ADVERTISEMENT

Pv Web Exclusive-ನೀರಜ್ ಜೀವನ ಬಾಲಿವುಡ್ ಸಿನಿಮಾ ಕಥೆಯಾದ್ರೆ ಹೇಗಿರುತ್ತೆ?

ವಿಶಾಖ ಎನ್.
Published 19 ಆಗಸ್ಟ್ 2021, 10:02 IST
Last Updated 19 ಆಗಸ್ಟ್ 2021, 10:02 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ಆಟದ ಮನೆ

***

ಹಿಂದಿ ಚಿತ್ರರಂಗವು ಕ್ರೀಡಾವಸ್ತುಗಳ ಸಿನಿಮಾಗಳ ಕೆಲವು ಮಾದರಿಗಳನ್ನು ಸೃಷ್ಟಿಸತೊಡಗಿ ದಶಕಗಳೇ ಕಳೆದಿವೆ. ಆದರೂ ಸಹಜವಾದ ಕ್ರೀಡಾಪಟುಗಳ ಬದುಕನ್ನು ತೆರೆಮೇಲೆ ರಿಯಲಿಸ್ಟಿಕ್ ಆಗಿ ತೋರಿಸಲು ಈ ಮಾಧ್ಯಮಕ್ಕೆ ಸಾಧ್ಯವಾಗಿಲ್ಲ. ನೀರಜ್ ಚೋಪ್ರಾ ಚಿತ್ರಕಥೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಅಣಕು ಈ ವಿಷಯದಲ್ಲಿ ಚಿಂತಿಸಲು ಪ್ರೇರಣೆ ನೀಡುವಂತಿದೆ.

ADVERTISEMENT

***

ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯ ಸೀನಿಯರ್ ಪ್ರೊಡ್ಯೂಸರ್ ಮೌರ್ಯ ಮೊಂಡಲ್ ಆಗಸ್ಟ್‌ 9ರಂದು ‘ನೀರಜ್ ಚೋಪ್ರಾ ಬಯೋಪಿಕ್’ ಎಂಬ ಕಾಲ್ಪನಿಕ ಚಿತ್ರಕಥೆಯೊಂದನ್ನು ಫೇಸ್‌ಬುಕ್‌ನಲ್ಲಿ ಬರೆದರು. ಅದರ ಸಾರಾಂಶ ಹೀಗಿದೆ:

‘ಓಪನಿಂಗ್ ಸೀನ್‌ನಲ್ಲಿ ಹರಿಯಾಣದ ಸಣ್ಣ ಹಳ್ಳಿ. ಕೆಲವು ಹುಡುಗರು ಕ್ರಿಕೆಟ್ಆಡುತ್ತಿದ್ದಾರೆ. ಒಬ್ಬ ಜೋರಾಗಿ ಸಿಕ್ಸರ್ ಹೊಡೆದ. ಚೆಂಡು ಹೊಲಕ್ಕೆ ಹೋಗಿ ಬಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗನನ್ನು ಉದ್ದೇಶಿಸಿ ಚೆಂಡನ್ನು ಎಸೆಯುವಂತೆ ಕ್ರಿಕೆಟ್ ಆಟಗಾರರು ಕೇಳಿದರು. ಅವರಲ್ಲಿ ಕೆಲವರು ಅವನಿಗೆ ಇಷ್ಟು ದೂರಕ್ಕೆ ಚೆಂಡನ್ನು ಎಸೆಯಲು ಎಲ್ಲಿ ಸಾಧ್ಯ ಎಂದು ಗೇಲಿ ಮಾಡಿದರು. ಹುಡುಗನಲ್ಲಿ ಎಲ್ಲಿತ್ತೋ ರೋಷ, ಚೆಂಡನ್ನು ಎಸೆದ. ಅದು ಫೀಲ್ಡಿನ ಪಿಚ್‌ನಲ್ಲಿದ್ದ ಸ್ಟಂಪ್‌ಗಳನ್ನೇ ಹಾರಿಸಿತು. ಅಷ್ಟು ದೂರದಿಂದ ಅವನಿಟ್ಟ ಗುರಿ ನೋಡಿ ಅವಾಕ್ಕಾದವರಲ್ಲಿ ಅಲ್ಲಿಯೇ ಸಾಗಿಹೋಗುತ್ತಿದ್ದ ಗಿರಿರಾಜ್‌ರಾವ್ ಕೂಡ ಒಬ್ಬರು. ಅವರು ಅಥ್ಲೆಟಿಕ್ಸ್ ಅಕಾಡೆಮಿಯ ತರಬೇತುದಾರ. ಈ ಹುಡುಗನನ್ನು ತಮ್ಮ ಅಥ್ಲೆಟಿಕ್ಸ್‌ ಕ್ಲಬ್‌ಗೆ ಸೇರಿಸಿಕೊಂಡು ತರಬೇತಿ ಕೊಟ್ಟರೆ ಹೇಗೆ ಎಂಬ ಆಲೋಚನೆ ಥಟ್ಟನೆ ಮೂಡಿತು. ಹುಡುಗನ ಮನೆಗೆ ಹೋದರು. ಅವನು ಒಲ್ಲೆ ಎಂದ. ಹೊಲದಲ್ಲಿ ಕೆಲಸ ಮಾಡಿ ಅಪ್ಪ–ಅಮ್ಮನಿಗೆ ನೆರವಾಗಬೇಕು ಎಂದೂ ತನ್ನ ಬಡತನವನ್ನೂ ಹೇಳಿಕೊಂಡ. ತರಬೇತಿಗೆ ಬೇಕಾದ ಸ್ಪೋರ್ಟ್ಸ್‌ ಶೂ ಕೊಳ್ಳಲು ಕೂಡ ಹಣವಿಲ್ಲವೆಂದ. ಗಿರಿರಾಜ್‌ರಾವ್ ಅದಕ್ಕೆಲ್ಲ ವ್ಯವಸ್ಥೆ ಮಾಡುವ ಭರವಸೆ ನೀಡಿ, ಅಪ್ಪನನ್ನು ಒಪ್ಪಿಸಿದರು.

‘ಹುಡುಗ ಹರಿದ ಬಟ್ಟೆ ಹಾಕಿಕೊಂಡು ಅಕಾಡೆಮಿಗೆ ಹೋದ. ಅಲ್ಲಿ ಸಹಕ್ರೀಡಾರ್ಥಿಗಳು ಗೇಲಿ ಮಾಡಿದರು. ಗಿರಿರಾಜ್‌ರಾವ್ ಅವರನ್ನೆಲ್ಲ ಬೈಯ್ದು ಸುಮ್ಮನಾಗಿಸಿದರು. ಅವನು ಜಾವೆಲಿನ್ ಎಸೆದ ಮೇಲೆ, ಅದರ ದೂರ ನೋಡಿ ಗೇಲಿ ಮಾಡಿದವರೆಲ್ಲ ಬಾಯಿಮುಚ್ಚಿದರು.

ಹುಡುಗ ಬೆಳೆದು ದೊಡ್ಡವನಾಗಿ ಅಕ್ಷಯ್ ಕುಮಾರ್ ಆದ. ಸೇನೆಯಲ್ಲಿ ಕೆಲಸ. ರಾಷ್ಟ್ರಮಟ್ಟದ ಜಾವೆಲಿನ್ ಥ್ರೋ ಸ್ಪರ್ಧಿ ಆಗಿದ್ದ. ಒಮ್ಮೆ ಅವನು ಸಾಗುತ್ತಿರುವಾಗ ಗೂಂಡಾಗಳು ಕಿಯಾರಾ ಅಡ್ವಾಣಿಯನ್ನು ಅಟ್ಟಿಸಿಕೊಂಡು ಬರುತ್ತಿದ್ದರು. ಕ್ಷಣದಲ್ಲೇ ಗೂಂಡಾಗಳ ಸುತ್ತ ಜಾವೆಲಿನ್‌ಗಳು ಬಾಣಗಳಂತೆ ನಾಟಿದವು. ಅವನ್ನೆಲ್ಲ ಎಸೆದು ಕಿಯಾರಾಳನ್ನು ಕಾಪಾಡಿದ್ದು ಅಕ್ಷಯ್ ಕುಮಾರ್. ಮೊದಲ ನೋಟದಲ್ಲೇ ಪ್ರೇಮಾಂಕುರವಾದರೂ ಜಾವೆಲಿನ್ ಥ್ರೋನಲ್ಲಿ ದೇಶಕ್ಕೆ ವಿಶ್ವಮಟ್ಟದಲ್ಲಿ ಪದಕ ತರುವುದು, ಒಲಿಂಪಿಕ್ಸ್‌ ಪದಕ ಗೆಲ್ಲುವುದು ತನ್ನ ಗುರಿ ಎಂದು ಹೇಳಿದ. ಪದಕ ತಂದಮೇಲೆಯೇ ಸರಸವಾಡಿದರಾಯಿತು ಎಂದು ನಾಯಕನಿಗೆ ಕಿಯಾರಾ ಬೆಂಬಲಕ್ಕೆ ನಿಂತಳು.

‘ಮಹತ್ವದ ಸಂದರ್ಭದಲ್ಲಿ ಪಾಕಿಸ್ತಾನವು ಭಾರತದ ಮೇಲೆ ಯುದ್ಧ ಘೋಷಿಸಿತು. ಆಗ ದೇಶವೇ ಮುಖ್ಯ ಎಂದು ಅಕ್ಷಯ್ ಕುಮಾರ್ ಅಲ್ಲಿಗೆ ಹೋಗಬೇಕೆಂದರು. ಸೇನಾಧಿಕಾರಿ ಪದಕ ಗೆಲ್ಲುವುದೇ ಮುಖ್ಯ, ಆ ಕಡೆ ನಿಗಾವಹಿಸುವಂತೆ ಹೇಳಿದರೂ ದೇಶಾಭಿಮಾನದ ಹಟಕ್ಕೆ ಕೊನೆಗೂ ಕರಗದೇ ವಿಧಿಯಿರಲಿಲ್ಲ. ಯುದ್ಧದಲ್ಲಿ ಗುಂಡುಗಳೆಲ್ಲ ಖಾಲಿಯಾದ ಮೇಲೆ ಜಾವೆಲಿನ್‌ಗಳನ್ನೇ ಬಳಸಿ ಶತ್ರುಪಡೆಯನ್ನು ಧ್ವಂಸ ಮಾಡಿ ಬರುವಷ್ಟರಲ್ಲಿ ಅಕ್ಷಯ್‌ಕುಮಾರ್‌ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಇನ್ನು ಜಾವೆಲಿನ್ ಥ್ರೋ ಸಾಧ್ಯವಾಗದ ಮಾತು ಎಂದುಬಿಟ್ಟರು.

‘ಅಕ್ಷಯ್‌ ಪದಕ ಗೆಲ್ಲುವ ಕನಸನ್ನು ಕಮರಲು ಬಿಡಲಿಲ್ಲ. ಇಷ್ಟ ದೇವರುಗಳಿಗೆ ಅಭಿಮಾನಿ ದೇವರುಗಳು ಸಲ್ಲಿಸಿದ ಪ್ರಾರ್ಥನೆ ಸುಳ್ಳಾಗಲಿಲ್ಲ. ಕೊನೆಯಲ್ಲಿ ಒಲಿಂಪಿಕ್ಸ್ ಪದಕ. ಎಲ್ಲವೂ ಶುಭಂ...’

ತಮಾಷೆಯಾಗಿ ಕಾಣುವ ಈ ಚಿತ್ರಕಥೆಯು ಭಾರತದ ಹಿಂದಿ ಚಿತ್ರರಂಗ ಕ್ರೀಡಾವಸ್ತುವಿನ ಸಿನಿಮಾಗಳನ್ನು ಹೇಗೆಲ್ಲ ಕಟ್ಟಿವೆ, ಕಟ್ಟುತ್ತಿವೆ ಎನ್ನುವುದರ ಅರ್ಥಪೂರ್ಣ ಅಣಕು.

ಕ್ರೀಡಾಪಟುಗಳು ಅತ್ತರೆ ಅದು ಯಶಸ್ಸಲ್ಲ. ಅವರನ್ನು ನೋಡುವ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುವುದೇ ಯಶಸ್ಸು ಎನ್ನುವುದು ಹಿಂದಿ ಕ್ರೀಡಾ ಚಿತ್ರಗಳ ಜಾಯಮಾನವಾಗಿದ್ದೇ ಹೆಚ್ಚು. ಚಲನಚಿತ್ರಗಳಿಗೆ ಪೌರಾಣಿಕ, ಸಾಮಾಜಿಕ ವಸ್ತುವಿಷಯಗಳು ಹೂರಣವಾಗುತ್ತಾ ಬಂದು ಎಷ್ಟೋ ವರ್ಷಗಳವರೆಗೆ ಕ್ರೀಡಾ ಚಿತ್ರಗಳೆಂಬ ಪ್ರಕಾರವೇ ಮೂಡಿರಲಿಲ್ಲ. ಅದಕ್ಕೆ ಇರುವ ಸಾಕ್ಷ್ಯಚಿತ್ರ ಗುಣವೂ ಅಂಥದೊಂದು ಸಾಧ್ಯತೆಯನ್ನು ತೆರೆಮೇಲೆ ಕಾಣಿಸುವ ಆಲೋಚನೆ ತಡವಾಗಿ ಮೂಡಲು ಕಾರಣವಾಗಿದ್ದಿರಬೇಕು. ಭಾರತದ ಕ್ರೀಡಾಚಿತ್ರಗಳಲ್ಲಿ ಎರಡು ಬಗೆಯ ಹೆಣಿಗೆ ಇದೆ. ‘ಚಕ್ ದೇ ಇಂಡಿಯಾ’, ‘ಸುಲ್ತಾನ್’, ‘ಭಾಗ್ ಮಿಲ್ಖಾ ಭಾಗ್’, ‘ಮೇರಿ ಕೋಮ್’, ‘ಗೋಲ್ಡ್’ ತರಹದ ಕ್ರೀಡೆಯನ್ನೇ ಕೇಂದ್ರಭಾಗವಾಗಿಸಿಕೊಂಡಂಥ ಚಿತ್ರಗಳದ್ದು ಒಂದು ಬಗೆ. ‘ದಂಗಲ್’, ‘ಲಗಾನ್’ ತರಹ ಕ್ರೀಡಾವಸ್ತುವಿಗೆ ಸಮಾಜೋ–ರಾಜಕೀಯ ಅಥವಾ ಸಾಂಸ್ಕೃತಿಕ ಚೌಕಟ್ಟನ್ನು ದಕ್ಕಿಸಿಕೊಟ್ಟ ಸಿನಿಮಾಗಳ ಇನ್ನೊಂದು ಬಗೆ.

ಬಾಕ್ಸ್‌ಆಫೀಸ್‌ನಲ್ಲಿ ‘ದಂಗಲ್’ನ ವಹಿವಾಟು ಚೆನ್ನಾಗಿತ್ತು. ಆದರೆ, ಅದು ಕ್ರೀಡಾ ಸಂಸ್ಕೃತಿಯನ್ನು ಇಬ್ಬರು ಹೆಣ್ಣುಮಕ್ಕಳು ಹಾಗೂ ಅವರ ತಂದೆಯ ಭಾವನಾತ್ಮಕ ಮೆಲೋಡ್ರಾಮಾದ ಮಿತಿಗೆ ಒಳಪಡಿಸಿದ್ದೂ ನಿಜ. ಹರಿಯಾಣದಲ್ಲಿ ಯಾವುದಾದರೂ ಹೆಣ್ಣುಮಕ್ಕಳು ಬಾಲ್ಯದಲ್ಲಿ ಕುಸ್ತಿಯಲ್ಲಿ ಏನಾದರೂ ಸಾಧನೆ ಮಾಡಿದರೆ ಮ್ಯಾಟ್ ಅನ್ನೋ ಮತ್ತಿತರ ಪರಿಕರವನ್ನೋ ಬಹುಮಾನವಾಗಿ ಕೊಡುವ ಪರಿಪಾಠ ವರ್ಷಗಳಿಂದಲೂ ಇದೆ. ಸಾಕ್ಷಿ ಮಲಿಕ್ ಒಲಿಂಪಿಕ್ಸ್ ಪದಕ ಗೆದ್ದಮೇಲೆ ಹೆಣ್ಣುಮಕ್ಕಳ ಮಹತ್ವದ ಕುರಿತು ಅರಿವು ಮೂಡಿಸುವ ರಾಜ್ಯದ ಯೋಜನೆಯ ರಾಯಭಾರಿಯಾದರು. ದಶಕಗಳಿಂದ ಇದ್ದ ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳನ್ನು ತಗ್ಗಿಸಲು ಅವರ ಭಾಗವಹಿಸುವಿಕೆ ಕಾರಣವಾಗಿತ್ತು. 1000 ಗಂಡುಮಕ್ಕಳಿಗೆ 900 ಹೆಣ್ಣುಮಕ್ಕಳು ಇರುವ ರೀತಿ ಅನುಪಾತದಲ್ಲಿ ಸುಧಾರಣೆ ಕಂಡಿದ್ದು ಈ ಯೋಜನೆಯ ಯಶಸ್ಸು ಎಂದೇ ಹೇಳಲಾಗುತ್ತದೆ. 37ನೇ ವಯಸ್ಸಿನಲ್ಲಿ ರಿತಿಕಾ ಸಲಾಥಿಯಾ ಜಮ್ಮು ಹಾಗೂ ಕಾಶ್ಮೀರವನ್ನು ಕುಸ್ತಿಯಲ್ಲಿ ಪ್ರತಿನಿಧಿಸಿದ ಮೊದಲ ಮಹಿಳೆ ಎನಿಸಿಕೊಂಡಿದ್ದೂ ಇಂತಹ ಪ್ರೇರಣಾ ಕಥನಗಳನ್ನು ಕಂಡುಂಡೇ.

ಇಂತಹ ಸೂಕ್ಷ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಜನಪ್ರಿಯ ಸಿನಿಮಾದ ಭಿತ್ತಿಗೆ ಒಗ್ಗಿಸುವುದು ಸವಾಲೇ ಹೌದು. ಅದಕ್ಕೇ ಬಾಲಿವುಡ್‌ನ ಬಹುತೇಕ ಚಿತ್ರಗಳು ಮೆಲೋಡ್ರಾಮಾ ಮೇಲೆಯೇ ಕ್ರೀಡಾಪಟುಗಳ ಯಶೋಗಾಥೆಯನ್ನು ತೇಲಿಬಿಡುವುದು. ಬರೀ ಒಂದು ರೂಪಾಯಿ ಸಂಭಾವನೆ ಪಡೆದು ತಮ್ಮ ಬದುಕಿನ ಕಥನವನ್ನು ಸಿನಿಮಾ ಮಾಡಲು ಮಿಲ್ಖಾ ಸಿಂಗ್‌ಅನುಮತಿ ನೀಡಿದ್ದರು. ಆ ಸಿನಿಮಾ ನೋಡಿ ಅವರಿಗೂ ಅಚ್ಚರಿಯೇ ಆಗಿತ್ತು.

ಮೋಹನ್ ಕುಮಾರ್ ನಿರ್ಮಾಣ–ನಿರ್ದೇಶನದ ‘ಆಲ್‌ರೌಂಡರ್’ ಹಿಂದಿಯಲ್ಲಿ ಮೊದಲಿಗೆ ಗಮನ ಸೆಳೆದ ಕ್ರೀಡಾಕಥನದ ಸಿನಿಮಾ ಎಂದು ಕೆಲವು ವಿಶ್ಲೇಷಕರು ಹೇಳುತ್ತಾರೆ. 1984ರ ಅವಧಿಯ ಕ್ರಿಕೆಟರ್ ಒಬ್ಬ ಗತದ ತನ್ನ ಇಮೇಜನ್ನು ಮರಳಿ ಪಡೆಯುವ ಯಶೋಗಾಥೆಯನ್ನು ಅದು ಒಳಗೊಂಡಿತ್ತು.

‘ಹಿಪ್ ಹಿಪ್ ಹುರ್ರೆ’ ಕಂಪ್ಯೂಟರ್ ಎಂಜಿನಿಯರ್ ಒಬ್ಬ ತನ್ನ ತಾತ್ಕಾಲಿಕ ಕೆಲಸವನ್ನು ಪ್ರೀತಿಸಿ ಶಾಲಾ ಫುಟ್‌ಬಾಲ್‌ತಂಡವನ್ನು ಗೆಲ್ಲಿಸುವ ಕಥನವನ್ನು ತೋರಿತ್ತು. ಕ್ರಿಕೆಟ್ ಜನಪ್ರಿಯವಾಗುತ್ತಿದ್ದ 1980ರ ದಶಕದ ಕಾಲವನ್ನೇ ಆ ಚಿತ್ರ ಒಳಗೊಂಡಿದ್ದುದು ವಿಶೇಷ.

2001ರಲ್ಲಿ ‘ಲಗಾನ್’ ದೊಡ್ಡ ಮಟ್ಟದಲ್ಲಿ ಯಶಸ್ವಿಯಾದ ನಂತರ ಹಿಂದಿ ಚಿತ್ರರಂಗದಲ್ಲಿ ಕ್ರೀಡಾವಸ್ತುವಿನ ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಯಿತು. ಅಷ್ಟೇ ಅಲ್ಲದೆ, ಅದನ್ನು ಮೆಲೋಡ್ರಾಮಾ ಚೌಕಟ್ಟಿಗೆ ತಂದು, ಸಿನಿಮೀಯ ಎಳೆಗಳನ್ನು ಢಾಳವಾಗಿಸಿ ತೋರಿಸಲೇಬೇಕು ಎಂಬ ಸೂತ್ರ ಉಜ್ಜುವುದೂ ವ್ಯಾಪಕವಾಯಿತು. 2015ರಲ್ಲಿ ಬಂದ ‘ಇಕ್ಬಾಲ್’ ಶ್ರವಣ ದೋಷವುಳ್ಳ, ಮಾತನಾಡಲೂ ಬಾರದ ಕ್ರಿಕೆಟಿಗನೊಬ್ಬನ ರಾಷ್ಟ್ರೀಯ ಕ್ರಿಕೆಟ್ ಆಡುವ ಕನವರಿಕೆಯನ್ನು ತೋರಿದ್ದ ಅಪರೂಪದ ಸಿನಿಮಾ. ಅದು ಇಂತಹ ಸೂತ್ರವನ್ನು ಮೀರಿತ್ತು. ನಿರ್ದೇಶಕ ನಾಗೇಶ್ ಕುಕನೂರ್ ಅವರಿಗೆ ಅಂತಹ ಸಿನಿಮೀಯ ಜಾಣ್ಮೆ ಇದ್ದದ್ದರಿಂದ ಅದು ಸಾಧ್ಯವಾದದ್ದು.

ಮಹೇಂದ್ರ ಸಿಂಗ್ ಧೋನಿ, ಸೈನಾ ನೆಹ್ವಾಲ್ ಬದುಕಿನ ಕಥೆಯನ್ನು ಆಧರಿಸಿದ ಸಿನಿಮಾಗಳು ಕೂಡ ಈಗಾಗಲೇ ತೆರೆಕಂಡಿವೆ. ವಹಿವಾಟಿನ ವಿಷಯದಲ್ಲಿ ಧೋನಿ ಬದುಕಿನ ಭಾವುಕ ಕಥನಕ್ಕೆ ಗೆಲುವು ದಕ್ಕಿತ್ತು.

ಕಳೆದ ತಿಂಗಳು ತೆರೆಕಂಡ ‘ತೂಫಾನ್’ ಫರ್ಹಾನ್ ಅಖ್ತರ್ ಅವರೇ ಸಲಹೆ ನೀಡಿದ್ದ ಕಥೆ. ‘ಭಾಗ್ ಮಿಲ್ಖಾ ಭಾಗ್’ ತರಹವೇ ಇದೂ ಪ್ರೇಕ್ಷಕರ ಮನಗೆಲ್ಲಬಹುದು ಎಂದೇ ಎಣಿಸಿ ಅವರು ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರಿಂದಲೇ ನಿರ್ದೇಶನ ಮಾಡಿಸಿದರು. ಆದರೆ, ತೀರಾ ಕಪ್ಪು–ಬಿಳುಪು ಧೋರಣೆ ಈ ಚಿತ್ರ ಗೆಲ್ಲಲಿಲ್ಲ. ಅದೇ ಹೊತ್ತಿಗೆ ತೆರೆಕಂಡ ತಮಿಳಿನ ‘ಸಾರ್ಪಟ್ಟ ಪರಂಪರೈ’ ಇದಕ್ಕಿಂತ ದೊಡ್ಡ ಭಿತ್ತಿಯ, ಸಾಮಾಜೋ–ರಾಜಕೀಯ ಆಯಾಮವನ್ನು ಅಳವಡಿಸಿಕೊಂಡು ಗೆದ್ದಿತು. ಪಾ.ರಂಜಿತ್ ನಿರ್ದೇಶಕನಾಗಿ ತೋರಿದ ಸೂಕ್ಷ್ಮಗಳಿಗೆ ಅದರಲ್ಲಿ ಸಾಕಷ್ಟು ಉದಾಹರಣೆಗಳಿವೆ.

ಈಗ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಬದುಕಿನ ಸಂಗತಿಗಳನ್ನು ಸಿನಿಮಾಗೆ ಹೇಗೆ ಅಳವಡಿಸುತ್ತಾರೆ ಎಂಬ ಕುತೂಹಲವಿದೆ. ಅವರ ಕುರಿತು ಸಿನಿಮಾ ತಯಾರಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಸಿನಿಮಾ ವಿಶ್ಲೇಷಕರು ಈಗಾಗಲೇ ಹೇಳಿರುವುದರಲ್ಲೂ ಅರ್ಥವಿದೆ.

********

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.