ADVERTISEMENT

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಲಯ ಕಂಡುಕೊಳ್ಳುವರೇ ಸಿಂಧು, ಸೈನಾ?

ಪಿಟಿಐ
Published 14 ಅಕ್ಟೋಬರ್ 2019, 19:45 IST
Last Updated 14 ಅಕ್ಟೋಬರ್ 2019, 19:45 IST
ಪಿ.ವಿ.ಸಿಂಧು–ಎಪಿ/ಪಿಟಿಐ ಚಿತ್ರ
ಪಿ.ವಿ.ಸಿಂಧು–ಎಪಿ/ಪಿಟಿಐ ಚಿತ್ರ   

ಆಡೆನ್ಸ್: ವಿಶ್ವ ಚಾಂಪಿಯನ್‌ ಭಾರತದ ಪಿ.ವಿ.ಸಿಂಧು ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಲಯಕ್ಕೆ ಮರಳುವ ನಿರೀಕ್ಷೆಯಿದೆ. ಮಂಗಳವಾರ ಆರಂಭವಾಗುವ ಟೂರ್ನಿಯು ಒಟ್ಟು ಸುಮಾರು ₹ 5.42 ಕೋಟಿ (7,75,000 ಡಾಲರ್‌) ಬಹುಮಾನ ಮೊತ್ತದ್ದಾಗಿದೆ.

ಆಗಸ್ಟ್‌ನಲ್ಲಿಸಿಂಧು ವಿಶ್ವ ಚಾಂಪಿಯನ್‌ ಆಗಿದ್ದರು. ಆ ಬಳಿಕ ನಡೆದ ಚೀನಾ ಹಾಗೂ ಕೊರಿಯಾ ಓಪನ್‌ ಟೂರ್ನಿಗಳಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸುತ್ತಿನಲ್ಲೇ ನಿರ್ಗಮಿಸಿದ್ದರು. ವಿಶ್ವದ ಆರನೇ ರ‍್ಯಾಂಕಿನ ಹೈದರಾಬಾದ್‌ ಆಟಗಾರ್ತಿ ಮೊದಲ ಸುತ್ತಿನಲ್ಲಿ ಜಾರ್ಜಿಯಾದ ಮರಿಸ್ಕಾ ತುಂಜುಂಗ್‌ ಎದುರು ಸೆಣಸಲಿದ್ದಾರೆ. ಮರಿಸ್ಕಾ ವಿರುದ್ಧ ಆಡಿರುವ ಈ ಹಿಂದಿನ ಐದು ಪಂದ್ಯಗಳಲ್ಲೂ ಸಿಂಧು ಜಯ ಕಂಡಿದ್ದಾರೆ.

ಭಾರತದ ಇನ್ನೋರ್ವ ಪ್ರಮುಖ ಶಟ್ಲರ್‌ ಸೈನಾ ನೆಹ್ವಾಲ್‌ ಕೂಡ ಇಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಜನವರಿಯಲ್ಲಿ ಇಂಡೊನೇಷ್ಯಾ ಮಾಸ್ಟರ್ಸ್ ಗೆದ್ದ ಬಳಿಕ ಅವರು ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಚೀನಾ ಹಾಗೂ ಕೊರಿಯಾ ಓಪನ್‌ಗಳಲ್ಲಿ ಮೊದಲ ಸುತ್ತಿನ ಹಣಾಹಣಿಗಳಲ್ಲೇ ನಿರಾಸೆ ಕಂಡಿದ್ದರು. ಹೋದ ಆವೃತ್ತಿಯಲ್ಲಿ ಅವರು ಇಲ್ಲಿ ಫೈನಲ್‌ ತಲುಪಿದ್ದರು. ಎಂಟನೇ ಶ್ರೇಯಾಂಕ ಪಡೆದಿರುವ ಅವರು ಜಪಾನ್‌ನ ಸಯಕಾ ತಕಹಶಿ ಸವಾಲು ಎದುರಿಸಲಿದ್ದಾರೆ.

ADVERTISEMENT

ಈ ಹಿಂದೆ ಇಲ್ಲಿ ಚಾಂಪಿಯನ್‌ ಆಗಿದ್ದ ಕಿದಂಬಿ ಶ್ರೀಕಾಂತ್‌ ಕೂಡ ಅಂಗಣಕ್ಕಿಳಿಯಲಿದ್ದಾರೆ. ಮೊದಲ ಸುತ್ತಿನಲ್ಲಿ ಅವರಿಗೆ ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟನ್ಸನ್ ಎದುರಾಳಿ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಬಿ.ಸಾಯಿ ಪ್ರಣೀತ್‌ ಅವರಿಗೆ ಇಲ್ಲಿ ಕಠಿಣ ಸವಾಲು ಎದುರಾಗಿದೆ. ಚೀನಾದ ಲಿನ್‌ ಡಾನ್‌ ವಿರುದ್ಧ ಅವರು ಸಾಮರ್ಥ್ಯ ಪಣಕ್ಕೊಡ್ಡಬೇಕಿದೆ.

ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಇತರ ಪಂದ್ಯಗಳಲ್ಲಿ ಪರುಪಳ್ಳಿ ಕಶ್ಯಪ್‌ ಅವರು ಥಾಯ್ಲೆಂಡ್‌ನ ಸಿತ್ತಿಕೋಮ್‌ ತಮ್ಮಾಸಿನ್‌ ಎದುರು, ಎಚ್‌.ಎಸ್‌. ಪ್ರಣಯ್‌ ಅವರು ಇಂಡೊನೇಷ್ಯಾದ ಅಂಥೋನಿ ಸಿನಿಸುಕ ಮೇಲೂ ಆಡಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಥಾಯ್ಲೆಂಡ್‌ ಓಪನ್‌ನಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಜೋಡಿಯು ಮೊದಲ ಸುತ್ತಿನಲ್ಲಿ ಕೊರಿಯಾದ ಕಿಮ್‌ ಜಿ ಜಂಗ್‌ –ಲೀ ಯಾಂಗ್‌ ಡೇ ಅವರಿಗೆ ಎದುರಾಗಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಮತ್ತೊಂದು ಜೋಡಿ ಮನು ಅತ್ರಿ– ಬಿ.ಸುಮೀತ್‌ ರೆಡ್ಡಿ, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ–ಎನ್‌.ಸಿಕ್ಕಿ ರೆಡ್ಡಿ, ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್‌ ಜೆರಿ ಚೋಪ್ರಾ–ಸಿಕ್ಕಿ ರೆಡ್ಡಿ ಮತ್ತು ಸಾತ್ವಿಕ್‌– ಅಶ್ವಿನಿ ಜೋಡಿಯು ಭಾರತದ ಪರ ಕಣಕ್ಕಿಳಿಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.