ADVERTISEMENT

ವಿಂಬಲ್ಡನ್: ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಪ್ಲಿಸ್ಕೋವ ಕಣ್ಣು

ಆ್ಯಶ್ಲಿ ಬಾರ್ಟಿಗೂ ಜಯದ ಕನಸು

ಏಜೆನ್ಸೀಸ್
Published 9 ಜುಲೈ 2021, 16:27 IST
Last Updated 9 ಜುಲೈ 2021, 16:27 IST
ಆ್ಯಶ್ಲಿ ಬಾರ್ಟಿ ಮತ್ತು ಕರೋಲಿನಾ ಪ್ಲಿಸ್ಕೋವ
ಆ್ಯಶ್ಲಿ ಬಾರ್ಟಿ ಮತ್ತು ಕರೋಲಿನಾ ಪ್ಲಿಸ್ಕೋವ   

ವಿಂಬಲ್ಡನ್‌: ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಕನಸಿನಲ್ಲಿರುವ ಜೆಕ್‌ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಶನಿವಾರ ಅಗ್ರಶ್ರೇಯಾಂಕದ ಆ್ಯಶ್ಲಿ ಬಾರ್ಟಿ ಸವಾಲು ಎದುರಿಸಲಿದ್ದಾರೆ.

ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ, ತಾನಾಡಿದ ಕಳೆದ ಏಳು ಗ್ರ್ಯಾನ್‌ಸ್ಲಾಮ್ ಟೂರ್ನಿಗಳ ಪೈಕಿ ಒಂದರಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದು, ಇಲ್ಲಿ ಎರಡನೇ ಟ್ರೋಫಿಗೆ ಪ್ರಯತ್ನಿಸಲಿದ್ದಾರೆ. 2019ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಅವರು ಚಾಂಪಿಯನ್ ಆಗಿದ್ದರು.

ಸೆಮಿಫೈನಲ್‌ ಹಣಾಹಣಿಯಲ್ಲಿ ಎಂಟನೇ ಶ್ರೇಯಾಂಕದ ಪ್ಲಿಸ್ಕೋವ ಎರಡನೇ ಶ್ರೇಯಾಂಕದ ಅರಿನಾ ಸಬಲೆಂಕಾ ಅವರನ್ನು ಪರಾಭವಗೊಳಿಸಿದ್ದರು.

ADVERTISEMENT

ಇಲ್ಲಿ ಪ್ರಶಸ್ತಿ ಗೆದ್ದರೆ ಅಪರೂಪದ ಸಾಧನೆಯೊಂದಕ್ಕೆ ಜೆಕ್ ಗಣರಾಜ್ಯದ ಆಟಗಾರ್ತಿ ಭಾಜನರಾಗಲಿದ್ದಾರೆ. ಟೆನಿಸ್‌ನ ‘ಓಪನ್ ಯುಗ‘ ಆರಂಭವಾದ ಬಳಿಕ, ಮೊದಲೆರಡು ಶ್ರೇಯಾಂಕದಲ್ಲಿರುವ ಆಟಗಾರ್ತಿಯರನ್ನು ಮಣಿಸಿ ವಿಂಬಲ್ಡನ್‌ ಟ್ರೋಫಿ ಜಯಿಸಿದ ನಾಲ್ಕನೇ ಮಹಿಳೆ ಎನಿಸಿಕೊಳ್ಳಲಿದ್ದಾರೆ.

ಅಮೆರಿಕದ ವೀನಸ್‌ ವಿಲಿಯಮ್ಸ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. 2000ರ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಮೊದಲ ಶ್ರೇಯಾಂಕದ ಮಾರ್ಟಿನಾ ಹಿಂಗಿಸ್‌ ಅವರನ್ನು ಮಣಿಸಿದ್ದ ಅವರು ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಲಿಂಡ್ಸೆ ಡೆವನ್‌ಪೋರ್ಟ್‌ ಅವರಿಗೆ ಸೋಲುಣಿಸಿದ್ದರು. 2005ರ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಮರಿಯಾ ಶರಪೋವಾ ಎದುರು ಮತ್ತು ಫೈನಲ್‌ನಲ್ಲಿ ಮೊದಲ ಶ್ರೇಯಾಂಕದ ಡೆವನ್‌ಪೋರ್ಟ್‌ ವಿರುದ್ಧ ವೀನಸ್ ಗೆದ್ದಿದ್ದರು.

1969ರಲ್ಲಿ ಇಂಗ್ಲೆಂಡ್‌ನ ಆ್ಯನ್ ಜೋನ್ಸ್ ಮತ್ತು 1971ರ ವಿಂಬಲ್ಡನ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಇವಾನ್ ಗೂಲಗಾಂಗ್ಕಾವ್ಲಿ ಈ ಸಾಧನೆ ಮಾಡಿದ್ದರು.

1980ರಲ್ಲಿ ಗೂಲಗಾಂಗ್ ಎರಡನೇ ಬಾರಿ ವಿಂಬಲ್ಡನ್‌ ಪ್ರಶಸ್ತಿ ಗೆದ್ದಿದ್ದರು. ಅವರ ಬಳಿಕ ಟೂರ್ನಿಯ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾದ ಮೊದಲ ಮಹಿಳೆಯಾಗಿದ್ದಾರೆ ಬಾರ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.