ADVERTISEMENT

Tokyo Olympics | ಸುಮಿತ್ ನಗಾಲ್‌ ಐತಿಹಾಸಿಕ ಸಾಧನೆ

ಒಲಿಂಪಿಕ್ಸ್‌ ಟೆನಿಸ್‌: ಪುರುಷರ ಸಿಂಗಲ್ಸ್ ವಿಭಾಗದಲ್ಲಿ 2ನೇ ಸುತ್ತು ಪ್ರವೇಶಿಸಿದ ಮೂರನೇ ಭಾರತೀಯ

ಪಿಟಿಐ
Published 24 ಜುಲೈ 2021, 9:04 IST
Last Updated 24 ಜುಲೈ 2021, 9:04 IST
ಸುಮಿತ್ ನಗಾಲ್‌– ಪಿಟಿಐ ಸಂಗ್ರಹ ಚಿತ್ರ
ಸುಮಿತ್ ನಗಾಲ್‌– ಪಿಟಿಐ ಸಂಗ್ರಹ ಚಿತ್ರ   

ಟೋಕಿಯೊ: ಅಮೋಘ ಆಟವಾಡಿದ ಟೆನಿಸ್‌ ಆಟಗಾರ ಸುಮಿತ್ ನಗಾಲ್‌ ಟೋಕಿಯೊ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಜಯ ಸಾಧಿಸುವುದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಈ ಶ್ರೇಯ ಗಳಿಸಿದ ಭಾರತದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

ಅರಿಯೇಕ್‌ ಟೆನಿಸ್‌ ಅಂಗಣದ ಕೋರ್ಟ್‌ 10ರಲ್ಲಿ ನಡೆದ ಹಣಾಹಣಿಯಲ್ಲಿ ಭಾರತದ ಆಟಗಾರ 6-4 6-7(6) 6-4ರಿಂದ ಉಜ್ಬೆಕಿಸ್ತಾನದ ಡೆನಿಸ್ ಇಸ್ತೊಮಿನ್ ಅವರ ಸವಾಲು ಮೀರಿದರು. ಇದರೊಂದಿಗೆ 25 ವರ್ಷಗಳ ಬಳಿಕ ಒಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನ ತಡೆ ದಾಟಿದ ಮೊದಲ ಭಾರತೀಯ ಎಂಬ ಶ್ರೇಯವೂ ಅವರದಾಯಿತು. ಎರಡನೇ ಸುತ್ತಿನ ಹಣಾಹಣಿಯಲ್ಲಿ ಅವರಿಗೆ ಕಠಿಣ ಸವಾಲು ಎದುರಾಗಿದ್ದು, ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರನ್ನು ಎದುರಿಸಬೇಕಿದೆ.

1996ರ ಅಟ್ಲಾಂಟ ಒಲಿಂಪಿಕ್ಸ್‌ನ ಸಿಂಗಲ್ಸ್ ವಿಭಾಗದಲ್ಲಿ ಲಿಯಾಂಡರ್‌ ಪೇಸ್ ಅವರು ಕಂಚಿನ ಪದಕ ಗೆದ್ದ ಬಳಿಕ ಯಾರೂ ಮೊದಲ ಸುತ್ತಿನಲ್ಲಿ ಜಯಿಸಿರಲಿಲ್ಲ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ವಿಷ್ಣುವರ್ಧನ್ ಮತ್ತು ಸೋಮದೇವ್ ದೇವವರ್ಮನ್‌ ಸ್ಪರ್ಧಿಸಿದ್ದರೂ ಮೊದಲ ತಡೆ ದಾಟುವಲ್ಲಿ ಸಾಧ್ಯವಾಗಿರಲಿಲ್ಲ.

23 ವರ್ಷದ ನಗಾಲ್‌, ಮೊದಲ ಸುತ್ತಿನ ಆರನೇ ಗೇಮ್‌ನಲ್ಲಿ ಸಿಕ್ಕ ಬ್ರೇಕ್ ಅವಕಾಶವನ್ನು ಪಾಯಿಂಟ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಆದರೂ ಅದ್ಭುತ ಆಟವಾಡಿ ಸೆಟ್ ವಶಪಡಿಸಿಕೊಂಡರು. ಎರಡನೇ ಸೆಟ್‌ ಆರಂಭದಲ್ಲಿ ಭಾರತದ ಆಟಗಾರನಿಗೆ 2–0 ಮುನ್ನಡೆ ಸಿಕ್ಕಿತು. ಇದು 4–1ಕ್ಕೆ ಮುಂದುವರಿಯಿತು. ತಿರುಗೇಟು ನೀಡಿದ ಇಸ್ತೊಮಿನ್ ಟೈಬ್ರೇಕ್‌ವರೆಗೆಸೆಟ್‌ ಕೊಂಡೊಯ್ದು ತಮ್ಮದಾಗಿಸಿಕೊಂಡರು. ಮೂರನೇ ಮತ್ತು ಅಂತಿಮ ಸೆಟ್‌ನಲ್ಲಿ ಲಯಕ್ಕೆ ಮರಳಿದ ಭಾರತದ ಆಟಗಾರ ಪಂದ್ಯ ಗೆದ್ದುಕೊಂಡರು.

ಸಿಂಗಲ್ಸ್ ವಿಭಾಗದ ಮೊದಲ ಪಂದ್ಯ ಗೆದ್ದ ಭಾರತದ ಆಟಗಾರರು (ಆಟಗಾರ; ಒಲಿಂಪಿಕ್ಸ್; ಹಂತ)

ಜೀಶನ್ ಅಲಿ; 1988, ಸೋಲ್‌; ಮೊದಲ ಸುತ್ತಿನ ಜಯ
ಲಿಯಾಂಡರ್ ಪೇಸ್‌; 1996, ಅಟ್ಲಾಂಟ; ಕಂಚಿನ ಪದಕ
ಸುಮಿತ್ ನಗಾಲ್‌; ಟೋಕಿಯೊ, 2021; ಮೊದಲ ಸುತ್ತಿನಲ್ಲಿ ಜಯ*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.