ADVERTISEMENT

ವಿಡಿಯೊ | ಹುಲಿರಾಯ ನಡೆವ ಹಾದಿಯಲ್ಲಿತ್ತು ಹೆಬ್ಬಾವು... ಮುಂದೇನಾಯ್ತು?

ಏನು ಮಾಡ್ತು_ಪಟ್ಟೆಹುಲಿ

ಏಜೆನ್ಸೀಸ್
Published 22 ಜುಲೈ 2020, 6:17 IST
Last Updated 22 ಜುಲೈ 2020, 6:17 IST
ಹುಲಿಗೆ ಅಡ್ಡಲಾಗಿ ರಸ್ತೆ ದಾಟುತ್ತಿದ್ದ ಹೆಬ್ಬಾವು (ವಿಡಿಯೊ ದೃಶ್ಯ)
ಹುಲಿಗೆ ಅಡ್ಡಲಾಗಿ ರಸ್ತೆ ದಾಟುತ್ತಿದ್ದ ಹೆಬ್ಬಾವು (ವಿಡಿಯೊ ದೃಶ್ಯ)   

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅರಣ್ಯದೊಳಗಿನರಸ್ತೆಯ ಮೇಲೆ ಹುಲಿ ತನ್ನ ಪಾಡಿಗೆ ತಾನು ರಾಜಗಾಂಭೀರ್ಯದಿಂದ ನಡೆದು ಹೋಗುತ್ತಿದ್ದಾರೆ,ಬೃಹತ್ ಹೆಬ್ಬಾವೊಂದು ರಸ್ತೆ ದಾಟುತ್ತಿತ್ತು. ವನ್ಯಪ್ರೇಮಿಯೊಬ್ಬರು ಚಿತ್ರೀಕರಿಸಿದ್ದಈ ಹಳೆಯ ವಿಡಿಯೊ ಇದೀಗ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೊವನ್ನು 2018ರ ಆಗಸ್ಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಇಂದು ಬೆಳಗ್ಗೆ ಐಎಫ್‌ಎಸ್ ಅಧಿಕಾರಿಸುಶಾಂತ್ ನಂದಾ ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಮತ್ತೆ ಸಾಮಾಜಿಕ ಮಾಧ್ಯಮಗಳ ಗಮನ ಸೆಳೆದಿದ್ದಾರೆ.

ಈ ವಿಡಿಯೊವನ್ನು ಕಬಿನಿಯ ಎವಾಲ್ವ್ ಬ್ಯಾಕ್ ರೆಸಾರ್ಟ್ಸ್‌ನಲ್ಲಿಪರಿಸರ ಪ್ರೇಮಿಶರತ್ ಅಬ್ರಹಾಂ ಎಂಬುವರು ಚಿತ್ರೀಕರಿಸಿದ್ದಾರೆ. ಅವರ ಪ್ರಕಾರ, ಆಗಸ್ಟ್ 31, 2018 ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶದಲ್ಲಿ ಹಾವು ಮತ್ತು ಹುಲಿಯ ನಡುವಿನ ಘಟನೆಯನ್ನು ಚಿತ್ರೀಕರಿಸಲಾಗಿದೆ.

ADVERTISEMENT

'ಈ ಗಂಡು ಹುಲಿ ತನ್ನ ಪ್ರದೇಶವನ್ನು ಗುರುತಿಸುತ್ತಿರುವುದನ್ನು ನೋಡಿದಾಗ ನಾನು ಕಬಿನಿ ರಿವರ್ ಲಾಡ್ಜ್‌ನ ಡ್ರೈವರ್ ಫಿರೋಜ್ ಅವರೊಂದಿಗೆ ಇದ್ದೆ' ಎಂದು ಅಬ್ರಹಾಂ ಅವರು ಇನ್‌ಸ್ಟಾಂಗ್ರಾಂನಲ್ಲಿ ಬರೆದಿದ್ದಾರೆ. ಅವರು ಸುಮಾರು 15 ನಿಮಿಷ ಹುಲಿಯನ್ನು ಹಿಂಬಾಲಿಸಿದಾಗ ರಸ್ತೆಗೆ ಹೆಬ್ಬಾವು ಅಡ್ಡಲಾಗಿ ಬಂತು ಎಂದರು.'ನಾವು ರಸ್ತೆಯ ಮಧ್ಯದಲ್ಲಿ ಈ ಬೃಹತ್ ಹೆಬ್ಬಾವನ್ನು ನೋಡಿದಾಗ ಅದು ಸ್ಪೀಡ್ ಬ್ರೇಕರ್‌ನಂತೆ ಕಾಣುತ್ತದೆ. ಹುಲಿ ಏನು ಮಾಡಬೇಕೆಂದು ತಿಳಿಯದೆ ಗೊಂದಲಕ್ಕೊಳಗಾಯಿತು' ಎಂದು ಅವರು ಹೇಳಿದರು.

ಹುಲಿಯು ಹಾವಿನ ಸುತ್ತಲೂ ಎಚ್ಚರಿಕೆಯಿಂದ ಹೆಜ್ಜೆಹಾಕಿ ಕುತೂಹಲದಿಂದ ನೋಡುವುದನ್ನು ವಿಡಿಯೊದಲ್ಲಿ ಕಾಣಬಹುದು. ನಂತರ ಹುಲಿಯು ರಸ್ತೆಯ ಪಕ್ಕದ ಕೆಲವು ಪೊದೆಗಳತ್ತ ಸರಿದು ಮತ್ತೆ ಹಾವಿನ ಬಳಿಗೆ ಬರುತ್ತದೆ. ಬಳಿಕ ಹೆಬ್ಬಾವು ಹುಲಿಯತ್ತ ಸಮೀಪಿಸಲು ಪ್ರಾರಂಭಿಸಿದಾಗ ಹುಲಿ ಹಾವನ್ನು ಸುತ್ತುವರಿದು ಪೊದೆಯ ಹಿಂದೆ ನಿಂತು ನೋಡಿ ಬಳಿಕ ಹಾವಿನ ಬಗ್ಗೆ ನಿರಾಸಕ್ತಿ ಹೊಂದಿದಂತೆ ಕಂಡು ಮುಂದಕ್ಕೆ ಸಾಗುತ್ತದೆ.

'ಹೆಬ್ಬಾವಿಗೆ ದಾರಿ ಬಿಟ್ಟ ಹುಲಿ' ಎಂದು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಟ್ವಿಟರ್‌ನಲ್ಲಿ ಬರೆದುಕೊಂಡು, ವಿಡಿಯೊ ಶೇರ್ ಮಾಡಿದ್ದಾರೆ.

ಈ ವಿಡಿಯೊವನ್ನು 12 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಹಲವಾರು ಜನರು ತರಹೇವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

'ಹುಲಿ ಕೂಡ ಹೆಬ್ಬಾವಿನ ಉಗ್ರತೆಯನ್ನು ತಿಳಿದಿದೆ' ಎಂದು ಜನಕ್ ಪಾರಿಕ್ ಎನ್ನುವವರು ಕಮೆಂಟ್ ಮಾಡಿದ್ದಾರೆ.

ಮತ್ತೋರ್ವ ಟ್ವಿಟರ್ ಬಳಕೆದಾರರು 'ಬುದ್ಧಿವಂತ ಹುಲಿ. ಹಸಿವನ್ನು ಪೂರೈಸಿಕೊಳ್ಳಲು ಹಾನಿಯನ್ನು ಮಾಡದ ಅನೇಕ ಪ್ರಾಣಿಗಳು ಲಭ್ಯವಿರುವಾಗ ಹೆಬ್ಬಾವಿನ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿ ಅನಗತ್ಯ ಅಪಾಯವನ್ನು ತಪ್ಪಿಸಿಕೊಂಡಿದೆ' ಎಂದು ಬರೆದಿದ್ದಾರೆ.

ಈ ವೇಳೆ ಹುಲಿಯು ಶಾಂತಿಯಿಂದಿತ್ತು. ಇಲ್ಲದಿದ್ದರೆ ತನ್ನತ್ತ ತಲೆಯನ್ನು ಎತ್ತಿದ್ದಕ್ಕಾಗಿ ಹೆಬ್ಬಾವನ್ನು ಸೀಳುತ್ತಿತ್ತು ಎಂದು ಸುಮೇಶ್ ರೆಡ್ಡಿಯಾರ್ ಎನ್ನುವವರು ಕಮೆಂಟಿಸಿದ್ದಾರೆ.

ಮೋಹನ್ ಗಾಜುಲಾ ಎಂಬುವವರು 'ಅದು ಅಹಂ ಮತ್ತು ಮನುಷ್ಯರು ಮಾತ್ರ ಅದನ್ನು ತಲೆಗೇರಿಸಿಕೊಂಡಿರುತ್ತಾರೆ. ಆದರೆ ಮಾನವರಿಗಿಂತಲೂ ಪ್ರಾಣಿಗಳೇ ಹೆಚ್ಚು ಮಾನವೀಯವಾಗಿರುತ್ತವೆ' ಎಂದು ಬರೆದಿದ್ದಾರೆ.

ಹುಲಿಯು ಹಸಿದಿಲ್ಲ ಅಥವಾ ಅದು ಹೆಬ್ಬಾವಿನೊಂದಿಗೆ ಹೋರಾಡುವ ಮನಸ್ಥಿತಿಯಿಲ್ಲದ ಕಾರಣವಿರಬಹುದು ಎಂದು ಆದಿತ್ಯ ಸೇಥಿ ಅವರು ವಿಡಿಯೊಗೆ ಕಮೆಂಟ್ ಮಾಡಿದ್ದಾರೆ.

ಇನ್ನೂ ಹಲವರ ಪ್ರತಿಕ್ರಿಯೆಗಳು ಇಲ್ಲಿವೆ ನೋಡಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.