ADVERTISEMENT

ಲಾಕ್‌ಡೌನ್‌ ಹಿನ್ನೆಲೆ: ಬೆಂಗಳೂರು ತೊರೆಯುತ್ತಿರುವ ಜನ; ಟೋಲ್‌ಗಳಲ್ಲಿ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 6:00 IST
Last Updated 13 ಜುಲೈ 2020, 6:00 IST
ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಊರಿಗೆ ಹೊರಟು ನಿಂತಿರುವ ಜನ
ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಊರಿಗೆ ಹೊರಟು ನಿಂತಿರುವ ಜನ   

ಬೆಂಗಳೂರು: ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಯಾಗುವ ಘೋಷಣೆಯ ಬೆನ್ನಲ್ಲೇ, ನಗರದಲ್ಲಿ ನೆಲೆಸಿರುವ ಹಲವರು ತಮ್ಮೂರಿನತ್ತ ಹೊರಟಿದ್ದಾರೆ.

ಕಾರ್ಮಿಕರು ಹಾಗೂ ಉದ್ಯೋಗಸ್ಥರು ಕುಟುಂಬ ಸಮೇತರಾಗಿ ಮನೆ ಖಾಲಿ ಮಾಡಿಕೊಂಡು ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ಸೋಮವಾರ ಬೆಳಿಗ್ಗೆಯಿಂದಲೇ ತಮ್ಮೂರಿನತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

ಮೆಜೆಸ್ಟಿಕ್ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಸ್ಯಾಟ್‌ಲೈಟ್ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಗಂಟುಮೂಟೆ ಸಮೇತರಾಗಿ ಊರಿಗೆ ಹೊರಟಿದ್ದು ಕಂಡುಬಂತು.

ADVERTISEMENT

ರಾಯಚೂರು, ಬೆಳಗಾವಿ, ಬೀದರ್, ಬಳ್ಳಾರಿ, ಕಲಬುರ್ಗಿ, ಕೊಪ್ಪಳ, ಹೊಸಪೇಟೆ ಹಾಗೂ ಇತರೆ ಊರಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು‌. ಪ್ರತಿಯೊಬ್ಬ ಪ್ರಯಾಣಿಕರ ಹೆಸರು ಹಾಗೂ ವಿಳಾಸ ಮಾಹಿತಿ ಪಡೆದುಕೊಂಡ ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಬಸ್ಸಿಗೆ ಹತ್ತಲು ಅವಕಾಶ ನೀಡಿದರು.

ಸೋಮವಾರ ಬೆಳಿಗ್ಗೆಯಿಂದಲೇ ಬಸ್‌ಗಳ ಸಂಚಾರ ಆರಂಭವಾಗಿವೆ.

ಟೋಲ್‌ನಲ್ಲಿ ದಟ್ಟಣೆ: ತುಮಕೂರು ರಸ್ತೆಯಲ್ಲಿರುವ ನೆಲಮಂಗಲ ಟೋಲ್ ಗೇಟ್‌ನಲ್ಲೂ ವಾಹನಗಳ ದಟ್ಟಣೆ ಕಂಡುಬರುತ್ತಿದೆ.

ಕಳೆದ ಸೋಮವಾರಕ್ಕಿಂತ ಇಂದು ವಾಹನಗಳ ಸಂಖ್ಯೆ ಹೆಚ್ಚಿದೆ. ಪೀಠೋಪಕರಣ ಹಾಗೂ ಇತರೆ ವಸ್ತುಗಳನ್ನು ತುಂಬಿಕೊಂಡ ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ.

ನಿಧಾನಗತಿಯಲ್ಲಿ ವಾಹನಗಳ ಓಡಾಟ

ನಗರದ ತುಮಕೂರು ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿ ವಿಪರೀತ ಸಂಚಾರ ದಟ್ಟಣೆ ಕಂಡುಬರುತ್ತಿದ್ದು, ವಾಹನಗಳ ಓಡಾಟ ನಿಧಾನಗತಿಯಲ್ಲಿ ಇದೆ.‌

ಮೆಜೆಸ್ಟಿಕ್‌ನಿಂದ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳತ್ತ ಹೆಚ್ಚು ಬಸ್‌ಗಳು ಹೊರಟಿವೆ. ಯಶವಂತಪುರ, ಪೀಣ್ಯ, ಜಾಲಹಳ್ಳಿ ಹಾಗೂ ನೆಲಮಂಗಲ ಟೋಲ್ ಗೇಟ್‌ನಲ್ಲೂ ದಟ್ಟಣೆ ಇದೆ.

ವಾಹನಗಳಿಗೆ ದಾರಿ ಮಾಡಿಕೊಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸೋಮವಾರ ಬೆಳಿಗ್ಗೆಯಿಂದಲೇ ಜನರು ತಮ್ಮೂರಿನತ್ತ ಹೊರಟಿದ್ದಾರೆ. ಖಾಸಗಿ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ.

'ಒಂದು ವಾರ ಲಾಕ್‌ಡೌನ್ ಆದರೆ ನಮಗೆ ಕೆಲಸವಿಲ್ಲ. ಊಟಕ್ಕೂ ಕಷ್ಟವಾಗುತ್ತದೆ. ಅದಕ್ಕೆ ಊರಿಗೆ ಹೊರಟಿದ್ದೇವೆ' ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.

ಎರಡು ದಿನ ಹೆಚ್ಚುವರಿಯಾಗಿ 800 ಬಸ್‌ಗಳ ಸಂಚಾರ

ಸೋಮವಾರ ಮತ್ತು ಮಂಗಳವಾರ ತಲಾ 800 ‌‌ಬಸ್ಸುಗಳನ್ನು ಬೆಂಗಳೂರಿನಿಂದ ರಾಜ್ಯದ ಇತರೆ ಸ್ಥಳಗಳಿಗೆ ಹೆಚ್ಚುವರಿಯಾಗಿ ಕಾರ್ಯಚರಣೆ ಮಾಡಲು ಕೆಎಸ್ಆರ್‌ಟಿಸಿ ಮುಂದಾಗಿದೆ.

ಸೋಮವಾರ ಬೆಳಿಗ್ಗೆ 10 ಗಂಟೆಯವರೆಗೆ 249 ಬಸ್ಸುಗಳನ್ನು ಬೆಂಗಳೂರಿನಿಂದ ಕಾರ್ಯಚರಣೆಗೊಳಿಸಿದ್ದು, 6641 ಪ್ರಯಾಣಿಕರು ಈಗಾಗಲೇ ಪ್ರಯಾಣಿಸಿದ್ದಾರೆ.

231 ಬಸ್ಸುಗಳು ಮುಂಗಡ ಬುಕ್ಕಿಂಗ್ ಆಗಿವೆ. ಸಾಮಾಜಿಕ ಅಂತರ ಕಾಪಾಡಿ, ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಕೆಎಸ್ಆರ್‌ಟಿಸಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.