ADVERTISEMENT

4 ರಿಂದ 5 ತಿಂಗಳು ಶಾಲೆ ಕಾಲೇಜು ಆರಂಭ ಬೇಡ: ಮಾಜಿ ಸಚಿವ ರಾಮಲಿಂಗಾರೆಡ್ಡಿ

ಲಾಕ್‌ಡೌನ್‌ ಸಡಿಲಿಸಿದ್ದರಿಂದ ಕೊರೊನಾ ಸೋಂಕು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 8:59 IST
Last Updated 6 ಜೂನ್ 2020, 8:59 IST
ಮಾಜಿ ಸಚಿವ ರಾಮಲಿಂಗಾರೆಡ್ಡಿ
ಮಾಜಿ ಸಚಿವ ರಾಮಲಿಂಗಾರೆಡ್ಡಿ   

ಬೆಂಗಳೂರು: ‘ಮುಂದಿನ ನಾಲ್ಕೈದು ತಿಂಗಳು ಶಾಲೆಗಳನ್ನು ಆರಂಭಿಸುವುದು ಬೇಡ. ಕಾಲೇಜುಗಳನ್ನು ಆರಂಭಿಸುವುದೂ ಸರಿಯಲ್ಲ’ ಎಂದು ಕಾಂಗ್ರೆಸ್‌ ಶಾಸಕ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಲಾಕ್‌ಡೌನ್ ತೆರವುಗೊಳಿಸಿದ್ದರಿಂದಾಗಿ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ಸಂದರ್ಭದಲ್ಲಿ, ಶಾಲೆಗಳನ್ನು ತೆರೆಯುವುದು ಸರಿಯಲ್ಲ. ವಿದೇಶಗಳಲ್ಲಿ ಶಾಲೆ ತೆರೆದಿದ್ದರಿಂದ ಅಲ್ಲಿ ಎಳೆಯ ಮಕ್ಕಳಿಗೆ ಸೋಂಕು ಹರಡಿದೆ’ ಎಂದರು.

‘ಆನ್‌ಲೈನ್ ಮೂಲಕ ಶಿಕ್ಷಣ ಕಲಿಕೆಗೂ ನನ್ನ ವಿರೋಧವಿದೆ. ಇದು ಎಲ್ಲ ಮಕ್ಕಳಿಗೆ ಅನುಕೂಲವಾಗುವುದಿಲ್ಲ. ಇದರಿಂದ ಬಡವರು, ನಿರ್ಗತಿಕರ ಮಕ್ಕಳಿಗೆ ಶಿಕ್ಷಣ ಮರೀಚಿಕೆ ಆಗಲಿದೆ’ ಎಂದರು.

ADVERTISEMENT

‘ಕೊರೊನಾದಿಂದಾಗಿ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಅಲ್ಲದೆ, ತರಾತುರಿಯಲ್ಲಿ ಲಾಕ್‌ಡೌನ್ ಘೋಷಿಸಲಾಯಿತು. ಇದರಿಂದ ಮತ್ತಷ್ಟು ಸಮಸ್ಯೆ ಎದುರಾಯಿತು. ಲಾಕ್‌ಡೌನ್ ಮೊದಲೇ ಸರ್ಕಾರ ಸಹಾಯ ಮಾಡಬಹುದಿತ್ತು. ಅಕ್ಕಿ, ಗೋಧಿ, ದಿನಸಿ ಸಾಮಗ್ರಿ ವಿತರಿಸಬಹುದಿತ್ತು. ನಂತರ ಲಾಕ್‌ಡೌನ್ ಮಾಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆಗ ಸುಮ್ಮನಾಗಿ ಈಗ ಹಂಚಲು ಹೊರಟಿದ್ದಾರೆ. ಲಾಕ್‌ಡೌನ್ ಮುಂದುವರಿಸಬಹುದಿತ್ತು. ಆಗ ಸೋಂಕು ಹರಡುವಿಕೆ ಕಡಿಮೆಯಾಗುತ್ತಿತ್ತು. ಸಡಿಲ ಮಾಡಿದ್ದರಿಂದ ಸೋಂಕು‌ ಹೆಚ್ಚಳಕ್ಕೆ ಅವಕಾಶ ನೀಡಿದೆ’ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಸಂಕಷ್ಟದಲ್ಲಿದ್ದವರ ನೆರವಿಗೆ ಪಕ್ಷ (ಕಾಂಗ್ರೆಸ್‌) ಬಂತು. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ನಾವು ಖುದ್ದಾಗಿ ಜನಸಾಮಾನ್ಯರಿಗೆ ನೆರವಾದೆವು. ಕಾರ್ಮಿಕರು, ಪೇಂಟರ್ಸ್, ನಿರ್ಗತಿಕರಿಗೆ ಪರಿಹಾರ ನೀಡಿದೆವು. ಬೆಂಗಳೂರಿನ ಸಂಪೂರ್ಣ ಜವಾಬ್ದಾರಿ ಪಕ್ಷ ನನಗೆ ವಹಿಸಿತ್ತು. ಎಲ್ಲ ಕಡೆ ಓಡಾಡಿ ಜನರ ಸಂಕಷ್ಟಕ್ಕೆ ನೆರವಾಗಿದ್ದೇವೆ. ಸರ್ಕಾರ ಸಭೆ ಕರೆದಾಗಲೂ ಸಲಹೆ ನೀಡಿದ್ದೇವೆ. 15 ದಿನಕ್ಕೆ ಆಹಾರದ ವಸ್ತುಗಳನ್ನು ನೀಡುವಂತೆ ಹೇಳಿದ್ದೆವು. ಆದರೆ, ಸರ್ಕಾರ ಆ ಕೆಲಸವನ್ನು ಮೊದಲು ಮಾಡಲಿಲ್ಲ’ ಎಂದು ದೂರಿದರು.

‘ಬೆಂಗಳೂರಿನಲ್ಲಿ ಮಾತ್ರ ಸುಮಾರು 40 ಲಕ್ಷ ಕಾರ್ಮಿಕರಿದ್ದಾರೆ. 5 ಕೆ.ಜಿ. ಅಕ್ಕಿ, 2 ಕೆ.ಜಿ‌ ಗೋದಿ ಕೊಟ್ಟಿದ್ದೇ ಸರ್ಕಾರದ ಸಾಧನೆ. ಹೀಗಾಗಿ, ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ನಿರ್ದೇಶನದಂತೆ ಕಿಟ್ ವಿತರಿಸಿದ್ದೇವೆ’ ಎಂದೂ ವಿವರಿಸಿದರು.

‘ಪಕ್ಷದ ವತಿಯಿಂದ ಒಟ್ಟು 10,14,480 ದಿನಸಿ ಕಿಟ್ ವಿತರಣೆ ಮಾಡಿದ್ದೇವೆ. 93,96,785 ಪಾಕೀಟು ಉಚಿತ ಆಹಾರ ವಿತರಿಸಿದ್ದೇವೆ. 5,85,600 ಮಾಸ್ಕ್‌, ಸ್ಯಾನಿಟೈಸರ್‌ ಹಂಚಿದ್ದೇವೆ. 11,648 ಅನಾರೋಗ್ಯ ಪೀಡಿತರಿಗೆ ಔಷಧ ಹಂಚಿದ್ದೇವೆ. 13,12,550 ಕುಟುಂಬಗಳಿಗೆ ತರಕಾರಿ ವಿತರಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

ಖರ್ಗೆಗೆ ವಿರೋಧ ಇಲ್ಲ: ‘ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದೆ. ಜೆಡಿಎಸ್‌ಗೆ ಬೆಂಬಲ ನೀಡುವ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ. ದೇವೇಗೌಡರಂಥವರು ಸಂಸತ್‌ನಲ್ಲಿರಬೇಕು. ಖರ್ಗೆಯವರ ಹೆಸರಿಗೆ ವಿರೋಧವೇ ಇಲ್ಲ’ ಎಂದರು.

‘ಖರ್ಗೆ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ನಮ್ಮ ಪಕ್ಷದಲ್ಲಿ ಯಾರ ವಿರೋಧವೂ ಇರಲಿಲ್ಲ. ಖರ್ಗೆಯವರು ಉತ್ತಮ ಸಂಸದೀಯ ಪಟು. ರಾಜ್ಯಸಭೆಯಲ್ಲಿ ಅವರ ಅನಿವಾರ್ಯತೆ ಇದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.