ADVERTISEMENT

ಒಲಿಂಪಿಕ್ ಚಿನ್ನದ ಮೇಲೆ ಬಾರ್ಟಿ ಕಣ್ಣು

ರಾಯಿಟರ್ಸ್
Published 12 ಜುಲೈ 2021, 13:14 IST
Last Updated 12 ಜುಲೈ 2021, 13:14 IST
ವಿಂಬಲ್ಡನ್ ಟ್ರೋಫಿಯೊಂದಿಗೆ ಆ್ಯಶ್ಲಿ ಬಾರ್ಟಿ– ಎಎಫ್‌ಪಿ ಚಿತ್ರ
ವಿಂಬಲ್ಡನ್ ಟ್ರೋಫಿಯೊಂದಿಗೆ ಆ್ಯಶ್ಲಿ ಬಾರ್ಟಿ– ಎಎಫ್‌ಪಿ ಚಿತ್ರ   

ಸಿಡ್ನಿ: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟ ಧರಿಸಿರುವ ಆ್ಯಶ್ಲಿ ಬಾರ್ಟಿ ಅವರು ಈಗ ಒಲಿಂಪಿಕ್ ಚಿನ್ನದ ಪದಕದ ಮೇಲೆ ಚಿತ್ತ ನೆಟ್ಟಿದ್ದಾರೆ.

ಆಲ್ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಬಾರ್ಟಿ 6-3 6-7(4) 6-3ರಿಂದ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೊವಾ ಅವರಿಗೆ ಸೋಲುಣಿಸಿದ್ದರು. ಇದರೊಂದಿಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆಟಗಾರ್ತಿ ಎರಡನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಟೆನಿಸ್‌ನ ‘ಓಪನ್ ಯುಗ’ ಆರಂಭವಾದ ಬಳಿಕ, ಒಂದೇ ವರ್ಷದಲ್ಲಿ ವಿಂಬಲ್ಡನ್ ಮತ್ತು ಒಲಿಂಪಿಕ್ಸ್ ಚಿನ್ನ ಎರಡನ್ನೂ ಗೆದ್ದುಕೊಂಡಿರುವವರು ಸ್ಟೆಫಿ ಗ್ರಾಫ್‌ (1988), ವೀನಸ್‌ ವಿಲಿಯಮ್ಸ್ (2000) ಮತ್ತು ಸೆರೆನಾ ವಿಲಿಯಮ್ಸ್ (2012) ಮಾತ್ರ. ಈ ಮೂವರ ಸಾಲಿಗೆ ಸೇರುವ ತವಕದೊಂದಿಗೆ ಬಾರ್ಟಿ ಜುಲೈ 23ರಂದು ಟೋಕಿಯೊ ಕೂಟಕ್ಕೆ ತೆರಳಲಿದ್ದಾರೆ.

ADVERTISEMENT

‘ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲು ಸಾಧ್ಯವಾಗುವುದು ಒಂದು ಅದ್ಭುತ ಅನುಭವ ಮತ್ತು ವಿಂಬಲ್ಡನ್‌ನಲ್ಲಿ ನಾವು ನಿಜವಾಗಿಯೂ ವಿಶೇಷವಾದದ್ದನ್ನು ಸಾಧಿಸಿದ್ದನ್ನು ಆಚರಿಸಲು ಈ ಮುಂದಿನ ಅವಧಿ ಮುಖ್ಯವಾಗಿದೆ‘ ಎಂದು ಆಸ್ಟ್ರೇಲಿಯಾದ ಮಾಧ್ಯಮಕ್ಕೆ 25 ವರ್ಷದ ಬಾರ್ಟಿ ತಿಳಿಸಿದರು.

‘ಇನ್ನೂ ಹಲವು, ಕನಸು, ಗುರಿಗಳು ನನ್ನ ಮನದಲ್ಲಿವೆ. ನಮ್ಮ ತಂಡಕ್ಕೂ ಇದೆ. ಟೋಕಿಯೊ ಕೂಟದಲ್ಲಿ ಪಾಲ್ಗೊಳ್ಳಲು ನಿಜಕ್ಕೂ ಕಾತರಳಾಗಿದ್ದೇನೆ‘ ಎಂದು ಅವರು ಹೇಳಿದ್ದಾರೆ.

ಬಾರ್ಟಿ ಅವರು 2019ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.