ADVERTISEMENT

ವಿಂಬಲ್ಡನ್ ಟೆನಿಸ್ ಟೂರ್ನಿ: ನೊವಾಕ್‌ಗೆ ಪ್ರಶಸ್ತಿ ಸಂಭ್ರಮ

ಫೆಡರರ್, ನಡಾಲ್ ದಾಖಲೆ ಸರಿಗಟ್ಟಿದ ಸರ್ಬಿಯಾ ಸ್ಟಾರ್

ಏಜೆನ್ಸೀಸ್
Published 11 ಜುಲೈ 2021, 19:51 IST
Last Updated 11 ಜುಲೈ 2021, 19:51 IST
ನೊವಾಕ್ ಜೊಕೊವಿಚ್ ಚೆಂಡನ್ನು ರಿಟರ್ನ್ ಮಾಡಿದ ರೀತಿ –ರಾಯಿಟರ್ಸ್ ಚಿತ್ರ
ನೊವಾಕ್ ಜೊಕೊವಿಚ್ ಚೆಂಡನ್ನು ರಿಟರ್ನ್ ಮಾಡಿದ ರೀತಿ –ರಾಯಿಟರ್ಸ್ ಚಿತ್ರ   

ಲಂಡನ್: ಮಟಿಯೊ ಬೆರೆಟಿನಿ ಅವರ ದಾಖಲೆಯ ಕನಸನ್ನು ನುಚ್ಚು ನೂರು ಮಾಡಿದ ಸರ್ಬಿಯಾದ ನೊವಾಕ್ ಜೊಕೊವಿಚ್‌ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಅವರು 6–7 (4/7), 6–4, 6–4, 6–3ರಲ್ಲಿ ಜಯ ಸಾಧಿಸಿದರು.

ಇದು ನೊವಾಕ್ ಅವರ 20ನೇ ಗ್ರ್ಯಾನ್‌ಸ್ಲಾಮ್‌ ಕಿರೀಟವಾಗಿದೆ. ಈ ಮೂಲಕ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ದಾಖಲೆಯನ್ನು ಸಮಗಟ್ಟಿದರು. ವಿಂಬಲ್ಡನ್‌ನಲ್ಲಿ ಆರು ಬಾರಿ ಚಾಂಪಿಯನ್ ಆದ ಶ್ರೇಯಸ್ಸು ಕೂಡ ಅವರದಾಯಿತು. ಇದು ವಿಂಬಲ್ಡನ್‌ನಲ್ಲಿ ಜೊಕೊವಿಚ್‌ಗೆ ಏಳನೇ ಮತ್ತು ಒಟ್ಟಾರೆ ಗ್ರ್ಯಾನ್‌ಸ್ಲಾಮ್‌ನಲ್ಲಿ 30ನೇ ಫೈನಲ್ ಆಗಿತ್ತು.

ವಿಂಬಲ್ಡನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಇಟಲಿಯ ಮೊದಲ ಆಟಗಾರ ಎಂಬ ದಾಖಲೆ ಸೃಷ್ಟಿಸಿರುವ ಬೆರೆಟಿನಿ ಪ್ರಶಸ್ತಿ ಗೆದ್ದು ಈ ಅವಕಾಶವನ್ನು ಅವಿಸ್ಮರಣೀಯವಾಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದರು. ಮೊದಲ ಸೆಟ್‌ನಲ್ಲಿ ಗೆಲುವು ಸಾಧಿಸಿ ಭರವಸೆಯನ್ನೂ ಮೂಡಿಸಿದ್ದರು. ಆದರೆ ಮುಂದಿನ ಮೂರು ಸೆಟ್‌ಗಳಲ್ಲಿ ಜೊಕೊವಿಚ್‌ ಏಕಪಕ್ಷೀಯ ಜಯ ಸಾಧಿಸಿದರು. ಜೊಕೊವಿಚ್‌ ವಿರುದ್ಧ ಬೆರೆಟಿನಿಗೆ ಇದು ಸತತ ಮೂರನೇ ಸೋಲು.

ADVERTISEMENT

ಮೊದಲ ಮಹಿಳಾ ಅಂಪೈರ್‌: ವಿಂಬಲ್ಡನ್ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಇದೇ ಮೊದಲ ಬಾರಿ ಮಹಿಳಾ ಚೇರ್ ಅಂಪೈರ್ ಕಾರ್ಯನಿರ್ವಹಿಸಿದರು. ಕ್ರೊವೇಷ್ಯಾದ 43 ವರ್ಷದ ಮರಿಜಾ ಸಿಕಾಕ್ ಆಲ್‌ ಇಂಗ್ಲೆಂಡ್ ಕ್ಲಬ್‌ನಲ್ಲಿ ಫೈನಲ್‌ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದರು.

ಭಾರತ ಮೂಲದ ಸಮೀರ್‌ಗೆ ಬಾಲಕರ ಸಿಂಗಲ್ಸ್ ಕಿರೀಟ

ಲಂಡನ್: ಭಾರತ ಮೂಲದ ಅಮೆರಿಕ ಟೆನಿಸ್ ಆಟಗಾರ ಸಮೀರ್ ಬ್ಯಾನರ್ಜಿ, ವಿಂಬಲ್ಡನ್ ಬಾಲಕರ ವಿಭಾಗದ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿದ್ದಾರೆ.

ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಅಮೆರಿಕದ ವಿಕ್ಟರ್ ಲಿಲೊವ್ ವಿರುದ್ಧ 7-5, 6-3ರ ಅಂತರದಲ್ಲಿ ಅವರು ಜಯ ಗಳಿಸಿದರು.

ಗ್ರ್ಯಾನ್‌ಸ್ಲಾಮ್ ಜೂನಿಯರ್ ವಿಭಾಗದಲ್ಲಿ17ರ ಹರೆಯದ ಸಮೀರ್ ಎರಡನೇ ಬಾರಿಗೆ ಸ್ಪರ್ಧಿಸಿದ್ದರು. ಸಮೀರ್ ಬ್ಯಾನರ್ಜಿ ಪೋಷಕರು ಭಾರತದ ಮೂಲದವರಾಗಿದ್ದು, 1980ರ ದಶಕದಲ್ಲಿ ಅಮೆರಿಕದಲ್ಲಿ ನೆಲೆಸಿದ್ದರು. ಇತ್ತೀಚೆಗಷ್ಟೇ ನಡೆದ ಫ್ರೆಂಚ್ ಓಪನ್‌ನಲ್ಲಿ 19ನೇ ರ‍್ಯಾಂಕ್‌ನ ಸಮೀರ್, ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು.

2009ರಲ್ಲಿ ಯೂಕಿ ಭಾಂಬ್ರಿ ಆಸ್ಟ್ರೇಲಿಯನ್ ಓಪನ್ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದ್ದರು.

ಜೊಕೊವಿಚ್ ವೃತ್ತಿಜೀವನದ ಪ್ರಮುಖ ಮೈಲುಗಲ್ಲುಗಳು

l20 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದು ರೋಜರ್ ಫೆಡರರ್, ರಫೆಲ್ ನಡಾಲ್ ದಾಖಲೆ ಸಮ; ಈ ಸಾಧನೆ ಮಾಡಿದ ಒಟ್ಟಾರೆ ಆರನೇ ಟೆನಿಸ್ ಪಟು.

lಸತತ ಮೂರು ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದ ನಾಲ್ಕನೇ ಆಟಗಾರ. ರೋಜರ್ ಫೆಡರರ್‌, ಬ್ಯಾನ್ ಬೋರ್ಗ್ ಮತ್ತು ಪೀಟ್ ಸಾಂಪ್ರಾಸ್ ಇತರ ಮೂವರು.

lಮೂರು ಬಾರಿ ಸತತ ಮೂರು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ಸಾಧನೆ. ಆಸ್ಟ್ರೇಲಿಯಾ ಓಪನ್‌ನಲ್ಲಿ 2011ರಿಂದ 2013, 2019ರಿಂದ 2021ರ ವರೆಗೆ ಪ್ರಶಸ್ತಿ ಗೆದ್ದುಕೊಂಡಿದ್ದರು.

lಋತುವೊಂದರ ಮೊದಲ ಮೂರು ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದ ಐದನೇ ಆಟಗಾರ. 1969ರ ನಂತರ ಈ ಸಾಧನೆ ಮಾಡಿದ ಮೊದಲ ಆಟಗಾರ. ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಎರಡು ಬಾರಿ ಗೆದ್ದ ಮೂರನೇ ಆಟಗಾರ.

(ಮಾಹಿತಿ: ರಾಯಿಟರ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.