ADVERTISEMENT

ಫ್ರೆಂಚ್‌ ಓಪನ್‌: ‘ಗಡಿ ದಾಟಿದ’ ರೈಬಾಕಿನಾಗೆ ಸೆರೆನಾ ಎದುರಾಳಿ

ಎಂಟರ ಘಟ್ಟದಲ್ಲಿ ಸ್ಥಾನ ಪಡೆಯಲು ಪೈಪೋಟಿ

ಏಜೆನ್ಸೀಸ್
Published 5 ಜೂನ್ 2021, 12:53 IST
Last Updated 5 ಜೂನ್ 2021, 12:53 IST
ಎಲೆನಾ ರೈಬಾಕಿನಾ
ಎಲೆನಾ ರೈಬಾಕಿನಾ   

ಪ್ಯಾರಿಸ್‌ (ಎಎಫ್‌ಪಿ): ‘ಗಡಿ ದಾಟಿರುವ’ ಎಲೆನಾ ರೈಬಾಕಿನಾ, ಫ್ರೆಂಚ್‌ ಓಪನ್‌ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಥಾನ ಪಡೆಯಲು ಅಮೆರಿಕದ ಅನುಭವಿ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅವರನ್ನು ಭಾನುವಾರ ಎದುರಿಸಬೇಕಾಗಿದೆ. ಆದರೆ ಮೂರು ವರ್ಷಗಳಿಂದ ಕಜಕಸ್ತಾನ ಪರ ಆಡುತ್ತಿರುವ ರೈಬಾಕಿನಾ, ತಮ್ಮ ಮೂಲದೇಶ ರಷ್ಯಾದಿಂದ ‘ಅಸೂಯೆಯ ನೋಟ‘ವನ್ನೂ ಎದುರಿಸಬೇಕಾಗಿದೆ.

ಮಾಸ್ಕೊದಲ್ಲಿ ಜನಿಸಿದ ರೈಬಾಕಿನಾ, 2018ರಲ್ಲಿ ನೆರೆಯ ಕಜಕಸ್ತಾನಕ್ಕೆ ನಿಷ್ಠೆ ಬದಲಾಯಿಸಿದ್ದರು. ವಿಶ್ವ ಕ್ರಮಾಂಕಪಟ್ಟಿಯಲ್ಲಿ 175ನೇ ಸ್ಥಾನದಲ್ಲಿದ್ದ ಎಲೆನಾ ಆಗ ಪರದಾಡುತ್ತಿದ್ದರು. ಈಗ ಅವರು, ತಮ್ಮನ್ನು ದತ್ತು ತೆಗೆದುಕೊಂಡಿರುವ ದೇಶದ ಅಗ್ರಮಾನ್ಯ ಆಟಗಾರ್ತಿ, ವಿಶ್ವ ಕ್ರಮಾಂಕಪಟ್ಟಿಯಲ್ಲಿ ದೈತ್ಯ ಹೆಜ್ಜೆಗಳನ್ನಿಡುತ್ತಾ 22ನೇ ಕ್ರಮಾಂಕಕ್ಕೆ ದಾಪುಗಾಲಿಟ್ಟಿದ್ದಾರೆ.

21 ವರ್ಷದ ಈ ಆಟಗಾರ್ತಿ, ತವರು ರಷ್ಯದಲ್ಲೇ ಉಳಿದುಕೊಂಡಿದ್ದರೆ ಆ ದೇಶದ ಅಗ್ರಮಾನ್ಯ ಆಟಗಾರ್ತಿ ಎಂಬ ಗೌರವ ತನ್ನದಾಗಿಸಿಕೊಳ್ಳುತ್ತಿದ್ದರು. ಈಗ 30ನೇ ಕ್ರಮಾಂಕದ ವೆರೊನಿಕಾ ಕುಡೆರ್‌ಮೆಟೊವಾ ಪ್ರಸ್ತುತ ರಷ್ಯದ ಟಾಪ್‌ ಆಟಗಾರ್ತಿ.

ADVERTISEMENT

ಕಜಕಸ್ತಾನಕ್ಕೆ ವಲಸೆಹೋಗಿರುವ ಕ್ರೀಡಾಪಟುಗಳಲ್ಲಿ ರೈಬಾಕಿನಾ ಇತ್ತೀಚಿನವರು. ‘ಕಜಕಸ್ತಾನದ ಫೆಡರೇಷನ್‌ ನನಗೆ ಒಳ್ಳೆಯ ಕೊಡುಗೆ ನೀಡಿ ಆಮಂತ್ರಿಸಿತು. ನನಗೆ ನಿರ್ಧಾರ ಕೈಗೊಳ್ಳುವುದು ಸುಲಭವಾಯಿತು’ ಎಂದು ಅವರು 2020ರಲ್ಲಿ ತಿಳಿಸಿದ್ದರು.

‘ಕಜಕಸ್ತಾನ ನನ್ನಲ್ಲಿ ನಂಬಿಕೆಯಿಟ್ಟು ಬರುವಂತೆ ಆಹ್ವಾನ ನೀಡಿತು. ಹೀಗಾಗಿ ನಾನು ಪೌರತ್ವ ಬದಲಾಯಿಸಿದೆ. ಅವರು ದೇಶಕ್ಕೆ ಕರೆದಾಗ ನನ್ನ ಆಟ ಹೇಳಿಕೊಳ್ಳುವಷ್ಟು ಉನ್ನತ ಮಟ್ಟದಲ್ಲಿರಲಿಲ್ಲ’ ಎನ್ನುತ್ತಾರೆ ಈ ಬೆಡಗಿ.

ಕಜಕಸ್ತಾನ ಧ್ವಜದಡಿ ಆಡತೊಡಗಿದ ಮೇಲೆ ರೈಬಾಕಿನಾ ಅವರು ವೃತ್ತಿಜೀವನದಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಅವರ ಗಳಿಕೆ 1.5 ದಶಲಕ್ಷ ಡಾಲರ್‌ಗಳಿಗೆ ಏರಿದೆ.

ಹಲವು ಕೊಡುಗೆಗಳನ್ನು ನೀಡುವುದಾಗಿ ಆಮಿಷವೊಡ್ಡಿ ಟೆನಿಸ್‌ ಆಟಗಾರರನ್ನು ಕಜಕಸ್ತಾನ ತನ್ನ ಗಡಿಯೊಳಕ್ಕೆ ಸೆಳೆದುಕೊಳ್ಳುತ್ತಿದೆ. ಕಜಕಸ್ತಾನ ಟೆನಿಸ್‌ ಫೆಡರೇಷನ್‌ಗೆ ದೀರ್ಘಕಾಲದಿಂದ ಅಧ್ಯಕ್ಷರಾಗಿರುವ ಬುಲಾತ್ ಉಟೆಮುರಟೋವ್‌ ಅವರ ವಿಶ್ವದ ಕುಬೇರಲ್ಲಿ ಒಬ್ಬರು. ಫೋಬ್ಸ್ ಪಟ್ಟಿಯಲ್ಲಿರುವ ಶತಕೋಟ್ಯಾಧಿಪತಿ.

ಪ್ರಸ್ತುತ ಕಜಕಸ್ತಾನದ ಐವರು ಅಗ್ರಮಾನ್ಯ ಟೆನಿಸ್‌ ಆಟಗಾರ್ತಿಯಲ್ಲಿ ಮೊದಲ ನಾಲ್ಕು ಮಂದಿ ರಷ್ಯದಲ್ಲಿ ಟೆನಿಸ್‌ ಕಲಿತು ಬೆಳೆದವರು.

ವಿಶ್ವದ 43ನೇ ಕ್ರಮಾಂಕದ ಯುಲಿಯಾ ಪುಟಿಂಟ್‌ಸೆವ ಕೂಡ ಮಾಸ್ಕೊದವರು. ಕೆಲವೇ ವರ್ಷದ ಹಿಂದಿನವರೆಗೆ ವಿಶ್ವದ ಟಾಪ್‌–30 ರೊಳಗೆ ಮಿಂಚಿದವರು. ಮೂರು ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ತನಕ ಏರಿದವರು.

ಪುರುಷರ ವಿಭಾಗದಲ್ಲಿ ಆ ದೇಶದ ಅಗ್ರಮಾನ್ಯ ಆಟಗಾರ, 23ರ ಹರೆಯದ ಅಲೆಕ್ಸಾಂಡರ್‌ ಬುಬ್ಲಿಕ್‌ ಕೂಡ ರಷ್ಯ ಮೂಲದವರು. 37ನೇ ಕ್ರಮಾಂಕದ ಈ ಆಟಗಾರ 2016ರಲ್ಲಿ ರಷ್ಯ ತ್ಯಜಿಸಿದ್ದರು. ಮಿಖಾಯಿಲ್‌ ಕುಕುಶ್ಕಿನ್‌ ಮತ್ತು ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಜನಿಸಿದ ಡಿಮಿಟ್ರಿ ಪೊಪ್ಕೊ ರಷ್ಯ ಮೂಲದ ಇತರ ಆಟಗಾರರು.

ಡೇವಿಸ್‌ ಕಪ್‌ನಲ್ಲಿ ಕಜಕಸ್ತಾನ 2011ರಲ್ಲಿ ಮೊದಲ ಬಾರಿ ವಿಶ್ವ ಗುಂಪಿಗೇರಿತು. ನಂತರದ ವರ್ಷಗಳಲ್ಲಿ ಐದು ಬಾರಿ ಎಂಟರ ಘಟಕ್ಕೆ ಏರಿ ತಾಕತ್ತು ತೋರಿಸಿದೆ. 2021ರ ಡೇವಿಸ್‌ ಕಪ್‌ ಫೈನಲ್‌ಗೂ ಏರಿದೆ. ಕ್ವಾಲಿಫೈರ್‌ನಲ್ಲಿ ಈ ತಂಡ, ದಿ ನೆದರ್ಲೆಂಡ್ಸ್‌ ವಿರುದ್ಧ ಜಯಗಳಿಸಿತ್ತು.

ರೈಬಕಿನಾ ಪ್ರಮುಖ ಟೂರ್ನಿಯೊಂದರಲ್ಲಿ ಮೊದಲ ಬಾರಿ ಎಂಟರ ಘಟ್ಟಕ್ಕೆ ಏರುವ ಸನ್ನಾಹದಲ್ಲಿದ್ದಾರೆ. ಇನ್ನೊಂದೆಡೆ ಸೆರೆನಾ ಅವರು 24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದು ದಾಖಲೆ ಸರಿಗಟ್ಟುವ ಪ್ರಯತ್ನದಲ್ಲಿದ್ದಾರೆ. ‘ಅವರು ಆಟದ ದಂತಕತೆ. ಕೋರ್ಟ್‌ನಲ್ಲಿ ಅವರ ಜೊತೆ ಕಳೆಯುವ ತವಕದಿಂದ ಇದ್ದೇನೆ’ ಎಂದರು ರೈಬಾಕಿನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.