ADVERTISEMENT

ಸ್ವಂತ ಸೈಕಲ್ ಇಲ್ಲದೇ ಇದ್ದರೂ ರಾಷ್ಟ್ರಮಟ್ಟದ ಸಾಧನೆ: ಪವಿತ್ರಾಗೆ ಸೈಕಲ್‌ ಕೊಡುಗೆ

ದೂರವಾಣಿ ಕರೆಗೆ ಲಭಿಸಿದ ಸ್ಪಂದನೆ; ರಾಷ್ಟ್ರಮಟ್ಟದ ಸೈಕ್ಲಿಸ್ಟ್‌ ಕನಸು ನನಸು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 12:57 IST
Last Updated 24 ಸೆಪ್ಟೆಂಬರ್ 2021, 12:57 IST
ಹೊಸ ಸೈಕಲ್‌ನೊಂದಿಗೆ ಪವಿತ್ರಾ ಕುರ್ತಕೋಟಿ –ಪ್ರಜಾವಾಣಿ ಚಿತ್ರ
ಹೊಸ ಸೈಕಲ್‌ನೊಂದಿಗೆ ಪವಿತ್ರಾ ಕುರ್ತಕೋಟಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸ್ವಂತ ಸೈಕಲ್ ಇಲ್ಲದೇ ಇದ್ದರೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ಪವಿತ್ರಾ ಕುರ್ತಕೋಟಿ ಅವರಿಗೆ ಶುಕ್ರವಾರ ಸಂಭ್ರಮದ ದಿನ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸೈಕಲ್ ಕೊಡುಗೆಯಾಗಿ ಪಡೆದ ಅವರಿಗೆ ಕನಸು ನನಸಾದ ಖುಷಿ.

ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದ ನಿವಾಸಿ ಅಶೋಕ್ ಮತ್ತು ರೇಣುಕಾ ದಂಪತಿ ಮಗಳಾದ ಪವಿತ್ರಾ ಐದನೇ ತರಗತಿಯಿಂದ ಸೈಕ್ಲಿಂಗ್‌ ಕ್ರೀಡಾನಿಲಯದಲ್ಲಿ ಕಲಿಯುತ್ತಿದ್ದಾರೆ. ಈಗ ವಿಡಿಎಫ್‌ಟಿ ಬಾಲಕಿಯರ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿನಿ. ತಂದೆ ರೈತ ಕಾರ್ಮಿಕ, ತಾಯಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದ ಅಡುಗೆ ಸಹಾಯಕಿ. ಸೈಕ್ಲಿಂಗ್ ಕ್ರೀಡಾನಿಲಯದಲ್ಲಿದ್ದು ಕಲಿತರೂ ಗುಣಮಟ್ಟದ ಸ್ವಂತ ಸೈಕಲ್ ಇಲ್ಲದ ಕಾರಣ ವೈಯಕ್ತಿಕ ಅಭ್ಯಾಸ ಕಷ್ಟಕರವಾಗಿತ್ತು. ಕ್ರೀಡಾ ಪೋಷಕರ ನೆರವಿನಿಂದ ಸ್ಪರ್ಧೆಗಳಿಗೆ ಹೋಗುತ್ತಿದ್ದರು.

ಈ ನಡುವೆ ವಾಹಿನಿಯೊಂದರಲ್ಲಿ ಮುಖ್ಯಮಂತ್ರಿಗಳು ನೇರಪ್ರಸಾರದಲ್ಲಿದ್ದಾಗ ಕರೆ ಮಾಡಿದ ಪವಿತ್ರಾ ಸಂಕಟ ತೋಡಿಕೊಂಡಿದ್ದರು. ಗುಣಮಟ್ಟದ ಸೈಕಲ್ ಕೊಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಎಂಬಸಿ ಗ್ರೂಪ್, ಬ್ಲಾಸಂ ಆಸ್ಪತ್ರೆ ಮತ್ತು ಮಧುಸೂದನ್ ಅವರ ನೆರವಿನೊಂದಿಗೆ ಸೈಕಲ್‌ ವ್ಯವಸ್ಥೆ ಮಾಡಿದ್ದರು.

ADVERTISEMENT

ಕೆನಡಾದಿಂದ ತರಿಸಿಕೊಂಡಿರುವ ₹ 5 ಲಕ್ಷ ಬೆಲೆಯ ಆ್ಯರ್ಗನ್‌-8 ಇ-119 ಸೈಕಲ್‍ ಶುಕ್ರವಾರ ಅವರಿಗೆ ಹಸ್ತಾಂತರಿಸಲಾಯಿತು. ಪಂಜಾಬ್‌ನ ಪಟಿಯಾಲದಲ್ಲಿ ನಡೆಯಲಿರುವ ರಾಷ್ಟ್ರೀಯ ಶಿಬಿರದಲ್ಲಿ ಅವರು ಈ ಸೈಕಲ್ ಬಳಸಲಿದ್ದಾರೆ.

2018ರಲ್ಲಿ ಕುರುಕ್ಷೇತ್ರದಲ್ಲಿ ನಡೆದ ರಾಷ್ಟ್ರೀಯ ರೋಡ್‌ಸೈಕ್ಲಿಂಗ್‌ನ 15 ಕಿಲೋಮೀಟರ್ಸ್ ರೇಸ್‌ನಲ್ಲಿ ಐದನೇ ಸ್ಥಾನ ಗಳಿಸಿದ್ದ ಪವಿತ್ರಾ ಮುಂದಿನ ವರ್ಷ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಎಂ.ಟಿ.ಬಿ. ಸೈಕ್ಲಿಂಗ್‌ನಲ್ಲಿ ಒಂಬತ್ತನೇ ಸ್ಥಾನ ಗಳಿಸಿದ್ದರು. ಈ ವರ್ಷ ಮೈಸೂರಿನಲ್ಲಿ ನಡೆದ ರಾಜ್ಯ ಮೌಂಟೇನ್ ಬೈಕ್‍ ಚಾಂಪಿಯನ್‌ಷಿಪ್‌ ಹಾಗೂ ಗದಗದಲ್ಲಿ ನಡೆದ ರಾಷ್ಟ್ರೀಯ ಮೌಂಟೇನ್‍ ಬೈಕ್‍ ಚಾಂಪಿಯನ್‌ಷಿಪ್‌ನಲ್ಲಿ ಮೂರನೆಯವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.