ADVERTISEMENT

ಟೆನಿಸ್‌ ಟೂರ್ನಿ: ಸೆಹಜ್‌, ಸುಶ್ಮಿತಾಗೆ ಪ್ರಶಸ್ತಿ ಗರಿ

ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 10:21 IST
Last Updated 17 ಸೆಪ್ಟೆಂಬರ್ 2021, 10:21 IST
ಪ್ರಶಸ್ತಿಗಳೊಂದಿಗೆ ಸಂಭ್ರಮಿಸಿದ ಸುಶ್ಮಿತಾ ರವಿ (ಎಡ) ಮತ್ತು ಸೆಹಜ್ ಸಿಂಗ್‌
ಪ್ರಶಸ್ತಿಗಳೊಂದಿಗೆ ಸಂಭ್ರಮಿಸಿದ ಸುಶ್ಮಿತಾ ರವಿ (ಎಡ) ಮತ್ತು ಸೆಹಜ್ ಸಿಂಗ್‌   

ಬೆಂಗಳೂರು: ಸೆಹಜ್ ಸಿಂಗ್‌ ಹಾಗೂ ಸುಶ್ಮಿತಾ ರವಿ ಅವರು ಎಐಟಿಎ ಸಿಎಸ್‌7 14 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಕೆಎಸ್‌ಎಲ್‌ಟಿಎ ಆಶ್ರಯದಲ್ಲಿ ನಡೆದ ಟೂರ್ನಿಯ ಬಾಲಕರಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಶುಕ್ರವಾರ ಸೆಹಜ್‌ ಅವರು ಲೀತಾಯಿಶ್ ಸವಾಲು ಮೀರಿದರು. ಅವರಿಗೆ 6-2, 6-3ರಿಂದ ಗೆಲುವು ಒಲಿಯಿತು. ಬಾಲಕಿಯರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸುಶ್ಮಿತಾ 6-3, 6-3ರಿಂದ ಕಾಶ್ವಿ ಸುನಿಲ್ ಎದುರು ಗೆದ್ದು ಬೀಗಿದರು.

ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ ಸೆಹಜ್ ಆರಂಭದಿಂದಲೇ ಮುನ್ನಡೆ ಸಾಧಿಸಿದರು. 3–0ಯಿಂದ ಮುನ್ನಡೆದ ಅವರು ಎಂಟನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು ಮೊದಲ ಸೆಟ್ ಜಯಿಸಿದರು. ಅದೇ ಲಯದಲ್ಲಿ ಮುಂದುವರಿದು ಎರಡನೇ ಸೆಟ್‌ನೊಂದಿಗೆ ಜಯವನ್ನೂ ಒಲಿಸಿಕೊಂಡರು.

ADVERTISEMENT

ಲೀತಾಯಿಶ್ ಹಾಗೂ ಕಾಶ್ವಿ ಅವರು ಸಿಂಗಲ್ಸ್ ವಿಭಾಗಗಳಲ್ಲಿ ಅನುಭವಿಸಿದ್ದ ನಿರಾಸೆಯನ್ನು ಡಬಲ್ಸ್‌ನಲ್ಲಿ ಜಯಿಸುವುದರ ಮೂಲಕ ಮರೆತರು.

ಬಾಲಕರ ಡಬಲ್ಸ್‌ನಲ್ಲಿ ಲೀತಾಯಿಶ್–ನಿಖಿಲ್ ಶ್ರೀನಿವಾಸ್ ಜೋಡಿಯು 7-5, 6-2ರಿಂದ ನಿಹಾರ್ ಹಾಗೂ ಶೌರ್ಯ ಬಿ. ಜೋಡಿಯನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು. ಬಾಲಕಿಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಕಾಶ್ವಿ–ಸಾನ್ವಿ ಮಿಶ್ರಾ ಅವರು 4-6, 6-3, 6-4ರಿಂದ ಪಾರ್ಥಸಾರಥಿ ಮುಂಡೆ–ಲಕ್ಷಿತಾ ಗೋಪಿನಾಥ್ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.