ADVERTISEMENT

ಟೇಬಲ್ ಮಧ್ಯೆ ಫೈಬರ್ ಗ್ಲಾಸ್‌ ಅಳವಡಿಕೆ

ಸೋಂಕು ತಡೆಗೆ ಹೋಟೆಲ್ ಮಾಲೀಕರ ವಿಭಿನ್ನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 13:51 IST
Last Updated 20 ಜೂನ್ 2020, 13:51 IST
ಕೂಳೂರಿನ ಹೋಟೆಲ್‌ ಗಡಿಯಾರದಲ್ಲಿ ಟೇಬಲ್‌ ಮಧ್ಯೆ ಫೈಬರ್‌ ಗ್ಲಾಸ್‌ ಅಳವಡಿಸಲಾಗಿದೆ.
ಕೂಳೂರಿನ ಹೋಟೆಲ್‌ ಗಡಿಯಾರದಲ್ಲಿ ಟೇಬಲ್‌ ಮಧ್ಯೆ ಫೈಬರ್‌ ಗ್ಲಾಸ್‌ ಅಳವಡಿಸಲಾಗಿದೆ.   

ಮಂಗಳೂರು: ಲಾಕ್‌ಡೌನ್‌ ಸಡಿಲಿಕೆಯ ನಂತರ ಸರ್ಕಾರ ಹೋಟೆಲ್‌ಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದೆ. ಆದರೆ, ಬಹುತೇಕ ಹೋಟೆಲ್‌ಗಳು ಗ್ರಾಹಕರ ಕೊರತೆಯಿಂದ ಇನ್ನೂ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಈ ಮಧ್ಯೆ ನಗರದ ಹೋಟೆಲ್‌ನಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ನೂತನ ಕ್ರಮ ಕೈಗೊಂಡಿದ್ದು, ಊಟದ ಟೇಬಲ್‌ನ ಮಧ್ಯದಲ್ಲಿ ಫೈಬರ್‌ ಗ್ಲಾಸ್‌ ಅಳವಡಿಸಿದೆ.

ಸುರಕ್ಷಿತ ಅಂತರ ಕಾಪಾಡಿಕೊಂಡು ಹೋಟೆಲ್‌ಗಳಲ್ಲಿ ಊಟ, ಉಪಾಹಾರ ಮಾಡುವುದು ದುಸ್ತರ ಎನ್ನುವ ಗ್ರಾಹಕರ ಚಿಂತೆಯನ್ನು ನಿವಾರಿಸಲು, ನಗರದ ಕೂಳೂರಿನ ಹೋಟೆಲ್‌ ಗಡಿಯಾರದಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದೆ.

ಟೇಬಲ್‌ನಲ್ಲಿ ಎದುರಾಗಿ ಕುಳಿತ ಗ್ರಾಹಕರ ಪೈಕಿ ಒಬ್ಬರು ಸೀನು ಅಥವಾ ಕೆಮ್ಮಿದರೆ, ಅವರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಇಂತಹ ಸಮಸ್ಯೆ ನಿವಾರಿಸಲು ಹೋಟೆಲ್‌ ಗಡಿಯಾರದಲ್ಲಿ ಟೇಬಲ್‌ನ ಮಧ್ಯದಲ್ಲಿ ಫೈಬರ್ ಗ್ಲಾಸ್‌ ಅಳವಡಿಸಲಾಗಿದೆ.

ADVERTISEMENT

‘ಗ್ರಾಹಕರ ಸುರಕ್ಷತೆಯೇ ನಮ್ಮ ಪ್ರಥಮ ಆದ್ಯತೆಯಾಗಿದೆ. ಹೋಟೆಲ್‌ಗೆ ಬರುವ ಗ್ರಾಹಕರ ಪೈಕಿ ಯಾರಿಗಾದರೂ ಸೋಂಕು ಇದ್ದಲ್ಲಿ, ಅವರಿಂದ ಬೇರೆಯವರಿಗೆ ಹರಡುವ ಸಾಧ್ಯತೆ ಇದೆ. ಜತೆಗೆ ಸಿಬ್ಬಂದಿಯೂ ಸೋಂಕಿಗೆ ಒಳಗಾಗಬಹುದು. ಹೀಗಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವುದರ ಜತೆಗೆ ಟೇಬಲ್‌ನ ಮಧ್ಯಭಾಗದಲ್ಲಿ ಫೈಬರ್‌ ಗ್ಲಾಸ್‌ ಅಳವಡಿಸುವ ಮೂಲಕ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ’ ಎಂದು ಹೋಟೆಲ್‌ ಮಾಲೀಕ ಗಣೇಶ್‌ ಶೆಟ್ಟಿ ತಿಳಿಸಿದ್ದಾರೆ.

ಸಿಂಗಪುರ ಹಾಗೂ ಬೆಂಗಳೂರಿನ ಕೆಲ ಹೋಟೆಲ್‌ಗಳಲ್ಲಿ ಇಂತಹ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಇಂತಹ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.

ಗಣೇಶ್ ಶೆಟ್ಟಿ ಅವರ ಸಂಬಂಧಿಕರೊಬ್ಬರು ಸಿಂಗಪುರದ ಹೋಟೆಲ್‌ನಲ್ಲಿ ಅಳವಡಿಸಿರುವ ಇಂತಹ ವ್ಯವಸ್ಥೆಯ ಬಗ್ಗೆ ತಿಳಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಗಣೇಶ್‌ ಶೆಟ್ಟಿ ಫೈಬರ್ ಗ್ಲಾಸ್‌ಗಳನ್ನು ತಂದು, ಟೇಬಲ್‌ನ ಮಧ್ಯದಲ್ಲಿ ಅಳವಡಿಸಿದ್ದಾರೆ. ಇದರಿಂದ ಗ್ರಾಹಕರು ಎದುರಿನಲ್ಲಿ ಕುಳಿತವರನ್ನು ನೋಡಬಹುದಾಗಿದೆ. ಅಲ್ಲದೇ ಈ ಗ್ಲಾಸ್‌ಗಳನ್ನು ಸುಲಭವಾಗಿ ಬೇರೆಡೆ ಎತ್ತಿ ಇಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.