ADVERTISEMENT

ಗಟ್ಟಿಮೇಳದ ಜತೆ ಮಳೆನೀರು ಸಂಗ್ರಹದ ಪಾಠ!

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 19:30 IST
Last Updated 10 ಜೂನ್ 2019, 19:30 IST
ಆಟೊ
ಆಟೊ   

ಮದುವೆ ಮನೆ ಎಂದರೆ ಅಲಂಕಾರ, ಜೌತಣದ ಚರ್ಚೆಗಳೇ ಹೆಚ್ಚು. ಆದರೆ ನಗರದ ಯುವ ಜೋಡಿಯೊಂದು ಮಂಟಪದಲ್ಲಿಯೇ ಮಳೆನೀರು ಕೊಯ್ಲು ಪದ್ದತಿಯ ಜಾಗೃತಿ ಅಭಿಯಾನ ನಡೆಸಲು ಯೋಚಿಸುವ ಮೂಲಕ ಮಾದರಿ ಎನಿಸಿಕೊಂಡಿದೆ.

ಎಂಜಿನಿಯರ್‌ಗಳಾದ ಕೆ.ಮೇಘನಾ ಹಾಗೂ ಎಂ.ಡಿ.ಸುನಿಲ್‌ಕುಮಾರ್‌ ಜೋಡಿ ಮಾಗಡಿ ರಸ್ತೆಯಲ್ಲಿರುವ ‘ಸರಸ್ವತಿ ಕನ್ವೆಷನ್‌ ಸೆಂಟರ್‌’ನಲ್ಲಿ ಜೂನ್‌ 16ಕ್ಕೆ ದಾಂಪತ್ಯಕ್ಕೆ ಕಾಲಿಡಲಿದೆ.

ಮೇಘನಾ ಅವರ ತಂದೆ ಪಿ.ಕೃಷ್ಣಮೂರ್ತಿ ಅವರು ಮಳೆನೀರು ಕೊಯ್ಲು ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಂಟಪದಲ್ಲಿಯೇ ಆಯೋಜಿಸುವ ಕುರಿತು ಯೋಚಿಸಿದರು. ಇದಕ್ಕೆ ಯುವ ಜೋಡಿ ಕೂಡ ಸಾಥ್ ನೀಡಿದೆ.

ADVERTISEMENT

ರೈನಿ ಫಿಲ್ಟರ್ಸ್‌ ಹಾಗೂ ಫಾರ್ಮಲ್ಯಾಂಡ್‌ ರೈನ್‌ವಾಟರ್‌ ಹಾರ್ವೆಸ್ಟಿಂಗ್‌ ಸಿಸ್ಟಮ್‌ ಕಂಪನಿ 18 ವರ್ಷದಿಂದ ಕೆಲಸ ಮಾಡುತ್ತಿದೆ. ಮದುವೆಗೆ ಬಂದವರಿಗೆ ಮಳೆನೀರು ಕೊಯ್ಲು ಪದ್ದತಿ ವಿವರಿಸಲು ಈ ಕಂಪನಿ ಸರಿಯಾದ ಆಯ್ಕೆ ಎಂಬುದು ಕೃಷ್ಣಮೂರ್ತಿ ಅವರ ಅಭಿಪ್ರಾಯ.

‘ನಾವು ಸಾಕಷ್ಟು ಶಾಲೆ, ಕಾಲೇಜುಗಳು, ಕಂಪನಿಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ ಮದುವೆ ಮನೆಯಲ್ಲಿ ಈ ರೀತಿಯ ಕಾರ್ಯಕ್ರಮ ನಡೆಸಲು ಸಂತೋಷವಾಗುತ್ತಿದೆ’ ಎಂದು ಕಂಪನಿಯ ಸಹಭಾಗಿತ್ವ ಹೊಂದಿರುವ ವಿಜಯರಾಜ್‌ ಮಾಹಿತಿ ನೀಡಿದರು.

ಇದುವರೆಗೂ ಈ ಕಂಪನಿ ವತಿಯಿಂದ ಒಟ್ಟು 2.46ಲಕ್ಷ ಮನೆ ಅಥವಾ ಕೆಲವು ವಾಣಿಜ್ಯ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಪದ್ದತಿ ಅಳವಡಿಸಲಾಗಿದೆ. ಇದಕ್ಕಾಗಿಯೇ ‘ರೈನಿ ಫಿಲ್ಟರ್‌’ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಏನಿದು ‘ರೈನಿ ಫಿಲ್ಟರ್‌’

ಮೇಲ್ಛಾವಣಿಯ ನೀರನ್ನು ಸಂಗ್ರಹಿಸುವ ಪೈಪ್‌ಗಳನ್ನು ಒಂದೆಡೆ ಸೇರಿಸಿ ಅದಕ್ಕೆ ಈ ರೈನಿ ಫಿಲ್ಟರ್‌ ಅಳವಡಿಸ ಲಾಗುತ್ತದೆ. ನೀರಲ್ಲಿರುವ ಕಸ, ಕಡ್ಡಿಗಳನ್ನು ಇದು ಬೇರ್ಪಡಿಸುತ್ತದೆ. ಆ ನೀರನ್ನು ಟ್ಯಾಂಕ್‌ಗೆ ಬಿಡಬಹುದು.

ಪ್ರಾತ್ಯಕ್ಷಿಕೆ ಆಟೊಗಳು

ರಾಜ್ಯದಲ್ಲಿ ಈ ಕಂಪನಿಯ ಒಟ್ಟು ನಾಲ್ಕು ಆಟೊಗಳು ಸಂಚರಿಸುತ್ತವೆ. ಮಳೆ ನೀರು ಕೊಯ್ಲು ಪದ್ದತಿಯ ಪ್ರಯೋಜನಗಳು ಹಾಗೂ ಅದರ ಅಗತ್ಯಗಳನ್ನು ವಿವರಿಸಲಾಗುತ್ತದೆ. ನಗರದಲ್ಲಿ ಎರಡು ಆಟೊಗಳು ಇದಕ್ಕಾಗಿಯೇ ಕೆಲಸ ಮಾಡುತ್ತವೆ. ಮದುವೆ ಮನೆಯಲ್ಲೂ ಆಟೊ ಮೂಲಕವೇ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ. ವಿಡಿಯೋ, ಆಡಿಯೋ ಮೂಲಕವೂ ಮಳೆ ನೀರು ಕೊಯ್ಲು ಪದ್ದತಿ ವಿವರಿಸಲಾಗುತ್ತದೆ. ಸ್ಥಳದಲ್ಲಿಯೇ ಪ್ರಾತ್ಯಕ್ಷಿಕೆ ತೋರಿಸಲಾಗುತ್ತದೆ. ವರ್ಷದ ಅಂತ್ಯಕ್ಕೆ 22 ಆಟೊಗಳನ್ನು ರಸ್ತೆಗೆ ಇಳಿಸುವ ಗುರಿಯನ್ನು ಕಂಪನಿ ಹೊಂದಿದೆ.

ಚಿಕ್ಕಮಗಳೂರಿನ ತೇಗೂರು ಗೇಟ್‌ ಬಳಿ ಇರುವ ಹಾದಿಹಳ್ಳಿಯಲ್ಲಿ ಈ ಸಂಸ್ಥೆಯ ಸಂಶೋಧನಾ ಕೇಂದ್ರ ಇದೆ. ಇಲ್ಲಿ ಮಳೆ ನೀರು ಸೇರಿದಂತೆ ಸಾಕಷ್ಟು ಪ್ರಯೋಗಗಳನ್ನು ಉಚಿತವಾಗಿ ಮಾಡಲು ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಪ್ರಯೋಗಾಲಯದಲ್ಲಿರುವ ಪರಿಕರಗಳನ್ನೂ ಮಕ್ಕಳು ಉಚಿತವಾಗಿ ಬಳಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.