ADVERTISEMENT

ಗ್ರ್ಯಾನ್‌ಸ್ಲಾಂ ಟೆನಿಸ್‌: ಸುಮಿತ್‌, ರಾಮ್‌ಕುಮಾರ್ ಅಮೆರಿಕ ಓಪನ್‌ ಕನಸು ಭಗ್ನ

ಏಜೆನ್ಸೀಸ್
Published 25 ಆಗಸ್ಟ್ 2021, 12:09 IST
Last Updated 25 ಆಗಸ್ಟ್ 2021, 12:09 IST
ಸುಮಿತ್ ನಗಾಲ್‌ –ಪಿಟಿಐ ಚಿತ್ರ
ಸುಮಿತ್ ನಗಾಲ್‌ –ಪಿಟಿಐ ಚಿತ್ರ   

ನ್ಯೂಯಾರ್ಕ್‌: ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಗಳಲ್ಲಿ ಭಾರತದ ನೀರಸ ಪ್ರದರ್ಶನ ಮುಂದುವರಿದಿದೆ. ಅಮೆರಿಕ ಓಪನ್‌ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯಗಳಲ್ಲಿ ಸೋತ ಸುಮಿತ್ ನಗಾಲ್ ಮತ್ತು ರಾಮ್‌ಕುಮಾರ್ ರಾಮನಾಥನ್ ವಾಪಸಾಗಿದ್ದಾರೆ. ಅಂಕಿತಾ ರೈನಾ ಕೂಡ ಸೋಲನುಭವಿಸಿದ್ದಾರೆ.

ಅರ್ಜೆಂಟೀನಾದ ಜುವಾನ್ ಪ್ಯಾಬ್ಲೊ ಫಿಕೊವಿಚ್‌ ಎದುರು ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಸುಮಿತ್ ನಗಾಲ್5-7, 6-4, 3-6ರಲ್ಲಿ ಸೋಲುಂಡರು. ಕೇವಲ 22 ನಿಮಿಷಗಳಲ್ಲಿ ಪಂದ್ಯ ಮುಕ್ತಾಯ ಕಂಡಿತ್ತು.

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮುಖ್ಯ ಹಂತ ಪ್ರವೇಶಿಸಿದ್ದ ನಗಾಲ್ ಮೊದಲ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದರು. ಫ್ರೆಂಚ್ ಓಪನ್ ಟೂರ್ನಿಗೆ ಅರ್ಹತೆ ಗಳಿಸಲು ವಿಫಲರಾಗಿದ್ದ ಅವರು ಗಾಯದ ಸಮಸ್ಯೆಯಿಂದಾಗಿ ವಿಂಬಲ್ಡನ್ ಓಪನ್‌ನಿಂದ ದೂರ ಉಳಿದಿದ್ದರು.

ADVERTISEMENT

ರಾಮ್‌ಕುಮಾರ್ ಮೊದಲ ಸೆಟ್‌ನಲ್ಲಿ ಗೆದ್ದು ಭರವಸೆ ಮೂಡಿಸಿದ್ದರು. ಆದರೆ 35 ನಿಮಿಷಗಳ ಹಣಾಹಣಿಯಲ್ಲಿ ರಷ್ಯಾದ ಎವ್ಜಿನಿ ಡಾನ್‌ಸ್ಕಯ್6-4, 6-7(1), 4-6ರಲ್ಲಿ ಭಾರತದ ಆಟಗಾರನನ್ನು ಮಣಿಸಿದರು. 2014ರಿಂದ ಗ್ರ್ಯಾನ್‌ಸ್ಲಾಂ ಟೂರ್ನಿಯೊಂದರ ಮುಖ್ಯ ಹಂತ ಪ್ರವೇಶಿಸಲು ಪ್ರಯತ್ನಿಸುತ್ತಿರುವ ರಾಮ್‌ಕುಮಾರ್‌ ಅವರಿಗೆ ಇದು ಒಟ್ಟಾರೆ 21ನೇ ಅರ್ಹತಾ ಪಂದ್ಯವಾಗಿತ್ತು.

ಮಹಿಳಾ ವಿಭಾಗದಲ್ಲಿ ಅಂಕಿತಾ ರೈನಾ ಕೂಡ ಮೊದಲ ಪಂದ್ಯದಲ್ಲೇ ಸೋತು ನಿರಾಸೆ ಅನುಭವಿಸಿದರು. ಅಮೆರಿಕದ ಜೆಮಿ ಲಾಬ್‌ಗೆ ಅವರು ಮಣಿದರು. ಅರ್ಹತಾ ಸುತ್ತಿನಲ್ಲಿ ಭಾರತದ ಪ್ರಜ್ಞೇಶ್ ಗುಣೇಶ್ವರನ್‌ ಮಾತ್ರ ಉಳಿದಿದ್ದು ಅವರು ಮೊದಲ ಹಣಾಹಣಿಯಲ್ಲಿ ಕೆನಡಾದ ಬ್ರೈಡನ್ ಶೂರ್‌ ವಿರುದ್ಧ ಸೆಣಸುವರು.

ಮಾನಸಿಕ ಆರೋಗ್ಯಕ್ಕೆ ‘ನೆಮ್ಮದಿಯ ಕೊಠಡಿ’

ಅಮೆರಿಕ ಓಪನ್ ಟೂರ್ನಿಯ ಸಂದರ್ಭದಲ್ಲಿ ಆಟಗಾರರಿಗೆ ಮಾನಸಿಕ ಆರೋಗ್ಯ ಕೇಂದ್ರ ಮತ್ತು ‘ನೆಮ್ಮದಿಯ ಕೊಠಡಿ’ಯ ಪ್ರಯೋಜನ ಸಿಗಲಿದೆ. ಮಾನಸಿಕ ಶಾಂತಿ ಸೇರಿದಂತೆ ಆಟಗಾರರ ಆರೋಗ್ಯ ಸುದೃಢವಾಗಿರುವಂತೆ ನೋಡಿಕೊಳ್ಳಲು ಈ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅಮೆರಿಕ ಟೆನಿಸ್ ಸಂಸ್ಥೆ ತಿಳಿಸಿದೆ.

ಅಮೆರಿಕ ಓಪನ್ ಟೂರ್ನಿಯ ಮಹಿಳೆಯರ ವಿಭಾಗದ ಹಾಲಿ ಚಾಂಪಿಯನ್ ನವೊಮಿ ಒಸಾಕ ಅವರು ಆಟಗಾರರ ಮಾನಸಿಕ ಆರೋಗ್ಯದ ಬಗ್ಗೆ ಫ್ರೆಂಚ್ ಓಪನ್ ಸಂದರ್ಭದಲ್ಲಿ ಗಮನ ಸೆಳೆದಿದ್ದರು. ಮಾನಸಿಕ ಸ್ಥಿತಿಯ ಬಗ್ಗೆ ಯಾರೂ ಹೆಚ್ಚು ಕಾಳಜಿ ವಹಿಸುತ್ತಿಲ್ಲ ಎಂದು ದೂರಿ ಅವರು ಆ ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದರು. ಇದರ ನಂತರ ಕ್ರೀಡೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಭಾರಿ ಚರ್ಚೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.