ADVERTISEMENT

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯೂಟ್ಯೂಬ್‌ ಪಾಠ!

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 19:31 IST
Last Updated 21 ಜುಲೈ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌–19 ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭ ಆಗದೇ ಇರುವುದರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಯೂಟ್ಯೂಬ್‌ ಮೂಲಕ ಪ್ರೀ–ರೆಕಾರ್ಡೆಡ್‌ ತರಗತಿ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಪ್ರಸಾರವಾಗಲಿರುವ ವಿಡಿಯೊ ಪಾಠಗಳ ವೇಳಾಪಟ್ಟಿಯನ್ನು ಇಲಾಖೆ ಮಂಗಳವಾರ ಪ್ರಕಟಿಸಿದೆ. ಗುರುವಾರದಿಂದ (ಜುಲೈ 23) ತರಗತಿಗಳು ಪ್ರಸಾರ ಆಗಲಿದ್ದು, ಪ್ರತಿದಿನ 45 ನಿಮಿಷಗಳ 4 ಅವಧಿಯ ತರಗತಿಗಳು (ಪ್ರತಿ ವಿಷಯಕ್ಕೆ ಎರಡು ಅವಧಿ, ಒಂದು ಅವಧಿಯಲ್ಲಿ ವಿಡಿಯೊ ತರಗತಿ, ಎರಡನೇ ಅವಧಿಯಲ್ಲಿ ಈ ತರಗತಿಗೆ ಸಂಬಂಧಿಸಿದ ಸಂದೇಹ ನಿವಾರಣೆ, ನೋಟ್ಸ್‌, ಬರವಣಿಗೆ) ಇರಲಿದೆ. ಆಯಾ ಕಾಲೇಜಿನ, ಆಯಾ ವಿಷಯಗಳ ಉಪನ್ಯಾಸಕರು ಈ ಬಗ್ಗೆ ನಿಗಾ ವಹಿಸಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ಯೂಟ್ಯೂಬ್‌ ಲಿಂಕ್‌ನ್ನು (https://www.youtube.com/c/dpuedkpucpa) ಜಿಲ್ಲಾ ಉಪ ನಿರ್ದೇಶಕರು ಪ್ರಾಂಶುಪಾಲರು, ಅಲ್ಲಿಂದ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಲು‍ಪಿಸಿ ಪ್ರತಿ ದಿನ ತರಗತಿಗಳನ್ನು ವೀಕ್ಷಿಸಲು ಪ್ರೇರೇಪಿಸಬೇಕು. ಆಯಾ ಪಾಠಕ್ಕೆ ಸಂಬಂಧಿಸಿದ ನೋಟ್ಸ್‌ಗಳು ಅದೇ ದಿನ ಲಭ್ಯವಾಗಲಿವೆ. ವೇಳಾಪಟ್ಟಿಯಂತೆ ವಿಡಿಯೊ ವೀಕ್ಷಿಸಲು ಸಾಧ್ಯವಾಗದಿದ್ದರೆ, ಲಿಂಕ್‌ ಬಳಸಿ ಬೇರೆ ದಿನಗಳಲ್ಲಿ ಮತ್ತು ಪುನರಾವರ್ತಿತವಾಗಿ ವೀಕ್ಷಿಸಬಹುದು.

ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ವಿಷಯವಾರು ಉಪನ್ಯಾಸಕರಿಗೆ ವಿಂಗಡಿಸಿ ಅಪ್‌ಲೋಡ್‌ ಆಗಿರುವ ಪ್ರಿ–ರೆಕಾರ್ಡೆಡ್‌ ವಿಡಿಯೊ ವೀಕ್ಷಿಸಲು ಸೂಚಿಸಬೇಕು. ಸಂದೇಹಗಳಿದ್ದರೆ ಅದನ್ನು ಉಪನ್ಯಾಸಕರು ವಾಟ್ಸ್ಆ್ಯಪ್‌, ದೂರವಾಣಿ ಮೂಲಕ ಪರಿಹರಿಸಬೇಕು ಎಂದೂ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.