ADVERTISEMENT

ಜಪಾನ್‌ನಲ್ಲಿ ಹಗಿಬಿಸ್‌ ಚಂಡಮಾರುತ: ಕಾರ್ಯಾಚರಣೆಗೆ ಮಳೆ ಅಡ್ಡಿ

ಸತ್ತವರ ಸಂಖ್ಯೆ 56ಕ್ಕೆ ಏರಿಕೆ

ಏಜೆನ್ಸೀಸ್
Published 14 ಅಕ್ಟೋಬರ್ 2019, 20:15 IST
Last Updated 14 ಅಕ್ಟೋಬರ್ 2019, 20:15 IST
‘ಹಗಿಬಿಸ್‌’ ಚಂಡಮಾರುತಕ್ಕೆ ಸಿಲುಕಿರುವ ಜಪಾನ್‌ನ ಕೇಂದ್ರ ಭಾಗ ನಾಗಾನೊ ಪ್ರದೇಶದ ವೈಮಾನಿಕ ನೋಟ  –ಎಪಿ ಚಿತ್ರ
‘ಹಗಿಬಿಸ್‌’ ಚಂಡಮಾರುತಕ್ಕೆ ಸಿಲುಕಿರುವ ಜಪಾನ್‌ನ ಕೇಂದ್ರ ಭಾಗ ನಾಗಾನೊ ಪ್ರದೇಶದ ವೈಮಾನಿಕ ನೋಟ  –ಎಪಿ ಚಿತ್ರ   

ಟೋಕಿಯೊ: ಜಪಾನ್‌ನಲ್ಲಿ ‘ಹಗಿಬಿಸ್‌’ ಚಂಡಮಾರುತಕ್ಕೆ ಇದುವರೆಗೆ 56 ಮಂದಿ ಬಲಿಯಾಗಿದ್ದು, ನಾಪತ್ತೆಯಾಗಿರುವವ ಶೋಧ ಕಾರ್ಯಕ್ಕೆ ಭಾರಿ ಮಳೆ ಸವಾಲಾಗಿ ಪರಿಣಮಿಸಿದೆ.

ಶನಿವಾರ ರಾತ್ರಿಯಿಂದ ಅಪ್ಪಳಿಸಿರುವ ಚಂಡಮಾರುತಕ್ಕೆ ರಾಜಧಾನಿ ಟೋಕಿಯೊದ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಉತ್ತರ ಮತ್ತು ಮಧ್ಯ ಜಪಾನ್‌ನಲ್ಲಿ ಭಾರಿ ಹಾನಿ ಸಂಭವಿಸಿದ್ದು, ಒಟ್ಟು36 ಪ್ರಾಂತ್ಯಗಳಲ್ಲಿ ಬಹುತೇಕ ಪ್ರದೇಶಗಳಲ್ಲಿ ಭೂಕುಸಿತವುಂಟಾಗಿದ್ದು, ಪ್ರವಾಹ ಉಂಟಾಗಿದೆ.

‘ಹಗಿಬಿಸ್‌ನಿಂದ ಉಂಟಾಗಿರುವ ಪರಿಣಾಮವನ್ನು ಎದುರಿಸಲು ಸರ್ಕಾರವು ವಿವಿಧ ಸಚಿವಾಲಯಗಳ ಅಧಿಕಾರಿಗಳನ್ನೊಳಗೊಂಡ ವಿಶೇಷ ವಿಪತ್ತು ನಿರ್ವಹಣಾ ತಂಡವನ್ನು ರಚಿಸಲಿದೆ’ ಎಂದು ಪ್ರಧಾನಿ ಶಿನ್ಜೊ ಅಬೆ ಸೋಮವಾರ ನಡೆದ ತುರ್ತುಸಭೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರವಾಹದಿಂದಾಗಿ 17ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಇನ್ನೂ ಸರಿಯಾದ ಅಂಕಿಅಂಶಗಳು ಲಭ್ಯವಾಗಿಲ್ಲ ಎಂದು ಸ್ಥಳೀಯ ವಾಹಿನಿಯೊಂದು ವರದಿ ಮಾಡಿದೆ.

ನಾಪತ್ತೆಯಾದವರ ಪತ್ತೆಗಾಗಿ ಹಗಲು–ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಚಂಡಮಾರುತದಿಂದಾಗಿ 142ಕ್ಕೂ ಹೆಚ್ಚು ನದಿಗಳು ಹೆಚ್ಚಿನ ಪ್ರಮಾಣದಲ್ಲಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಹೊಲಗದ್ದೆಗಳು, ಮನೆಗಳು ಮತ್ತು ರಸ್ತೆಗಳಲ್ಲಿ ಕೆಸರು ತುಂಬಿಕೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಟೋಕಿಯೊದಲ್ಲಿ ಸೋಮವಾರ ಸಂಜೆಯ ತನಕವೂ 35, 100 ಮನೆಗಳಿಗೆ ವಿದ್ಯುತ್ ಸೌಕರ್ಯ ಕಲ್ಪಿಸಲಾಗಲಿಲ್ಲ ಎಂದು ಟೋಕಿಯೊ ಎಲೆಕ್ಟ್ರಿಕ್ ಪವರ್ ಕಂ. ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.