ADVERTISEMENT

ಪ್ರಮುಖ ಆಕರ್ಷಣೆ ‘ಪರಮೇಶ್ವರ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 19:36 IST
Last Updated 15 ನವೆಂಬರ್ 2018, 19:36 IST
ಗಿರ್‌ ತಳಿಯ ಹೋರಿ ’ಪರಮೇಶ್ವರ’
ಗಿರ್‌ ತಳಿಯ ಹೋರಿ ’ಪರಮೇಶ್ವರ’   

ಬೆಂಗಳೂರು:ಈ ಬಾರಿಯ ಕೃಷಿ ಮೇಳದ ಪ್ರಮುಖ ಆಕರ್ಷಣೆ ‘ಪರಮೇಶ್ವರ’. ವಸ್ತು ಪ್ರದರ್ಶನ ಏರ್ಪಡಿಸಿದ್ದ ಮೈದಾನದ ಪ್ರವೇಶ ದ್ವಾರದ ಬಳಿಯೇ ವಿರಾಜಮಾನವಾಗಿರುವ ‘ಪರಮೇಶ್ವರ’ನತ್ತ ಕಣ್ಣು ಹಾಯಿಸದೇ ಯಾರೂ ಮುಂದೆ ಹೋಗುತ್ತಿರಲಿಲ್ಲ.

ಆಳೆತ್ತರದ ದೇಹ, ರಾಜಗಾಂಭೀರ್ಯ ಹಾಗೂ ಕಟ್ಟು ಮಸ್ತಾದ ಶರೀರದ ಈ ಹೋರಿಯನ್ನು ಕಣ್ತುಂಬಿಕೊಳ್ಳುವುದೇ ಹಬ್ಬ. ಗುಜರಾತ್‌ನ ಗಿರ್‌ ತಳಿಯ ಈ ಹೋರಿಯನ್ನು ಕಾಣಲು, ಇದರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಜನ ಮುಗಿಬಿದ್ದರು.

ಗುಜರಾತ್‌ನ ಗಿರ್‌ ಅರಣ್ಯ ಪ್ರದೇಶದಲ್ಲಿ ಈ ಜಾತಿಯ ಹೋರಿಗಳ ಮೂಲ ನೆಲೆ. ಇವುಗಳ ಸಂತತಿ ನಶಿಸುತ್ತಾ ಬಂದಿದೆ. ಇಡೀ ದೇಶದಲ್ಲೇ ಶುದ್ಧ ಗಿರ್‌ ತಳಿಯ ಕೇವಲ ಐದು ಹೋರಿಗಳಿವೆ. ಅವುಗಳಲ್ಲಿ ‘ಪರಮೇಶ್ವರ’ನೂ ಒಬ್ಬ’ ಎಂದು ಕೃಷಿ ವಿಶ್ವವಿದ್ಯಾಲಯದ ಪಶುವಿಜ್ಞಾನ ವಿಭಾಗದ ಮುಖ್ಯ ಪ್ರೊ.ಚಿದಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಹೋರಿಗೀಗ 7 ವರ್ಷ. ಕನಕಪುರ ಕೋಡಿಹಳ್ಳಿಯ ಮಧುಬನ ಫಾರ್ಮ್‌ನ ಮಾಲೀಕ ಯತೀಶ್‌ ಅವರು ಇದನ್ನು ಸಾಕುತ್ತಿದ್ದಾರೆ. ಅವರು 2 ವರ್ಷಗಳ ಹಿಂದೆ ಖರೀದಿಸಿದ್ದರು. ಅವರ ಬಳಿ ಈ ತಳಿಯ ಒಂದು ಹಸು ಹಾಗೂ ಒಂದು ಕರು ಇದೆ’ ಎಂದು ಅವರು ತಿಳಿಸಿದರು.

‌‘ಈ ಹೋರಿಯಿಂದ ಪ್ರತಿ ತಿಂಗಳು 100 ಡೋಸ್‌ಗಳಷ್ಟು ವೀರ್ಯಗಳನ್ನು ಪಡೆಯಲಾಗುತ್ತಿದೆ. ಪ್ರತಿ ಡೋಸ್‌ಗೂ ₹ 1200 ಬೆಲೆ ಇದೆ. ವೀರ್ಯ ಪಡೆದು ಸಂಸ್ಕರಿಸುವುದಕ್ಕೆ ₹ 25 ಸಾವಿರ ವೆಚ್ಚ ತಗಲುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.