ADVERTISEMENT

Paralympics: ಭಾರತಕ್ಕಿಂದು 4 ಪದಕ, ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಅಭಿನಂದನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2021, 6:11 IST
Last Updated 30 ಆಗಸ್ಟ್ 2021, 6:11 IST
ದೇವೇಂದ್ರ ಝಝಾರಿಯಾ ಜತೆ ಪ್ರಧಾನಿ ಮೋದಿ (ಸಂಗ್ರಹ ಚಿತ್ರ: ಕೃಪೆ – ಮೋದಿ ಅವರ ಟ್ವಿಟರ್ ಖಾತೆ)
ದೇವೇಂದ್ರ ಝಝಾರಿಯಾ ಜತೆ ಪ್ರಧಾನಿ ಮೋದಿ (ಸಂಗ್ರಹ ಚಿತ್ರ: ಕೃಪೆ – ಮೋದಿ ಅವರ ಟ್ವಿಟರ್ ಖಾತೆ)   

ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಇಂದು (ಸೋಮವಾರ) ಭಾರತಕ್ಕೆ ಒಂದು ಚಿನ್ನ, 2 ಬೆಳ್ಳಿ, ಒಂದು ಕಂಚಿನ ಪದಕ ದೊರೆತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

‘ಅವನಿ ಲೇಖರಾ ಅವರು ಕಠಿಣ ಪರಿಶ್ರಮದಿಂದ ಮತ್ತು ಅರ್ಹವಾಗಿಯೇ ಚಿನ್ನದ ಪದಕ ಗಳಿಸಿರುವುದಕ್ಕೆ ಅಭಿನಂದನೆಗಳು. ಶೂಟಿಂಗ್ ಕುರಿತ ನಿಮ್ಮ (ಅವನಿ) ಉತ್ಸಾಹ ಮತ್ತು ಪರಿಶ್ರಮದ ಸ್ವಭಾವದಿಂದಾಗಿ ಇದು ಸಾಧ್ಯವಾಗಿದೆ. ಇದು ಭಾರತೀಯ ಕ್ರೀಡೆಗೆ ವಿಶೇಷ ಕ್ಷಣ. ನಿಮ್ಮ ಭವಿಷ್ಯದ ಸಾಧನೆಗಳಿಗೆ ಶುಭವಾಗಲಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ಯೋಗೇಶ್ ಕಥೂನಿಯಾ ಅವರಿಂದ ಅದ್ಭುತ ಪ್ರದರ್ಶನ. ಅವರು ಬೆಳ್ಳಿ ಪದಕ ಜಯಿಸಿರುವುದು ಸಂತಸ ತಂದಿದೆ. ಅವರ ಅನುಸರಣೀಯ ಯಶಸ್ಸು ಉದಯೋನ್ಮುಖ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದೆ. ಅವರಿಗೆ ಅಭಿನಂದನೆಗಳು. ಭವಿಷ್ಯದ ಸಾಧನೆಗಳಿಗೆ ಅವರಿಗೆ ಶುಭ ಹಾರೈಕೆಗಳು’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಧಾನಿ ಉಲ್ಲೇಖಿಸಿದ್ದಾರೆ.

‘ದೇವೇಂದ್ರ ಝಝಾರಿಯಾ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನಮ್ಮ ಅನುಭವಿ ಕ್ರೀಡಾಪಟುಗಳಲ್ಲಿ ಒಬ್ಬರಾದ ಅವರೂ ಬೆಳ್ಳಿ ಪದಕ ಜಯಿಸಿದ್ದಾರೆ. ದೇವೇಂದ್ರ ಅವರು ಭಾರತವು ನಿರಂತರವಾಗಿ ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆಗಳು’ ಎಂದು ಪ್ರಧಾನಿ ಶುಭ ಹಾರೈಸಿದ್ದಾರೆ.

‘ಸುಂದರ್ ಸಿಂಗ್ ಗುರ್ಜರ್ ಅವರು ಕಂಚಿನ ಪದಕ ಗೆದ್ದಿರುವುದು ದೇಶಕ್ಕೆ ಸಂತಸ ನೀಡಿದೆ. ಅವರು ಗಮನಾರ್ಹ ಧೈರ್ಯ ಮತ್ತು ಸಮರ್ಪಣಾ ಮನೋಭಾವವನ್ನು ತೋರಿದ್ದಾರೆ. ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಸೋಮವಾರ ಮಹಿಳೆಯರ 10 ಮೀಟರ್ ಏರ್‌ ರೈಫಲ್‌ ಸ್ಟ್ಯಾಂಡಿಂಗ್ ಎಸ್‌ಎಚ್‌1 ವಿಭಾಗದಲ್ಲಿ ಅವನಿ ಲೇಖರಾ ಚಿನ್ನದ ಪದಕ ಗೆದ್ದಿದ್ದಾರೆ. ಜಾವೆಲಿನ್ ಥ್ರೋದಲ್ಲಿ ದೇವೇಂದ್ರ ಝಝಾರಿಯಾ ಬೆಳ್ಳಿ ಪದಕ ಜಯಿಸಿದ್ದಾರೆ. ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕಥೂನಿಯಾಗೆ ಬೆಳ್ಳಿ ಪದಕ, ಪುರುಷರ ಜಾವೆಲಿನ್‌ ಥ್ರೋ ‘ಎಫ್‌46’ರಲ್ಲಿ ಸುಂದರ್ ಸಿಂಗ್ ಗುರ್ಜರ್ ಕಂಚಿನ ಪದಕ ಗೆದ್ದಿದ್ದಾರೆ. ಭಾನುವಾರ ಎರಡು ಬೆಳ್ಳಿ ಪದಕ ದೊರೆತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.