ADVERTISEMENT

ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, 5 ಲಕ್ಷ ಬಂಡವಾಳ ಹೂಡಿಕೆ ನಿರೀಕ್ಷೆ

ಹೊಸ ಕೈಗಾರಿಕಾ ನೀತಿಗೆ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 10:19 IST
Last Updated 23 ಜುಲೈ 2020, 10:19 IST
ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌
ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌    

ಬೆಂಗಳೂರು: ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುವ ಮತ್ತು 20 ಲಕ್ಷ ಉದ್ಯೋಗ ಸೃಷ್ಟಿಸುವ ‘ಹೊಸ ಕೈಗಾರಿಕಾ ನೀತಿ 2020–25’ಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರಲ್ಲಿ ಎಲ್ಲ ರೀತಿಯ ಹುದ್ದೆಗಳಲ್ಲಿ ಶೇ 70 ರಷ್ಟು ಮತ್ತು ‘ಡಿ’ ಗ್ರೂಪ್‌ ಹುದ್ದೆಗಳಲ್ಲಿ ಶೇ100 ಕನ್ನಡಿಗರಿಗೇ ಆದ್ಯತೆ ನೀಡಬೇಕು ಎಂಬ ಅಂಶವೂ ಒಳಗೊಂಡಿದೆ.

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ರಫ್ತಿನಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ಅದನ್ನು ಮೂರನೇ ಸ್ಥಾನಕ್ಕೆ ಒಯ್ಯುವ ಗುರಿ ಇದೆ. ಕೈಗಾರಿಕಾ ವಾರ್ಷಿಕ ಬೆಳವಣಿಗೆ ದರ ಶೇ 10 ಇದ್ದು, ಅದನ್ನು ಕಾಪಾಡಿಕೊಂಡು ಹೋಗುತ್ತೇವೆ. ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶೆಟ್ಟರ್‌ ಹೇಳಿದರು.

ADVERTISEMENT

ಕೈಗಾರಿಕೆಗಳನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಬಿಟ್ಟು 2 ನೇ ಹಂತ ಮತ್ತು ಮೂರನೇ 3 ಹಂತದ ನಗರಗಳಲ್ಲಿ ಸ್ಥಾಪಿಸಲು ಒತ್ತು ನೀಡಿದ್ದೇವೆ. ಇದಕ್ಕಾಗಿ ಉದ್ಯಮಿಗಳಿಗೆ ಸಬ್ಸಿಡಿ ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗುವುದು. ಕೈಗಾರಿಕೆಯಲ್ಲಿ ಹಿಂದುಳಿದ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಮೂರು ವಲಯಗಳನ್ನು ರಚಿಸಲಾಗುವುದು. ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವವರಿಗೆ ವಿವಿಧ ರೀತಿಯ ವಿನಾಯ್ತಿ, ಸಬ್ಸಿಡಿ ಮತ್ತು ಪ್ರೋತ್ಸಾಹ ಧನ ನೀಡುವ ಅಧಿಕಾರನ್ನು ಮುಖ್ಯಮಂತ್ರಿ ಅಧ್ಯಕ್ಷತೆಯ ಉಪಸಮಿತಿಗೆ ನೀಡಲಾಗಿದೆ ಎಂದರು.

ವಿಶೇಷವಾಗಿ ಆಟೊಮೊಬೈಲ್‌, ಮೆಷಿನ್‌ ಡಿಸೈನಿಂಗ್‌, ಫಾರ್ಮಾಸ್ಯುಟಿಕಲ್ಸ್‌, ರಕ್ಷಣಾ, ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ ಉದ್ಯಮಗಳಿಗೆ ಆದ್ಯತೆ ನೀಡಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.