೀರಜ್‌ ಚೋಪ್ರಾ ಅವರಿಗೆ ಅರ್ಪಿಸಿದ್ದಾರೆ.

ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರು,‌ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತ ಅಥ್ಲೀಟ್‌ಗಳನ್ನು ಶುಕ್ರವಾರ ಸನ್ಮಾನಿಸಿದರು.

ಈ ವೇಳೆ ಮಾತನಾಡಿರುವ ಸುಮಿತ್‌, ʼಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್‌ ಚೋಪ್ರಾ ಪದಕ ಜಯಿಸಿದ್ದು, ಪದಕ ಗೆಲ್ಲಲು ನನ್ನಲ್ಲಿ ಒತ್ತಡ ಹೆಚ್ಚಿಸಿತು. ಆದರೆ, ಅವರು (ನೀರಜ್‌) ನೀನು ತುಂಬಾ‌ ಬಲಶಾಲಿ ಮತ್ತು ಸಮರ್ಥವಾಗಿರುವೆ ಎಂದು ನನಗೆ ಯಾವಾಗಲೂ ಹೇಳುವ ಮೂಲಕ ಸ್ಫೂರ್ತಿ ತುಂಬುತ್ತಿದ್ದರು.‌ ನನ್ನ ಸಾಧನೆಯಲ್ಲಿ ನೀರಜ್ ಅವರ ಪಾತ್ರ ದೊಡ್ಡದುʼ ಎಂದು ಹೇಳಿದ್ದಾರೆ.

ADVERTISEMENT

ʼನಾನು ನಕಾರಾತ್ಮಕ ಕಾಮೆಂಟ್‌ಗಳು ಮತ್ತು ನನ್ನ ಅಂಗವೈಕಲ್ಯದ ಬಗ್ಗೆ ಮಾತನಾಡುವವರಿಗೆ ಪ್ರತಿಕ್ರಿಯಿಸುವುದಿಲ್ಲ. ಜಾವೆಲಿನ್‌ ಇದೀಗ ದೇಶದಲ್ಲಿ ಉತ್ತೇಜನ ಪಡೆದುಕೊಂಡಿದೆ. ನನ್ನ ಸಾಧನೆ ಬಳಿಕ ಐವತ್ತು ಮಂದಿ ನನ್ನ ಕೋಚ್‌ ಬಳಿ ತರಬೇತಿ ಪಡೆಯಲು ಮುಂದಾಗಿದ್ದಾರೆ. ನಾನೀಗ ಸ್ಟಾರ್‌ ಎನಿಸುತ್ತಿದೆʼ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ಯಾರಾಲಿಂಪಿಕ್ಸ್‌ ಫೈನಲ್‌ನಲ್ಲಿ ಬರೋಬ್ಬರಿ 68.55 ಮೀಟರ್‌ ದೂರ ಜಾವೆಲಿನ್‌ ಎಸೆದ ಸುಮಿತ್‌ ಪ್ಯಾರಾ ಕ್ರೀಡೆಯಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದರು.

ನೀರಜ್‌ ಚೋಪ್ರಾ 87.58 ಮೀಟರ್‌ ದೂರ ಜಾವೆಲಿನ್ ಎಸೆದು ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಸಾಧನೆ ಮಾಡಿದ ಬಳಿಕ, ಭಾರತದಲ್ಲಿ ʼಜಾವೆಲಿನ್ ಎಸೆತʼದ ಜನಪ್ರಿಯತೆ ಹೆಚ್ಚಾಗಿದೆ. ಸದ್ಯದ ಪ್ಯಾರಾಲಿಂಪಿಕ್‌ನಲ್ಲಿಯೂ ಪದಕಗಳು ಬಂದಿರುವುದರಿಂದ ಅದು ಮತ್ತಷ್ಟು ಸುಧಾರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.