ADVERTISEMENT

ಫ್ರೆಂಚ್ ಓಪನ್: ಬಾರ್ಬೊರಾ ಕ್ರೆಸಿಕೋವಾಗೆ ಮಹಿಳಾ ಸಿಂಗಲ್ಸ್ ಕಿರೀಟ

ರಷ್ಯಾದ ಅನಸ್ತಾಸಿಯಾಗೆ ರನ್ನರ್ಸ್‌ ಅಪ್: ಪುರುಷರ ಸಿಂಗಲ್ಸ್‌ ಫೈನಲ್ ಇಂದು

ಏಜೆನ್ಸೀಸ್
Published 12 ಜೂನ್ 2021, 16:24 IST
Last Updated 12 ಜೂನ್ 2021, 16:24 IST
ಬಾರ್ಬೊರಾ ಕ್ರೆಸಿಕೋವಾ ಅವರು ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು. –ರಾಯಿಟರ್ಸ್‌ ಚಿತ್ರ
ಬಾರ್ಬೊರಾ ಕ್ರೆಸಿಕೋವಾ ಅವರು ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು. –ರಾಯಿಟರ್ಸ್‌ ಚಿತ್ರ   

ಪ್ಯಾರಿಸ್: ರೊಲ್ಯಾಂಡ್ ಗ್ಯಾರೋಸ್‌ ಮಣ್ಣಿನಂಕಣದಲ್ಲಿ ಶನಿವಾರ ಹೊಸ ಟೆನಿಸ್ ತಾರೆಯ ಬೆಳಕು ಪಸರಿಸಿತು. ಜೆಕ್ ಗಣರಾಜ್ಯದ ಬರ್ಬೊರಾ ಕ್ರೆಚಿಕೊವಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಕಿರೀಟವನ್ನು ಮುಡಿಗೇರಿಸಿಕೊಂಡರು.

ವೃತ್ತಿಪರ ಟೆನಿಸ್‌ನಲ್ಲಿ 25 ವರ್ಷದ ಬರ್ಬೊರಾ ಗೆದ್ದ ಮೊಟ್ಟಮೊದಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಇದಾಗಿದೆ. ಟೂರ್ನಿಯ ಫೈನಲ್‌ನಲ್ಲಿ ಶ್ರೇಯಾಂಕರಹಿತ ಬರ್ಬೊರಾ 6–1, 2–6, 6–4ರಿಂದ ರಷ್ಯಾದ ಅನಸ್ತಾಸಿಯಾ ಪವಲಿಯುಚಿಂಕೊವಾ ಅವರನ್ನು ಮಣಿಸಿದರು.

ಕಳೆದ ಐದು ವರ್ಷಗಳಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಶ್ರೇಯಾಂಕರಹಿತ ಆಟಗಾರ್ತಿಯರಲ್ಲಿ ಬರ್ಬೊರಾ ಮೂರನೇಯವರಾಗಿದ್ದಾರೆ.

ADVERTISEMENT

31ನೇ ಶ್ರೇಯಾಂಕದ ಆಟಗಾರ್ತಿ ಅನಸ್ತಾಸಿಯಾ ಅವರಿಗೆ ಮೊದಲನೇ ಸೆಟ್‌ನಲ್ಲಿಯೇ ಬರ್ಬೊರಾ ಸೋಲಿನ ರುಚಿ ತೋರಿಸಿದರು. 25 ವರ್ಷದ ಬರ್ಬೊರಾ ಅವರ ಚುರುಕಿನ ಹೊಡೆತಗಳಿಗೆ ರಿಟರ್ನ್‌ ನೀಡುವಲ್ಲಿ ರಷ್ಯಾದ ಆಟಗಾರ್ತಿ ಲೋಪವೆಸಗಿದರು. ಎರಡನೇ ಸೆಟ್‌ನಲ್ಲಿ ಎಡಗಾಲಿನ ಗಾಯಕ್ಕೆ ಚಿಕಿತ್ಸೆ ಪಡೆದ ಅನಸ್ತಾಸಿಯಾ ಗೆಲುವು ಸಾಧಿಸಿದರು. ಆದರೆ, ತುರುಸಿನ ಪೈಪೋಟಿ ಕಂಡ ಮೂರನೇ ಸೆಟ್‌ನಲ್ಲಿ ಬರ್ಬೊರಾ ಆಕರ್ಷಕ ಆಟದ ಮೂಲಕ ಪ್ರಶಸ್ತಿ ಜಯದ ಕನಸು ನನಸು ಮಾಡಿಕೊಂಡರು.

ಅನಸ್ತಾಸಿಯಾಗೂ ಇದು ಮೊದಲ ಗ್ರ್ಯಾನ್‌ಸ್ಲಾಂ ಫೈನಲ್ ಹಣಾಹಣಿಯಾಗಿತ್ತು. ಬರ್ಬೊರಾ ಅವರು ತಮ್ಮ ಗೆಳತಿ ಕಟೆರಿಯಾ ಸಿನಿಯಕೊವಾ ಅವರೊಂದಿಗೆ ಭಾನುವಾರ ಡಬಲ್ಸ್‌ ಫೈನಲ್‌ನಲ್ಲಿ ಆಡಲಿದ್ದಾರೆ.

ಈ ಬಾರಿ ಹಲವು ನಾಟಕೀಯ ತಿರುವುಗಳನ್ನು ಕಂಡ ಈ ಟೂರ್ನಿಯಲ್ಲಿ ಹೋದ ವಾರವ ಎರಡನೇ ಶ್ರೇಯಾಂಕದ ನವೋಮಿ ಒಸಾಕ ಟೂರ್ನಿಯಿಂದ ಹಿಂದೆ ಸರಿದಿದ್ದರು. ಪ್ರಥಮ ಶ್ರೇಯಾಂಕದ ಆ್ಯಷ್ ಬಾರ್ಟಿ ಗಾಯಗೊಂಡು ನಿವೃತ್ತಿ ಪಡೆದಿದ್ದರು. ಮೂರನೇ ಶ್ರೇಯಾಂಕದ ಸಿಮೊನಾ ಹಲೆಪ್ ಅವರೂ ಮೀನಖಂಡದ ಗಾಯದಿಂದಾಗಿ ಹೊರನಡೆದಿದ್ದರು.

ದಿಗ್ಗಜ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ನಾಲ್ಕನೇ ಸುತ್ತಿನಲ್ಲಿ ಸೋತಿದ್ದರು. ಹೋದ ಬಾರಿಯ ಚಾಂಪಿಯನ್ ಐಗಾ ಸ್ವಾಯಟೆಕ್ ಎಂಟರ ಘಟ್ಟದಲ್ಲಿ ಮುಗ್ಗರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.