ADVERTISEMENT

ಹಣ್ಣಿನ ಸಿಪ್ಪೆಗಳಲ್ಲಿದೆ ಜಲಶುದ್ಧಿ ಶಕ್ತಿ!

ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ಎಂಜಿನಿಯರಿಂಗ್‌ ವಿದ್ಯಾರ್ಥಿಯ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:45 IST
Last Updated 27 ಮೇ 2019, 19:45 IST
ಕಲುಷಿತ ರಾಸಾಯನಿಕ ನೀರು ಶುದ್ಧೀಕರಿಸುವ ಪ್ರಯೋಗಕ್ಕೆ ಬಳಸುವ ಹಣ್ಣಿನ ಸಿಪ್ಪೆಗಳು
ಕಲುಷಿತ ರಾಸಾಯನಿಕ ನೀರು ಶುದ್ಧೀಕರಿಸುವ ಪ್ರಯೋಗಕ್ಕೆ ಬಳಸುವ ಹಣ್ಣಿನ ಸಿಪ್ಪೆಗಳು   

ಕಲುಷಿತ ನೀರು ಮತ್ತು ನೊರೆಯಿಂದ ಸುದ್ದಿಯಾದ ಬೆಳ್ಳಂದೂರು ಕೆರೆಯ ರಾಸಾಯನಿಕ ನೀರನ್ನು ಹಣ್ಣುಗಳ ಸಿಪ್ಪೆಯಿಂದ ಶುದ್ಧೀಕರಿಸುವ ಹೊಸ ಪ್ರಯೋಗಕ್ಕೆ ಬೆಂಗಳೂರಿನ ಏರೋನಾಟಿಕ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಮುಂದಾಗಿದ್ದಾನೆ.

ವೈಟ್‌ಫೀಲ್ಡ್ ಸಮೀಪದ ಎಂವಿಜೆ ಎಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ಏರೋನಾಟಿಕ್ಸ್ ವಿಭಾಗದ ವಿದ್ಯಾರ್ಥಿ ಎ.ಪವನ್, ವಿವಿಧ ಹಣ್ಣುಗಳ ಸಿಪ್ಪೆಯಿಂದ ಕಲುಷಿತ ನೀರನ್ನು ಶುದ್ಧೀಕರಿಸುವ ಹೊಸ ಪ್ರಯೋಗಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಯೋಗಾಲಯ ಪ್ರಮಾಣಪತ್ರವನ್ನೂ ನೀಡಿದೆ. ಶುದ್ಧೀಕರಿಸಿದ ನೀರು ಕುಡಿಯುವುದಕ್ಕೆ ಹೊರತು ಪಡಿಸಿ ಉಳಿದ ಎಲ್ಲಾ ಕೆಲಸಗಳು ಬಳಸಲು ಯೋಗ್ಯವಾಗಿದೆಯೆಂದು ಮಂಡಳಿಯು ಹೇಳಿದೆ.

ನೈಜೀರಿಯಾ ಪ್ರಜೆಗಳು ಕೊಳಚೆ ನೀರನ್ನು ಶುದ್ಧೀಕರಿಸಲು ಕಲ್ಲಂಗಡಿ ಹಾಗೂ ಇತರ ಹಣ್ಣಗಳ ಸಿಪ್ಪೆಗಳನ್ನು ಬಳಸುತ್ತಿದ್ದರು. ಸಿಪ್ಪೆಯಲ್ಲಿ ಸಣ್ಣ ರಂಧ್ರಗಳನ್ನು ಮಾಡಿ ಅದರಿಂದ ಶುದ್ಧೀಕರಣಗೊಂಡು ಹೊರಬಂದ ನೀರನ್ನು ಕುಡಿಯುತ್ತಿದ್ದರು. ಸಂಶೋಧನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಈ ಲೇಖನದಿಂದ ಪ್ರೇರಿತಗೊಂಡ ಪವನ್ ತಾನೂ ಪ್ರಯೋಗಕ್ಕೆ ಮುಂದಾಗಿದ್ದ.

ADVERTISEMENT

ದ್ವಿತೀಯ ಪಿಯುನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಬೆಳ್ಳಂದೂರು ಕೆರೆಯ ಕಲುಷಿತ ನೀರಿನ ಸಮಸ್ಯೆ, ನೊರೆಯಿಂದ ಕೆರೆಯಲ್ಲಿ ಬೆಂಕಿ ಹೊತ್ತಿಕೊಳ್ಳುವ ಸುದ್ದಿಗಳನ್ನು ಗಮನಿಸಿದ್ದೆ. ಇದಕ್ಕೊಂದು ಪರಿಹಾರ ಹುಡುಕಲು ಸಿದ್ಧತೆ ನಡೆಸಿದ್ದೆ’ ಎನ್ನುತ್ತಾರೆ ಪವನ್.

ಬೆಳ್ಳಂದೂರು ಕೆರೆಯಿಂದ ಐದು ಲೀಟರ್ ನೀರು ಸಂಗ್ರಹಿಸಿ ಪೊರೆಯ ಮೂಲಕ ಫಿಲ್ಟರ್ ಮಾಡಲು ಒಂದು ದಿನ ಬೇಕಾಯಿತು. ಹೀಗೆ ದೊರೆತ ನೀರು ಕುಡಿಯುವ ಹೊರತಾಗಿ ಉಳಿದೆಲ್ಲಾ ಕೆಲಸಗಳಿಗೆ ಬಳಸಲು ಸೂಕ್ತವಾಗಿದೆ ಎನ್ನುತ್ತಾರೆ ಪವನ್‌.

ಯಾವೆಲ್ಲ ಹಣ್ಣಿನ ಸಿಪ್ಪೆ ಬಳಕೆ?

ಬಾಳೆಹಣ್ಣು, ಕಲ್ಲಂಗಡಿ, ಅನಾನಸ್, ನಿಂಬೆ ಮತ್ತು ಪಪ್ಪಾಯದ ಸಿಪ್ಪೆಗಳನ್ನು ಸಮೀಪದ ಜ್ಯೂಸ್ ಅಂಗಡಿಗಳಿಂದ ಸಂಗ್ರಹಿಸಿ ಮತ್ತು ಎರಡು ವಾರಗಳವರೆಗೆ ಸೂರ್ಯನ ಬಿಸಿಲಿನಲ್ಲಿ ಒಣಗಿಸಿ, ಸಿಪ್ಪೆಗಳನ್ನು ಮಿಕ್ಸಿಯಲ್ಲಿ ನುಣ್ಣನೆಯ ಪುಡಿ ಮಾಡಲಾಗುತ್ತದೆ. ಬಳಿಕ ಕೃತಕ ಪೊರೆಯ ರೂಪಕ್ಕೆ ತಂದು ಶೋಧಕ ಪ್ರಕ್ರಿಯೆಗೆ ಮುಂಚೆ ಹೈಡ್ರೋಕ್ಲೋರಿಕ್ ಆಮ್ಲದ ಸಹಾಯದಿಂದ ಅವುಗಳನ್ನು ಸಕ್ರಿಯಗೊಳಿಸಲಾಗುತ್ತದೆ.

ಡಿಟರ್ಜೆಂಟ್‌ ತ್ಯಾಜ್ಯ ಕಾರಣ

ಕೈಗಾರಿಕೆಗಳಿಂದ ಹೊರಬರುವ ರಾಸಾಯನಿಕಗಳಿಂದ ಕೆರೆ ನೀರು ಕಲುಷಿತಗೊಂಡಿದ್ದು ನಿಜವಾದರೂ, ಮನೆಯಿಂದ ಕೆರೆ ಸೇರುವ ಡಿಟರ್ಜೆಂಟ್ ತ್ಯಾಜ್ಯಗಳಲ್ಲಿಯ ಫ್ಲೋರೈಡ್ ಹಾಗೂ ಫಾಸ್ಪೇಟ್ ಅಂಶಗಳು ನೀರು ಕಲುಷಿತಗೊಳ್ಳಲು ಕಾರಣ ಎಂಬುದನ್ನು ಸಂಶೋಧನೆ ವೇಳೆ ಕಂಡುಕೊಂಡೆ ಎನ್ನುತ್ತಾರೆ ಪವನ್‌.

ಕೆರೆಯಲ್ಲಿ ಬೆಂಕಿ ಬೀಳಲು ಇವೆಲ್ಲವೂ ಕಾರಣವಾಗಿದೆ. ಶೋಧನಾ ವೇಳೆ ನೀರಿನ ಪಿ.ಎಚ್ ಮಟ್ಟವನ್ನು 6.8 ರಿಂದ 4.08 ರವರೆಗೆ ಇಳಿಸಿದೆ. ಸರೋವರದ ನೀರಿನಲ್ಲಿ ಫ್ಲೋರೈಡ್ ಮಟ್ಟವನ್ನು 3.3ಎಂ.ಜಿಯಿಂದ 0.27ಎಂ.ಜಿಗೆ ಮತ್ತು ಫಾಸ್ಪೇಟ್ ಪ್ರಮಾಣವನ್ನು 23.5 ಎಂ.ಜಿ.ಯಿಂದ 2.75 ಎಂ.ಜಿ.ಗೆ ತಗ್ಗಿಸಿದೆ ಎನ್ನುತ್ತಾರೆ.

ಬೆಳ್ಳಂದೂರು ಕೆರೆಯಲ್ಲಿ 96 ಎಕರೆ ಪ್ರದೇಶದಷ್ಟು ನೀರಿದ್ದು, 6 ಕಡೆ ಚೆಕ್ ಡ್ಯಾಮ್‌ ನಿರ್ಮಿಸಿ, ಆ ಡ್ಯಾಂಗಳಿಗೆ ಸಾಮಾನ್ಯ ಇಟ್ಟಿಗೆ ಬದಲಿಗೆ ಹಣ್ಣಿನ ಸಿಪ್ಪೆ ಪುಡಿಯಿಂದ ನಿರ್ಮಿಸಿದ ಇಟ್ಟಿಗೆ ಬಳಸಿ ಕಟ್ಟುವುದರಿಂದ ನೀರು ಶುದ್ಧೀಕರಣಕ್ಕೆ ಮತ್ತಷ್ಟು ಸಹಕಾರಿಯಾಗಲಿದೆ. ಇದನ್ನು ಸರ್ಕಾರದ ಗಮನಕ್ಕೆ ತಂದು ಬೆಳ್ಳಂದೂರು ಕೆರೆ ಅಭಿವೃದ್ಧಿ ಪಡಿಸುವುದು ನನ್ನ ಉದ್ದೇಶ.
– ಪವನ್, ಏರೋನಾಟಿಕ್ಸ್‌ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.