ADVERTISEMENT

PV Web Exclusive: ಫ್ರೆಂಚ್ ಓಪನ್‌ನಲ್ಲಿ ಭರವಸೆಯ ಚಿಗುರು

ವಿಕ್ರಂ ಕಾಂತಿಕೆರೆ
Published 6 ಜೂನ್ 2021, 10:26 IST
Last Updated 6 ಜೂನ್ 2021, 10:26 IST
ಮಿಕಾಯೆಲ್ ಯೆಮರ್ ಅವರ ಆಟದ ಶೈಲಿ –ರಾಯಿಟರ್ಸ್ ಚಿತ್ರ
ಮಿಕಾಯೆಲ್ ಯೆಮರ್ ಅವರ ಆಟದ ಶೈಲಿ –ರಾಯಿಟರ್ಸ್ ಚಿತ್ರ   

ಫ್ರೆಂಚ್ ಓಪನ್ ಟೂರ್ನಿಯ ಆರು ಮತ್ತು ಏಳನೇ ದಿನ. ಭರವಸೆಯೊಂದಿಗೆ ಬಂದಿದ್ದ ಕೆಲವರು ಮೊದಲ ಎರಡು–ಮೂರು ಸುತ್ತುಗಳಲ್ಲೇ ಹೊರಬಿದ್ದು ತವರಿನತ್ತ ಸಾಗಿದ್ದರೆ, ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್ ನಡಾಲ್, ನೊವಾಕ್ ಜೊಕೊವಿಚ್‌, ರೋಜರ್ ಫೆಡರರ್, ಸ್ಟೆಫನೊಸ್ ಸಿಸಿಪಸ್, ಡ್ಯಾನಿಯಲ್ ಮೆಡ್ವೆಡೆವ್ ಮುಂತಾದವರು ಪುರುಷರ ವಿಭಾಗದಲ್ಲಿ ಜೈತ್ರಯಾತ್ರೆ ಮುಂದುವರಿಸಿದ್ದರು. ಮಹಿಳೆಯರ ವಿಭಾಗದಲ್ಲಂತೂ ವಿವಾದ, ಗಾಯದ ನೋವು ಮತ್ತು ಸೋಲಿನ ಆಘಾತದೊಂದಿಗೆ ಅಗ್ರ ಶ್ರೇಯಾಂಕಿತ ಮೂವರು ಮೂರನೇ ಸುತ್ತು ಮುಗಿಯುವಷ್ಟರಲ್ಲಿ ತವರಿನತ್ತ ಹೆಜ್ಜೆ ಹಾಕಿದ್ದರು.

ಈ ನಡುವೆ ಯುವ ಆಟಗಾರರಿಬ್ಬರು ಮೋಹಕ ಆಟದ ಮೂಲಕ ಟೆನಿಸ್ ಪ್ರೇಮಿಗಳ ಮನಗೆದ್ದರು. ಅಪೂರ್ವ ಸಾಧನೆಯನ್ನೂ ಮಾಡಿ ಮೊದಲ ವಾರದ ಹೀರೊಗಳಾದರು. ಇಟಲಿಯ ಲಾರೆನ್ಸೊ ಮುಸೆಟ್ಟಿ ಮತ್ತು ಸ್ವೀಡನ್‌ನ ಮಿಕಾಯೆಲ್ ಯೆಮರ್‌ ಆ ಆಟಗಾರರು. ಈ ಪೈಕಿ ಮಿಕಾಯೆಲ್ ಮೂರನೇ ಸುತ್ತಿನಲ್ಲಿ ಹೊರಬಿದ್ದರೆ ಲಾರೆನ್ಸೊ ಮುಸೆಟ್ಟಿ ನಾಲ್ಕನೇ ಸುತ್ತು ಪ್ರವೇಶಿಸಿದ್ದು ನೊವಾಕ್ ಜೊಕೊವಿಚ್‌ಗೆ ಸವಾಲೆಸೆಯಲು ಸಜ್ಜಾಗಿದ್ದಾರೆ.

ಮುಸೆಟ್ಟಿಗೆ ಈಗ ಕೇವಲ 19 ವರ್ಷ ವಯಸ್ಸು. ಇದು ಅವರ ಮೊದಲ ಗ್ರ್ಯಾನ್‌ಸ್ಲಾಂ ಟೂರ್ನಿ. ಭವಿಷ್ಯದ ಎಟಿಪಿ ಸ್ಟಾರ್ ಎಂದೇ ಟೆನಿಸ್ ಜಗತ್ತಿನಲ್ಲಿ ಖ್ಯಾತಿ ಗಳಿಸಿರುವ ಅವರು ತಮ್ಮದೇ ದೇಶದ ಮಾರ್ಕೊ ಸೆಚಿನಾಟೊ ಅವರನ್ನು ಐದು ಸೆಟ್‌ಗಳ ಪಂದ್ಯದಲ್ಲಿ ಮಣಿಸಿ ನಾಲ್ಕನೇ ಸುತ್ತು (ಪ್ರೀ ಕ್ವಾರ್ಟರ್ ಫೈನಲ್) ಪ್ರವೇಶಿಸಿದ್ದರು. ಸೆಚಿನಾಟೊ ಮೂರು ವರ್ಷಗಳ ಹಿಂದೆ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಆಟಗಾರ ಎಂಬುದನ್ನು ಮರೆಯುವಂತಿಲ್ಲ. ಈ ಗೆಲುವಿನೊಂದಿಗೆ, ಪದಾರ್ಪಣೆಯ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ ವಿಶ್ವದ ಆರನೇ ಆಟಗಾರ ಎಂಬ ಶ್ರೇಯಸ್ಸು ಮುಸೆಟ್ಟಿ ಅವರದಾಗಿತ್ತು.

ADVERTISEMENT

ಈ ವರ್ಷದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಅಸ್ಲಾನ್ ಕರಸೇವ್‌, ಕಳೆದ ಬಾರಿಯ ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಡ್ಯಾನಿಯಲ್ ಅಲ್ಟಮಿಯರ್‌, 2019ರ ಫ್ರೆಂಚ್ ಓಪನ್‌ ಟೂರ್ನಿಯಲ್ಲಿ ಜುವಾನ್ ಇಗ್ನೇಷಿಯೊ ಲಾಂಡೆರೊ, 2012ರ ಫ್ರೆಂಚ್ ಓಪನ್‌ನಲ್ಲಿ ಡೇವಿಡ್ ಗಫಿನ್ ಮತ್ತು 2000ನೇ ಇಸವಿಯ ಅಮೆರಿಕ ಓಪನ್‌ನಲ್ಲಿ ಹ್ಯುಂಗ್ ಟೇಕ್ ಲೀ ಅವರು ಈ ಸಾಧನೆ ಮಾಡಿದ್ದರು.

ಟೆನಿಸ್ ಪ್ರಿಯ ಕುಟುಂಬ
22 ವರ್ಷದ ಯೆಮರ್ ಮೊದಲ ಸುತ್ತಿನಲ್ಲಿ ಸ್ಪೇನ್‌ನ ಗಾರ್ಬಲೀಸ್ ಬಯೇನಾ ಎದುರು ಪ್ರಬಲ ಹೋರಾಟದ ಮೂಲಕ ಗೆದ್ದು ‘ಐದು ಸೆಟ್‌ಗಳ ತಾರೆ’ ಎಂಬ ಹೆಸರು ಗಳಿಸಿದ್ದರು. ಗಯೆಲ್ ಮೊಂಫಿಲ್ಸ್‌ ಎದುರಿನ ಪಂದ್ಯವನ್ನು ಗೆಲ್ಲುವ ಮೂಲಕ ಫ್ರೆಂಚ್ ಓಪನ್‌ನಲ್ಲಿ ಒಂದು ದಶಕದ ನಂತರ ಮೂರನೇ ಸುತ್ತು ಪ್ರವೇಶಿಸಿದ ಸ್ವೀಡನ್ ಆಟಗಾರ ಎನಿಸಿಕೊಂಡಿದ್ದರು. ರಾಬಿನ್ ಸೊಡೆರ್ಲಿಂಗ್‌ ನಂತರ ಸ್ವೀಡನ್‌ನ ಯಾರು ಕೂಡ ಈ ಹಂತ ತಲುಪಿರಲಿಲ್ಲ.

ಮಿಕಾಯೆಲ್ ಅವರದು ಟೆನಿಸ್ ಪ್ರಿಯ ಕುಟುಂಬ. ಅವರು ಟೂರ್ನಿಯಲ್ಲಿ ಆಡಲು ಹಿರಿಯಣ್ಣ ಏಲಿಯಾಸ್ ಯೆಮರ್‌ ಜೊತೆ ಬಂದಿದ್ದರು. ಆದರೆ ಅಣ್ಣ ಅರ್ಹತಾ ಸುತ್ತಿನಲ್ಲೇ ಹೊರಬಿದ್ದು ವಾಪಸಾಗಿದ್ದರು. ಐದು ಸೆಟ್‌ಗಳ ಪಂದ್ಯ ಆಡಿದ ನಂತರವೂ ದಣಿಯದ ಈ ಆಟಗಾರನಿಗೆ ತಮ್ಮ ಫಿಟ್‌ನೆಸ್‌ ಮೇಲೆ ಅಪಾರ ನಂಬಿಕೆ ಇದೆ. ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಸಂದರ್ಭದಲ್ಲಿ ಎರಡು ವಾರ ಗ್ರೀಸ್‌ನ ಸ್ಟೆಫನೊಸ್ ಸಿಸಿಪಸ್‌ ಅವರ ‘ಅಭ್ಯಾಸದ ಜೊತೆಗಾರ’ ಆಗಿದ್ದ ಮಿಕಾಯೆಲ್ ಅವರ ಚುರುಕಿನ ಆಟ ಟೆನಿಸ್ ಅಂಗಣದಲ್ಲಿ ಭರವಸೆಯನ್ನು ಮೂಡಿಸಿದೆ.
ಬೇಸ್‌ಲೈನ್‌ನಲ್ಲಿ ನಿಂತು ಬಲಶಾಲಿ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸುವುದರಲ್ಲೂ ನೆಟ್ ಬಳಿ ಮೋಹಕ ಡ್ರಾಪ್‌ಗಳನ್ನು ಹಾಕುವ ತಂತ್ರಗಳ ಮೂಲಕ ಪಾಯಿಂಟ್‌ಗಳನ್ನು ಹೆಕ್ಕುವುದರಲ್ಲೂ ನೈಪುಣ್ಯ ಹೊಂದಿರುವ ಮುಸೆಟ್ಟಿ ಮೂರನೇ ಸುತ್ತಿನ ಪಂದ್ಯದಲ್ಲಿ ಅಚ್ಚರಿಯ ರಿವರ್ಸ್ ಹೊಡೆತಗಳ ಮೂಲಕವೂ ಟ್ವೀನರ್‌ಗಳ ಮೂಲಕವೂ ಮಿಂಚಿದ್ದರು. ನೆಟ್ ಬಳಿಯಿಂದ ಹಿಂದಕ್ಕೆ ಓಡಿ ಬೇಸ್‌ಲೈನ್‌ ಹೊರಗಿನಿಂದ ಚೆಂಡನ್ನು ರಿಟರ್ನ್ ಮಾಡುವ ಅಪರೂಪದ ಹೊಡೆತದೊಂದಿಗೆ ಅಚ್ಚರಿ ಮೂಡಿಸಿದ್ದರು. ಹೀಗಾಗಿ ಈ ಆಟಗಾರನೂ ಟೆನಿಸ್ ಜಗತ್ತಿನಲ್ಲಿ ಮುಂದೆ ವಿಶಿಷ್ಟ ಮೈಲುಗಲ್ಲುಗಳನ್ನು ಸ್ಥಾಪಿಸುವ ನಿರೀಕ್ಷೆ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.