ADVERTISEMENT

PV Web Exclusive: ಕೈಹಿಡಿದ ತಾಯಿಯ ದಿಟ್ಟತನ; ತರಬೇತಿಯ ‘ಶೈಲಿ’

ವಿಕ್ರಂ ಕಾಂತಿಕೆರೆ
Published 30 ಆಗಸ್ಟ್ 2021, 10:01 IST
Last Updated 30 ಆಗಸ್ಟ್ 2021, 10:01 IST
ಶೈಲಿ ಸಿಂಗ್ ಅವರು ಜಿಗಿದ ಪರಿ -ಟ್ವಿಟರ್ ಚಿತ್ರ
ಶೈಲಿ ಸಿಂಗ್ ಅವರು ಜಿಗಿದ ಪರಿ -ಟ್ವಿಟರ್ ಚಿತ್ರ   

ನೈರೋಬಿಯಲ್ಲಿ ನಡೆದ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಶೈಲಿ ಸಿಂಗ್ ಅವರು ತಾಯಿಯ ದಿಟ್ಟತನ ಮತ್ತು ಕೋಚ್ ಅಂಜು ಬಾಬಿ ಜಾರ್ಜ್ ಅವರ ಪ್ರೋತ್ಸಾಹದಿಂದ ಉದಿಸಿದ ತಾರೆ. ಭಾರತ ಅಥ್ಲೆಟಿಕ್ಸ್‌ನಲ್ಲಿ ಭರವಸೆಯಾಗಿ ಬೆಳಗುತ್ತಿದ್ದಾರೆ ಅವರು.

ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆ ಎರಡು ವಿಷಯಗಳಿಗೆ ಸಂಬಂಧಿಸಿ ಖ್ಯಾತಿ ಹೊಂದಿದೆ. ಒಂದು, ಹೋರಾಟಗಾರ್ತಿ ಲಕ್ಷ್ಮಿಬಾಯಿ ಅವರ ಹೆಸರಿನಲ್ಲಿ, ಮತ್ತೊಂದು ಪರಿಚಾ ವಿದ್ಯುತ್ ಸ್ಥಾವರದ ಮೂಲಕ. ಈಗ ಮತ್ತೊಂದು ಕಾರಣಕ್ಕೆ ಈ ಜಿಲ್ಲೆ ಹೆಸರು ಗಳಿಸಿದೆ. ಲಾಂಗ್‌ಜಂಪ್ ಪಟು ಶೈಲಿ ಸಿಂಗ್ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮಿಂಚು ಹರಿಸಿದ ನಂತರ ಈ ಜಿಲ್ಲೆ ಕ್ರೀಡಾ ಭೂಪಟದಲ್ಲೂ ಸ್ಥಾನ ಗಳಿಸಿದೆ.

ಶೈಲಿ ಸಿಂಗ್ ಅವರು ‘ಫೀಲ್ಡ್‌’ನಲ್ಲಿ ಹೆಸರು ಗಳಿಸಲು ಪ್ರಮುಖ ಕಾರಣ ತಾಯಿ ವಿನಿತಾ ಅವರ ಮನೋಸ್ಥೈರ್ಯ ಮತ್ತು ಭಾರತ ಅಥ್ಲೆಟಿಕ್ಸ್‌ನ ತಾರೆ ಅಂಜು ಬಾಬಿ ಜಾರ್ಜ್‌ ಅವರ ಮಾರ್ಗದರ್ಶನ. 2017ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಸಾಧನೆ ಮಾಡಿದ ಶೈಲಿ ಅವರು ಅಂಜು ಬಾಬಿ ಕಣ್ಣಿಗೆ ಬೀಳದೇ ಇದ್ದಿದ್ದರೆ ಅವರ ಕ್ರೀಡಾ ಭವಿಷ್ಯ ಏನಾಗುತ್ತಿತ್ತೋ ಏನೋ...

ADVERTISEMENT

ಅಂಜು ಅವರ ಬಳಿ ತರಬೇತಿಗೆ ತಲುಪಿದ್ದು ಶೈಲಿ ಕ್ರೀಡಾಜೀವನದ ಒಂದು ಆಯಾಮ ಆಗಿದ್ದರೆ, ತಾಯಿಯ ದಿಟ್ಟತನ ಮತ್ತೊಂದು ಆಯಾಮ. ಶೈಲಿ ತಾಯಿ ಜೀವನೋಪಾಯಕ್ಕೆ ಟೇಲರಿಂಗ್ ಮಾಡುತ್ತಿದ್ದರು. ತಿಂಗಳಿಗೆ ₹ 3 ಸಾವಿರದಷ್ಟೇ ಸಂಪಾದನೆ. ಎರಡು ಕೊಠಡಿಯ ಸಣ್ಣ ಮನೆಯಲ್ಲಿ ಮೂವರು ಮಕ್ಕಳನ್ನು ಸಾಕುವ ಅನಿವಾರ್ಯ ಸ್ಥಿತಿ. ಈ ಸಂದರ್ಭದಲ್ಲೇ ಅಂಜು ಬಾಬಿ, ಶೈಲಿ ಅವರನ್ನು ತರಬೇತಿಗೆ ಕಳುಹಿಸುವಂತೆ ಸಲಹೆ ನೀಡಿದರು. ಅದಕ್ಕೆ ತಾಯಿ ಒಪ್ಪಿದರು ಕೂಡ. ಆದರೆ ಊರ ಜನರೆಲ್ಲ ಅವರನ್ನು ಜರಿದರು. ‘ಬೆಂಗಳೂರಿನಂಥ ನಗರಕ್ಕೆ ವಯಸ್ಸಿಗೆ ಬಂದ ಹುಡುಗಿ ಒಬ್ಬಳನ್ನೇ ಕಳುಹಿಸುತ್ತೀಯಾ, ನಿನಗೆ ತಲೆ ಕೆಟ್ಟಿದೆಯೇ’ ಎಂದು ಕೇಳಿದರು.

ಇಂಥ ಮಾತುಗಳಿಗೆ ಕಿವಿಗೊಡದ ತಾಯಿ, ಮಗಳನ್ನು ತರಬೇತಿಗೆ ಕಳುಹಿಸುವ ದಿಟ್ಟ ನಿರ್ಧಾರ ಕೈಗೊಂಡರು. ಬೆಂಗಳೂರಿನಲ್ಲಿ ಅಂಜು ಅವರ ಅಕಾಡೆಮಿಯಲ್ಲಿ ಅವರ ಕ್ರೀಡಾ ಬದುಕಿನ ಹೊಸ ಅಧ್ಯಾಯ ಆರಂಭಗೊಂಡಿತು. ‘ಜೀವನದಲ್ಲಿ ತುಂಬ ಕಷ್ಟ ಅನುಭವಿಸಿದ್ದೇನೆ. ಅಥ್ಲೆಟಿಕ್ಸ್‌ ಅಭ್ಯಾಸ ಮಾಡುವ ಆರಂಭದ ದಿನಗಳಲ್ಲಿ ಡಯಟ್ ಮತ್ತಿತರ ವ್ಯವಸ್ಥೆ ಮಾಡಿಕೊಳ್ಳುವಷ್ಟು ಅನುಕೂಲ ಇರಲಿಲ್ಲ. ಇಂಥ ಸಂದರ್ಭದಲ್ಲಿ ‘ಒಯಾಸಿಸ್‌’ನಂತೆ ಬಂದವರು ಅಂಜು ಮೇಡಂ. ಅವರೊಂದಿಗೆ ಬೆಂಗಳೂರಿಗೆ ಹೊರಟು ನಿಂತಾಗ ಊರ ಜನರೆಲ್ಲ ಹುಬ್ಬೇರಿಸಿದ್ದರು. ಆದರೆ ಅವರಿಗೆಲ್ಲ ಅಮ್ಮ–ನನ್ನ ಮಗಳು ಏನೆಂದು ನನಗೆ ಚೆನ್ನಾಗಿ ಗೊತ್ತು. ಆಕೆ ಹಾದಿ ತಪ್ಪುವ ಹುಡುಗಿಯಲ್ಲ. ಛಲಗಾತಿ. ಕ್ರೀಡಾ ಸಾಧನೆಯ ಮೇಲೆ ಮಾತ್ರ ಗಮನ ನೆಟ್ಟಿರುವ ಹುಡುಗಿ. ಆದ್ದರಿಂದ ಯಾವ ಆತಂಕವೂ ಇಲ್ಲದೆ ಕಳುಹಿಸುತ್ತಿದ್ದೇನೆ ಎಂದು ಹೇಳಿದರು. ಅಮ್ಮ ಅಂದು ತೆಗೆದುಕೊಂಡ ನಿರ್ಧಾರ ನನ್ನ ಬಾಳಿನ ಬಹುದೊಡ್ಡ ತಿರುವಿಗೆ ಕಾರಣವಾಯಿತು’ ಎಂದು ನೈರೋಬಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಿಂದ ವಾಪಸಾದ ನಂತರ ಸನ್ಮಾನ ಸಮಾರಂಭವೊಂದರಲ್ಲಿ ಶೈಲಿ ಹೇಳಿದ್ದರು.

ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಶೈಲಿಗೆ 13 ವರ್ಷ ವಯಸ್ಸು. ಅಲ್ಲಿ ಅವರು ಅಮೋಘ ಸಾಧನೆಯೊಂದಿಗೆ ಜಿಗಿದು ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಮುಂದಿನ ವರ್ಷ ಬೆಂಗಳೂರಿನಲ್ಲಿ ತರಬೇತಿ ಆರಂಭಗೊಂಡಿತು. ಅದೇ ವರ್ಷ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಕೂಟದಲ್ಲಿ ಚಿನ್ನದ ಸಾಧನೆ ಮಾಡಿದರು. 5.94 ಮೀಟರ್ಸ್ ದೂರದ ಸಾಮರ್ಥ್ಯ ಪ್ರದರ್ಶಿಸಿ ವಯೋಮಾನ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಮುರಿದಿದ್ದರು.

ಮುಂದಿನ ವರ್ಷ ಗುಂಟೂರಿನಲ್ಲಿ ನಡೆದ ಕೂಟದಲ್ಲಿ ಶೈಲಿ 6.15 ಮೀಟರ್ಸ್ ಸಾಧನೆಯೊಂದಿಗೆ ದಾಖಲೆ ಉತ್ತಮಪಡಿಸಿಕೊಂಡರು. ಈ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆಯನ್ನೂ ಗಳಿಸಿದರು. ವಿಶ್ವ ಚಾಂಪಿಯನ್‌ಷಿಪ್‌ಗೆ ಹೋಗುವ ಮುನ್ನ ಈ ವರ್ಷದ ಜೂನ್‌ನಲ್ಲಿ ಪಟಿಯಾಲದಲ್ಲಿ ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ 6.48 ಮೀಟರ್ಸ್ ದೂರ ಜಿಗಿದು 20 ವರ್ಷದೊಳಗಿನವರ ವಿಭಾಗದಲ್ಲಿ ಹೊಸ ದಾಖಲೆ ಬರೆದಿದ್ದರು. ಜೂನಿಯರ್ ಹಂತದಲ್ಲಿರುವಾಗಲೇ ಸೀನಿಯರ್ ವಿಭಾಗದ ಪದಕ ಗೆದ್ದು ಸಂಭ್ರಮಿಸಿದ್ದರು.

ಮನೆಯ ಕನಸು ನನಸಾಗುವುದೇ...?

‘ನೈರೋಬಿಯಲ್ಲಿ ಚಿನ್ನದ ಪದಕ ಗೆದ್ದರೆ ತಾಯಿಗೆ ಹೊಸದೊಂದು ಮನೆ ಸಿಗಲಿದೆ’ ಎಂದು ಕೋಚ್ ಬಾಬಿ ಜಾರ್ಜ್ ಅವರು ಶೈಲಿಗೆ ಭರವಸೆ ನೀಡಿದ್ದರು. ಆದರೆ ಕೂದಲೆಳೆ ಅಂತರದಲ್ಲಿ ಅವರ ಚಿನ್ನದ ಕನಸು ಕಮರಿ ಹೋಗಿತ್ತು. ಮುಂದೆ ಯಾವುದಾದರೂ ಮಾರ್ಗದಲ್ಲಿ ಅವರ ಕುಟುಂಬಕ್ಕೆ ಮನೆ ಸಿಗುವುದೋ ಕಾದು ನೋಡಬೇಕಿದೆ.

ಅಂದ ಹಾಗೆ ಶೈಲಿ ಅವರನ್ನು ಸಾಧನೆಯ ‘ಟ್ರ್ಯಾಕ್‌’ನಲ್ಲಿ ಕರೆದುಕೊಂಡು ಹೋಗುತ್ತಿರುವ ಅಂಜು ಬಾಬಿ ಪ್ಯಾರಿಸ್‌ನಲ್ಲಿ 2003ರಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಪದಕ ಗಳಿಸಿಕೊಟ್ಟಿದ್ದರು. 2005ರ ವಿಶ್ವ ಅಥ್ಲೆಟಿಕ್ಸ್‌ ಫೈನಲ್‌ನಲ್ಲಿ ಚಿನ್ನ, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚು, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ, ಏಷ್ಯನ್ ಚಾಂಪಿಯನ್‌ಷಿ‌ಪ್‌ನಲ್ಲೂ ಚಿನ್ನ ಮತ್ತು ಬೆಳ್ಳಿ, ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗಳಿಸಿದ್ದಾರೆ.

ಅವರದೇ ಹಾದಿಯಲ್ಲಿ ಬೆಳೆದು ಭಾರತ ಅಥ್ಲೆಟಿಕ್ಸ್‌ನ ದಿಗಂತದಲ್ಲಿ ನವತಾರೆಯಾಗುವ ಭರವಸೆ ಮೂಡಿಸಿದ್ದಾರೆ, ಶೈಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.