ADVERTISEMENT

ಒಲಿಂಪಿಕ್ಸ್‌: ದ್ವಂದ್ವದಲ್ಲಿ ಜೊಕೊವಿಚ್‌

ಈಗಾಗಲೇ ವರ್ಷದ ಮೂರು ಗ್ರ್ಯಾಂಡ್‌ಸ್ಲಾಮ್‌ ಸಿಂಗಲ್ಸ್‌ ಗೆದ್ದ ಹಿರಿಮೆ

ಏಜೆನ್ಸೀಸ್
Published 12 ಜುಲೈ 2021, 6:49 IST
Last Updated 12 ಜುಲೈ 2021, 6:49 IST
ಜೊಕೊವಿಚ್‌
ಜೊಕೊವಿಚ್‌   

ವಿಂಬಲ್ಡನ್: ‘ಗೋಲ್ಡನ್‌ ಸ್ಲ್ಯಾಮ್‌’ ಪೂರೈಸಲು ಉತ್ತಮ ಅವಕಾಶವಿದ್ದರೂ, ವಿಶ್ವದ ಅಗ್ರಮಾನ್ಯ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌ ಅವರು ಇದೇ 23ರಂದು ಆರಂಭವಾಗುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಬಗ್ಗೆ ಅರೆಮನಸ್ಸು ಹೊಂದಿದ್ದಾರೆ.

‘ಪ್ರೇಕ್ಷಕರಿಗೆ ನಿರ್ಬಂಧ, ಕೊರೊನಾ ವೈರಸ್‌ ಹಬ್ಬುವ ಹಿನ್ನೆಲೆಯಲ್ಲಿ ಬಿಗಿ ನಿಯಮ’ಗಳಿಂದಾಗಿ ಟೋಕಿಯೊಕ್ಕೆ ಹೋಗಬೇಕೊ, ಬೇಡವೊ ಎಂಬ ಬಗ್ಗೆ ಸರ್ಬಿಯಾದ ಈ ಆಟಗಾರ ದ್ವಂದ್ವದಲ್ಲಿದ್ದಾರೆ.

‘ಆ ಬಗ್ಗೆ ನಾನು ಸಲ ಯೋಚನೆ ಮಾಡಬೇಕಾಗಿದೆ’ ಎಂದು ವಿಂಬಲ್ಡನ್‌ ಪುರುಷರ ಸಿಂಗಲ್ಸ್‌ ಪ್ರಶಸ್ತಿಯನ್ನು ಸತತ ಮೂರನೇ ಬಾರಿ ಗೆದ್ದ ನಂತರ ಅವರು ಪ್ರತಿಕ್ರಿಯಿಸಿದರು.

ADVERTISEMENT

‘ಒಲಿಂಪಿಕ್ಸ್‌ಗೆ ಹೋಗಬೇಕೆಂಬುದು ಯಾವತ್ತಿಗೂ ಇದ್ದ ಯೋಚನೆ. ಆದರೆ ಈಗ ಗೊಂದಲದಲ್ಲಿದ್ದೇನೆ. ಕಳೆದ ಕೆಲವು ದಿನಗಳಿಂದ ಕೇಳಿಬಂದಿರುವ ಮಾಹಿತಿಯಿಂದಾಗಿ ನನಗೆ 50–50 ಸನ್ನಿವೇಶ ಎದುರಾಗಿದೆ’ ಎಂದಿದ್ದಾರೆ 34 ವರ್ಷದ ಆಟಗಾರ.

ಒಲಿಂಪಿಕ್ಸ್‌ಗೆ ಪ್ರೇಕ್ಷಕರನ್ನು ನಿರ್ಬಂಧಿಸಲಾಗಿದೆ. ಆಟಗಾರನೊಬ್ಬ ತನ್ನೊಂದಿಗೆ ಸೀಮಿತ ಸಂಖ್ಯೆಯ ಸಹಾಯಕ ಸಿಬ್ಬಂದಿ ಮಾತ್ರ ಕರೆದೊಯ್ಯಬಹುದು ಎಂಬದೂ ಹೊಸ ಕಟ್ಟುನಿಟ್ಟುಗಳಲ್ಲಿ ಸೇರಿವೆ. ‘ಇಂಥವುಗಳನ್ನು ಕೇಳಿ ನಿರಾಸೆಯಾಗುತ್ತಿದೆ’ ಎಂದಿದ್ದಾರೆ ಜೊಕೊವಿಚ್‌.

ಟೋಕಿಯೊ ಕ್ರೀಡೆಗಳಲ್ಲಿ ಆಡುವುದಿಲ್ಲ ಎಂದು ಇನ್ನೊಬ್ಬ ದಿಗ್ಗಜ ಆಟಗಾರ ರಫೆಲ್‌ ನಡಾಲ್‌ (ಸ್ಪೇನ್‌) ಈಗಾಗಲೇ ಹೇಳಿದ್ದಾರೆ. ಹಾಲಿ ಟೆನಿಸ್‌ ಜಗತ್ತಿನ ಮೂವರು ಘಟಾನುಘಟಿ ಆಟಗಾರರಲ್ಲಿ ದೊಡ್ಡಣ್ಣನಾದ ರೋಜರ್‌ ಫೆಡರರ್‌ ಕೂಡ ಖಚಿತ ನಿರ್ಧಾರಕ್ಕೆ ಬಂದಿಲ್ಲ. ಈ ಮೂವರೂ ಗ್ರ್ಯಾಂಡ್‌ಸ್ಲ್ಯಾಮ್‌ ಟೂರ್ನಿಗಳಲ್ಲಿ ತಲಾ 20 ಸಿಂಗಲ್ಸ್‌ ಪ್ರಶಸ್ತಿಗಳನ್ನು ಗೆದ್ದ ಮಹಾನ್‌ ಆಟಗಾರರು.

ಈಗಾಗಲೇ ಆಸ್ಟ್ರೇಲಿಯಾ ಓಪನ್‌, ಫ್ರೆಂಚ್‌ ಓಪನ್‌ ಮತ್ತು ವಿಂಬಲ್ಡನ್‌ಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿರುವ ಜೊಕೊವಿಚ್‌ ಅವರು ಟೋಕಿಯೊದಲ್ಲಿ ಮತ್ತು ವರ್ಷದ ಕೊನೆಗೆ ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಗೆದ್ದರೆ ‘ಚಿನ್ನದ ಸ್ಲ್ಯಾಮ್‌’ ಸಾಧನೆ ಮಾಡಿದಂತಾಗುತ್ತದೆ. ಈವರೆಗೆ ಜರ್ಮನಿಯ ಆಟಗಾರ್ತಿ ಸ್ಟೆಫಿ ಗ್ರಾಫ್‌ (1988ರಲ್ಲಿ) ಮಾತ್ರ ಇಂಥ ಅಪೂರ್ವ ಸಾಧನೆಗೆ ಪಾತ್ರರಾಗಿದ್ದಾರೆ.

ಒಂದೇ ವರ್ಷ ಎಲ್ಲ ನಾಲ್ಕೂ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದ ಕೊನೆಯ ಪುರುಷ ಆಟಗಾರ ಎಂದರೆ ಆಸ್ಟ್ರೇಲಿಯಾದ ರಾಡ್‌ ಲೇವರ್‌ ಮಾತ್ರ. ಅವರು 1969ರಲ್ಲಿ ಈ ಹಿರಿಮೆಗೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.