ADVERTISEMENT

‘ಮೌನ’ ಯುದ್ಧದಲ್ಲಿ ತಂದೆಯ ಕುಡಿತದ ಚಟ ಬಿಡಿಸಿದ 11 ವರ್ಷದ ಪೋರಿ

ಪ್ರಜಾವಾಣಿ ವಿಶೇಷ
Published 25 ಸೆಪ್ಟೆಂಬರ್ 2019, 8:53 IST
Last Updated 25 ಸೆಪ್ಟೆಂಬರ್ 2019, 8:53 IST
 11 ವರ್ಷ ವಯಸ್ಸಿನ ನಾಧಿಯಾ
11 ವರ್ಷ ವಯಸ್ಸಿನ ನಾಧಿಯಾ   

ಹನ್ನೊಂದು ವರ್ಷ ವಯಸ್ಸಿನ ಮಕ್ಕಳು ತಮಗೆ ಯಾರೂ ಕಲಿಸದ ಪಾಠಗಳನ್ನು ಪೋಷಕರಿಂದ ಕಲಿಯುವ ನಿರೀಕ್ಷೆಯಲ್ಲಿರುತ್ತಾರೆ. ಆದರೆ, ನಾಧಿಯಾ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಎನ್ನುವಮಟ್ಟಕ್ಕೆ ಬೆಳೆದಿದ್ದಾಳೆ. ಆ ಪುಟ್ಟ ಬಾಲಕಿ ಮದ್ಯದ ಚಟಕ್ಕೆ ಬಲಿಯಾಗಿದ್ದ ತನ್ನ ತಂದೆಗೆ ‘ಮೌನ’ ಎಂಬ ಅಸ್ತ್ರ ಬಳಸಿ ದೊಡ್ಡ ಪಾಠವನ್ನೇ ಕಲಿಸಿದ್ದಾಳೆ.

‘ನನ್ನ ತಂದೆಯೊಂದಿಗೆ ಮಾತನಾಡುವುದನ್ನು ನಿಲ್ಲಿಸುವುದು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ’ಎನ್ನುವ ತಮಿಳುನಾಡಿನ ತಿರುವರೂರು ಜಿಲ್ಲೆಯ ತಿರುತುರೈಪೂಂಡಿ ಬಳಿಯ ಸರ್ಕಾರಿ ಪ್ರೌಢಶಾಲೆಯ 7ನೇ ತರಗತಿ ವಿದ್ಯಾರ್ಥಿನಿ, 11 ವರ್ಷ ವಯಸ್ಸಿನನಾಧಿಯಾ, ‘ಮದ್ಯದ ಚಟಕ್ಕೆ ದಾಸರಾಗಿದ್ದ ನನ್ನ ತಂದೆ ನಿತ್ಯವೂ ನನ್ನ ತಾಯಿಯೊಂದಿಗೆ ಜಗಳವಾಡುತ್ತಿದ್ದರು. ತಂದೆಯ ನಡವಳಿಕೆಯ ಕಾರಣಕ್ಕಾಗಿ ನಾನು ಅವರ ಬಗ್ಗೆ ಬೇಸರಗೊಂಡಿದ್ದೆ’ಎಂದು ವಿವರಿಸುತ್ತಾಳೆ.

ಅಪ್ಪನನ್ನು ಮದ್ಯ ಚಟದಿಂದ ಬಿಡಿಸಿ, ಹೇಗಾದರು ಮಾಡಿ ಮಣಿಸಲೇ ಬೇಕು ಎಂದು ನಿರ್ಧರಿಸಿದ ಮಗಳು ಆರು ತಿಂಗಳು ಅವರೊಟ್ಟಿಗೆ ಮಾತು ಬಿಟ್ಟು, ‘ಮೌನ’ದ ಅಸ್ತ್ರ ಪ್ರಯೋಗಿಸಿದ್ದಾಳೆ. ಈ ಮೂಲಕ ಅಪ್ಪನಿಗೆ ಪರೀಕ್ಷೆಯನ್ನೂ ಒಡ್ಡಿದ್ದಾಳೆ. ಈ ಕುರಿತು ‘ಡೆಕ್ಕನ್‌ ಹೆರಾಲ್ಡ್‘ ವಿಶೇಷ ವರದಿ ಮಾಡಿದೆ.

ADVERTISEMENT

ನಾಧಿಯಾ ತಂದೆ ಶಿವಕುಮಾರ್ ಮಗಳೊಟ್ಟಿಗೆ ಮಾತನಾಡಲು ಸತತ ಆರು ತಿಂಗಳು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ತಾನು ಮಾಡಿದ ಯಾವ ಪ್ರಯತ್ನವೂ ಫಲಕೊಡದಿದ್ದಾಗ, ಪುಟ್ಟ ಮಗಳ ‘ಮೌನ ಯುದ್ಧ’ದ ಮುಂದೆ ಸೋತು, ಅಂತಿಮವಾಗಿ ಸ್ಚ–ಇಚ್ಚೆಯಿಂದ ಕುಡಿತ ಬಿಡಲು ನಿರ್ಧರಿಸಿದ್ದಾರೆ.

ಆದರೆ, ತಾನು ನಡೆಸಿದ ‘ಮೌನ ಯುದ್ಧ’ದಲ್ಲಿ ಸೋತ ತಂದೆಗೆ ಮಗಳು ಯಾವುದೇ ಶಿಕ್ಷೆಯನ್ನು ವಿಧಿಸಿಲ್ಲ. ಬದಲಿಗೆ, ಪರಿಸರ ಪ್ರಜ್ಞೆ ಮೆರೆದ ನಾಧಿಯಾ, ‘ತನ್ನ ಶಾಲೆಯ ಹತ್ತಿರದಲ್ಲಿನ ಕೊಳವನ್ನು ಸ್ಚಚ್ಛಗೊಳಿಸಬೇಕು’ಎಂದು ಒಬ್ಬ ಪರಿಣತ ರಾಜತಾಂತ್ರಿಕರಂತೆ ಪೂರ್ವಭಾವಿ ಷರತ್ತನ್ನು ತಂದೆಗೆ ವಿಧಿಸಿದ್ದಾಳೆ.

ತನ್ನ ಪುಟ್ಟ ಮಗಳೊಂದಿಗೆ ಮಾತನಾಡಲಾಗದೆ ಹತಾಶನಾಗಿದ್ದ ತಂದೆ ಶಿವಕುಮಾರ್‌, ಷರತ್ತನ್ನು ಪೂರೈಸಲು ಒಪ್ಪಿಕೊಂಡಿದ್ದಾರೆ. ಸೆ.22ರ ವಿಶ್ವ ಹೆಣ್ಣುಮಕ್ಕಳ ದಿನದಂದು ಕೊಳವನ್ನು ಸ್ವಚ್ಛಗೊಳಿಸುವ ಮೂಲಕ ನಾಧಿಯಾಳ ಆಶಯವನ್ನು ಪೂರೈಸಿದ್ದಾರೆ.
ಕೊಳವು ಕೊಳಕಿನಿಂದ ತುಂಬಿ ಸಹಿಸಲಸಾಧ್ಯ ಸ್ಥಿತಿಯಲ್ಲಿತ್ತು ಮತ್ತು ನಿರಂತರ ಮಳೆಯಿಂದಾಗಿ ಕೊಳದಿಂದ ದುರ್ವಾಸನೆಯೂ ಬರುತ್ತಿತ್ತು. ಇದರಿಂದ ಶಾಲೆಯ ವಿದ್ಯಾರ್ಥಿಗಳಿಗೆ ತೊಂದರೆಯೂ ಆಗುತ್ತಿತ್ತು.

ಭಾನುವಾರ(ಸೆ.22) ಶಿವಕುಮಾರ್‌, ಪತ್ನಿಯ ಸಹಕಾರದೊಂದಿಗೆ ಕೊಳದಲ್ಲಿದ್ದ ಕೊಳಕನ್ನು ತೆಗೆದು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ.

ಮದ್ಯ ಸೇವನೆಯ ಜಗಳವು, ಕೊಳದಿಂದ ಹೊರ ಹೊಮ್ಮುತ್ತಿದ್ದ ದುರ್ವಾಸನೆಗೆ ಮುಕ್ತಿ ನೀಡುವ ಮೂಲಕ ಮಗಳು ಮತ್ತು ತಂದೆ ಮಾತುಕತೆ ಆರಂಭಿಸಿದ್ದಾರೆ. ಈಗ ತಂದೆ ಶಿವಕುಮಾರ್‌ ಬಹಳ ನಿರಾಳರಾಗಿದ್ದಾರೆ ಎಂದು ಮತ್ತೆ ಹೇಳಬೇಕಾಗಿಲ್ಲ.

‘ನನ್ನ ಮಗಳೊಂದಿಗೆ ಮಾತನಾಡುವ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೆ’ಎನ್ನುವ ಶಿವಕುಮಾರ್, ‘ಕೊಳವನ್ನು ಸ್ವಚ್ಛಗೊಳಿಸಿದರೆ ಮಗಳು ನನ್ನೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದಾಗ, ನಾನು ಆ ಕೆಲಸವನ್ನು ಸ್ವ–ಇಚ್ಛೆಯಿಂದ ಮಾಡಿದ್ದೇನೆ. ಈಗ ನನ್ನ ಮಗಳು ಎಂದಿನಂತೆ ನನ್ನೊಟ್ಟಿಗೆ ಮಾತನಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷವಾಗಿದೆ’ಎಂದಿದ್ದಾರೆ.

ಈ ವಿಷಯದಲ್ಲಿ ತನ್ನ ಸಾಧನೆಯ ಬಗ್ಗೆ ಹಮ್ಮೆಪಡುವ ನಾಧಿಯಾ, ‘ಅ‍ಪ್ಪನ ಜತೆ ಮಾತನಾಡದಿರಲು ಕೈಗೊಂಡ ನನ್ನ ನಿರ್ಧಾರ ದೊಡ್ಡ ಫಲವನ್ನು ನೀಡಿದೆ’ಎನ್ನುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.