ADVERTISEMENT

'ಕಿಂಗ್‌ ಆಫ್ ಕ್ಲೇ' ನಡಾಲ್‌ಗೆ ಅಂತಿಮ 4ರ ಘಟ್ಟದಲ್ಲಿ ಜೊಕೊವಿಚ್ ಸವಾಲು

ಪಿಟಿಐ
Published 10 ಜೂನ್ 2021, 5:32 IST
Last Updated 10 ಜೂನ್ 2021, 5:32 IST
ನೊವಾಕ್ ಜೊಕೊವಿಚ್ vs ರಫೆಲ್ ನಡಾಲ್
ನೊವಾಕ್ ಜೊಕೊವಿಚ್ vs ರಫೆಲ್ ನಡಾಲ್   

ಪ್ಯಾರಿಸ್: ಪ್ರತಿಷ್ಠಿತ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಅಂತಿಮ ನಾಲ್ಕರ ಘಟ್ಟದ ಹೋರಾಟದಲ್ಲಿ 'ಕಿಂಗ್ ಆಫ್ ಕ್ಲೇ' ಕೋರ್ಟ್ ಖ್ಯಾತಿಯ ಸ್ಪೇನ್‌ನ ರಫೆಲ್ ನಡಾಲ್ ಅವರು ವಿಶ್ವ ನಂ.1 ರ‍್ಯಾಂಕ್‌ನ ಸರ್ಬಿಯಾದ ನೊವಾಕ್ ಜೊಕೊವಿಚ್ ಸವಾಲನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ನೊವಾಕ್ ಜೊಕೊವಿಚ್ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಒಂಬತ್ತನೇ ಶ್ರೇಯಾಂಕಿತ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ವಿರುದ್ಧ 6-3 6-2 6-7 (5) 7-5ರ ಅಂತರದಲ್ಲಿ ಗೆಲುವು ದಾಖಲಿಸಿದರು.

ಹಾಲಿ ಚಾಂಪಿಯನ್‌, ಮೂರನೇ ಶ್ರೇಯಾಂಕಿತ ನಡಾಲ್, ಅಂತಿಮ ಎಂಟರ ಘಟ್ಟದ ಹೋರಾಟದಲ್ಲಿ ಅರ್ಜೆಂಟೀನಾದ ಡಿಗೊ ಸ್ವಾರ್ಟ್ಜ್‌ಮನ್‌ ಎದುರು 6-3, 4-6, 6-4, 6-0ರ ಅಂತರದಲ್ಲಿ ವಿಜಯ ದಾಖಲಿಸಿದ್ದರು.

ದಾಖಲೆಯ 13 ಬಾರಿ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಹಾಗೂ ಜೊಕೊವಿಚ್ ನಡುವಣ ಪಂದ್ಯವು ಟೆನಿಸ್ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ. ಅಂದ ಹಾಗೆ ಜೊಕೊವಿಚ್ ಒಂದು ಬಾರಿ ಮಾತ್ರ (2016) ಆವೆ ಮಣ್ಣಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಮಗದೊಂದು ಸೆಮಿಫೈನಲ್ ಮುಖಾಮುಖಿಯಲ್ಲಿ ಗ್ರೀಸ್‌ನ 5ನೇ ಶ್ರೇಯಾಂಕಿತ ಸ್ಟೆಫನೊಸ್ ಸಿಸಿಪಸ್‌ ಅವರು ಜರ್ಮನಿಯ ಆರನೇ ಶ್ರೇಯಾಂಕಿತ ಅಲೆಕ್ಸಾಂಡರ್‌ ಜೆರೆವ್ ಸವಾಲನ್ನು ಎದುರಿಸಲಿದ್ದಾರೆ.

ಕ್ಲೇ ಕೋರ್ಟ್‌ನಲ್ಲಿ 105-2 ಗೆಲುವು-ಸೋಲಿನ ಅಂತರವನ್ನು ಕಾಪಾಡಿಕೊಂಡಿರುವ ನಡಾಲ್ ಮಣಿಸುವುದು ಜೊಕೊವಿಚ್ ಪಾಲಿಗೆ ಅಷ್ಟು ಸುಲಭವಲ್ಲ. ಕಳೆದ ವರ್ಷವೂ ಜೊಕೊವಿಕ್ ಅವರನ್ನೇ ಮಣಿಸಿದ್ದ ನಡಾಲ್ 20ನೇ ಗ್ರ್ಯಾನ್‌ಸ್ಲಾಮ್ ಗೆದ್ದ ಸಾಧನೆ ಮಾಡಿದ್ದರು.

ಟೂರ್ನಿಯಿಂದ ಅರ್ಧದಿಂದಲೇ ಹಿಂಜರಿದಿರುವ ರೋಜರ್ ಫೆಡರರ್ ಜೊತೆಗೆ 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ದಾಖಲೆಯನ್ನು ಹಂಚಿಕೊಂಡಿರುವ ನಡಾಲ್ ಈಗ ದಾಖಲೆಯ 21ನೇ ಕಿರೀಟದ ಹುಡುಕಾಟದಲ್ಲಿದ್ದಾರೆ. ತಮ್ಮ ಮೆಚ್ಚಿನ ಕ್ಲೇ ಕೋರ್ಟ್‌ನಲ್ಲೇ ಈ ದಾಖಲೆ ತಲುಪುವ ಇರಾದೆಯಲ್ಲಿದ್ದಾರೆ. ಅತ್ತ ಜೊಕೊವಿಕ್ 19ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.