ADVERTISEMENT

ಮಳೆ ಅಡ್ಡಿ: ಕೆರ್ಬರ್‌, ಡೆನಿಸ್‌ಗೆ ಗೆಲುವಿನ ಸಂಭ್ರಮ

ವಿಂಬಲ್ಡನ್ ಟೆನಿಸ್ ಟೂರ್ನಿ: ಕೆನಡಾ ಆಟಗಾರನಿಗೆ ಮಣಿದ ಬ್ರಿಟನ್‌ನ ಆ್ಯಂಡಿ ಮರ್ರೆ

ರಾಯಿಟರ್ಸ್
Published 4 ಜುಲೈ 2021, 6:01 IST
Last Updated 4 ಜುಲೈ 2021, 6:01 IST
ಅಲೆಕ್ಸಾಂಡ್ರ ಸಸ್ನೊವಿಚ್ ಎದುರಿನ ಪಂದ್ಯದಲ್ಲಿ ಚೆಂಡು ರಿಟರ್ನ್ ಮಾಡಿದ ಏಂಜಲಿಕ್ ಕೆರ್ಬರ್ –ರಾಯಿಟರ್ಸ್ ಚಿತ್ರ
ಅಲೆಕ್ಸಾಂಡ್ರ ಸಸ್ನೊವಿಚ್ ಎದುರಿನ ಪಂದ್ಯದಲ್ಲಿ ಚೆಂಡು ರಿಟರ್ನ್ ಮಾಡಿದ ಏಂಜಲಿಕ್ ಕೆರ್ಬರ್ –ರಾಯಿಟರ್ಸ್ ಚಿತ್ರ   

ಲಂಡನ್‌: ಮಾಜಿ ಚಾಂಪಿಯನ್ ಜರ್ಮನಿಯ ಏಂಜಲಿಕ್ ಕೆರ್ಬರ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಜಯ ಗಳಿಸಿದರು. ಶನಿವಾರ ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಅವರು2-6, 6-0, 6-1ರಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಅಲೆಕ್ಸಾಂಡ್ರ ಸಸ್ನೊವಿಚ್‌ ಎದುರು ಗೆದ್ದರು.

ಎರಡನೇ ಸುತ್ತಿನ ಪಂದ್ಯದಲ್ಲಿ ಸಾರಾ ಸೊರಿಬ್ಸ್‌ ತೊರ್ಮೊ ಎದುರು ಪ್ರಯಾಸದ ಜಯ ಗಳಿಸಿದ ಕರ್ಬರ್ ಶನಿವಾರ ಅಮೋಘ ಆಟವಾಡಿದರು. ಮೊದಲ ಸೆಟ್‌ನಲ್ಲಿ ಎರಡು ಬಾರಿ ಸರ್ವ್ ಕಳೆದುಕೊಂಡು ಸ್ವಲ್ಪ ಹಿನ್ನಡೆ ಅನುಭವಿಸಿದರೂ ನಂತರ ಚೇತರಿಸಿಕೊಂಡರು.

ವಿಶ್ವ ಕ್ರಮಾಂಕದ 100ನೇ ಸ್ಥಾನದಲ್ಲಿರುವ ಸಸ್ನೊವಿಚ್ ಆರಂಭದಲ್ಲಿ 4–0 ಮುನ್ನಡೆ ಗಳಿಸಿದ್ದರು. ಆದರೆ ಆ ಲಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ADVERTISEMENT

ಎರಡು ಬಾರಿಯ ಚಾಂಪಿಯನ್ ಬ್ರಿಟನ್‌ನ ಆ್ಯಂಡಿ ಮರ್ರೆ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಅವರನ್ನು ಕೆನಡಾದ ಡೆನಿಸ್ ಶಪೊವಲೊವ್6-4, 6-2, 6-2ರಲ್ಲಿ ಮಣಿಸಿದರು. ನಾಲ್ಕು ವರ್ಷಗಳ ನಂತರ ವಿಂಬಲ್ಡನ್ ಅಂಗಣಕ್ಕೆ ಮರಳಿದ ಮರ್ರೆ ಮೊದಲ ಮೂರು ಸೆಟ್‌ಗಳಲ್ಲಿ ನಿರಾಯಾಸವಾಗಿ ಗೆದ್ದಿದ್ದರು. ಆದರೆ ಶನಿವಾರ ಶಪೊವಲೊವ್ ಎದುರು ನೀರಸ ಆಟವಾಡಿದರು.

ಮಹಿಳೆಯರ ವಿಭಾಗದಲ್ಲಿ ಅಮೆರಿಕದ 17 ವರ್ಷದ ಆಟಗಾರ್ತಿ ಕೊಕೊ ಗಫ್‌ 6-3, 6-3ರಲ್ಲಿ ಕಾಜಾ ಜುವಾನ್ ವಿರುದ್ಧ ಗೆದ್ದು ನಾಲ್ಕನೇ ಸುತ್ತು ಪ್ರವೇಶಿಸಿದರು. 23ನೇ ಶ್ರೇಯಾಂಕದ ಗಫ್‌ ಮೊದಲ ಸೆಟ್‌ನ ಆರಂಭದಲ್ಲೇ ಆಕ್ರಮಣಕಾರಿ ಆಟದ ಮೂಲಕ ವಿಶ್ವ ಕ್ರಮಾಂಕದಲ್ಲಿ 102ನೇ ಸ್ಥಾನದಲ್ಲಿರುವ ಎದುರಾಳಿಯನ್ನು ಕಂಗೆಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.