ADVERTISEMENT

ಪರಿಶ್ರಮದ ಫಲ | ಆಗ ಆಟೊ ಚಾಲಕ, ಈಗ ದೊಡ್ಡ ಲಾರಿ ಕಂಪನಿ ಮಾಲೀಕ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 7:29 IST
Last Updated 8 ಜುಲೈ 2019, 7:29 IST
ಪ್ಯಾರೆ ಖಾನ್ (Image courtesy: Indian Express)
ಪ್ಯಾರೆ ಖಾನ್ (Image courtesy: Indian Express)   

ನಾಗಪುರ: ಕೆಲಸಸಿಗುತ್ತಿಲ್ಲ ಎಂದು ಕೊರಗುವ ಅನೇಕರಿಗೆ ನಾಗಪುರದಯಶಸ್ವಿ ಉದ್ಯಮಿ ಪ್ಯಾರೆ ಖಾನ್‌ ಮಾದರಿ. ಆಟೊ ಚಾಲಕರಾಗಿದ್ದ ಸಾಮಾನ್ಯ ಬಡ ಯುವಕ, ದೊಡ್ಡ ಸಾರಿಗೆ ಸಂಸ್ಥೆಯನ್ನು ಮುನ್ನಡೆಸುವ ಹಂತಕ್ಕೆ ಬೆಳೆದದ್ದು ಅಚ್ಚರಿ.

15 ವರ್ಷಗಳ ಹಿಂದೆ ಪ್ಯಾರೆ ಖಾನ್‌ಗೆ ₹11 ಲಕ್ಷ ಸಾಲ ಕೊಡಲು ಹಿಂದುಮುಂದು ನೋಡಿದ್ದ ಬ್ಯಾಂಕ್ ಮ್ಯಾನೇಜರ್ ಈಗ ಪ್ಯಾರೆ ಖಾನ್ ಮಾಲೀಕರಾಗಿರುವ ಕಂಪನಿಯಲ್ಲಿ ಉದ್ಯೋಗಿ. ಮಾತ್ರವಲ್ಲ ಅವರೇ ಇಂದು ಪ್ಯಾರೇ ಖಾನ್ ಪರವಾಗಿ ದುಬೈನ ಇಂಪಿರಿಯಲ್ ಕ್ಯಾಪಿಟಲ್ ಎಲ್‌ಸಿಸಿ ಕಂಪನಿಯಿಂದ ಪ್ಯಾರೇ ಖಾನ್ ಪರವಾಗಿ ₹80 ಕೋಟಿ ಸಾಲ ಸ್ವೀಕರಿಸಿದರು. ಈ ಎರಡೂ ಸಾಲಗಳ ನಡುವೆ ಇರುವುದು ಒಂದು ಪರಿಶ್ರಮದ ಕಥೆ.

ವಿವಿಧ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ಯಾರೆ ಖಾನ್ ಅವರ ಬದುಕಿನ ಕಥೆಯನ್ನು ಅವರದೇ ಮಾತುಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ...

ADVERTISEMENT

‘ನನಗೆ ಆಗ 26 ವರ್ಷ.ಆಟೊ ಓಡಿಸುತ್ತಿದ್ದೆ. ಟ್ರಕ್‌ ಖರೀದಿಯ ಕನಸಿಟ್ಟುಕೊಂಟು 2004ರಲ್ಲಿ ನಾಗ್ಪುರದ ಐಎನ್‌ಜಿ ವೈಶ್ಯ ಬ್ಯಾಂಕ್‌ನಲ್ಲಿ ಸಾಲಕ್ಕಾಗಿ ಅರ್ಜಿ ಹಾಕಿದೆ.ಹೇಳಿಕೊಳ್ಳುವಂಥ ಆಧಾರ ಕೊಡಲು ಆಗಲಿಲ್ಲ. ಸಾಲ ಕೊಡಲು ಆ ಬ್ಯಾಂಕ್‌ಮ್ಯಾನೇಜರ್‌ ಹಿಂಜರಿದರು.ಆದರೆ ನಿರಂತರ ಪ್ರಯತ್ನದಿಂದ ₹11 ಲಕ್ಷ ಮಂಜೂರು ಮಾಡಿದರು. ಟ್ರಕ್‌ ಖರೀದಿಸಿದ ಖಾನ್‌ ಎರಡೇ ವರ್ಷದಲ್ಲಿ ಆ ಸಾಲ ತೀರಿಸಿದೆ. ಒಂದು ವಿಷಯ ಅಂದ್ರೆ, ಆ ಸಾಲ ತೀರಿಸಲು ನನಗೆ ಇನ್ನೂ ಎರಡು ವರ್ಷಗಳ ಕಾಲಾವಕಾಶವಿತ್ತು.

‘ಈಗ ನನಗೆ 41 ವರ್ಷ. 2013ರಲ್ಲಿ ಅಶ್ಮಿರೋಡ್ ಟ್ರಾನ್ಸ್‌ಪೋರ್ಟ್ಕಂಪನಿಯನ್ನು ಪ್ರಾರಂಭಿಸಿದೆ.ದೇಶದಾದ್ಯಂತ 10 ಶಾಖೆಗಳಿದ್ದು, ಸುಮಾರು 500 ಮಂದಿ ಕೆಲಸ ಮಾಡುತ್ತಿದ್ದಾರೆ.125 ಟ್ರಕ್‌ಗಳಿವೆ. ಅಂದು ಐಎನ್‌ಜಿ ವೈಶ್ಯ ಬ್ಯಾಂಕ್‌ನಲ್ಲಿ ಸಾಲ ನೀಡಿದ್ದ ಮ್ಯಾನೇಜರ್‌ ಈಗ ನಮ್ಮ ಹಣಕಾಸು ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.

‘ನನ್ನ ತಾಯಿ ರಾಯಿಸಾ ಖತುನ್‌ ನಾಲ್ಕು ಮಕ್ಕಳನ್ನು ಸಾಕಲು ಸಾಕಷ್ಟು ಕಷ್ಟಪಟ್ಟಿದ್ದಾಳೆ. ಚಿಕ್ಕಂದಿನಲ್ಲಿ ನಾವು ನಾಗಪುರರೈಲು ನಿಲ್ದಾಣದಲ್ಲಿ ಕಿತ್ತಲೆ ಹಣ್ಣುಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದೆವು. ನನಗೆ 18 ವರ್ಷವಿದ್ದಾಗ ಚಾಲನ ಪರವಾನಗಿ ದೊರೆಯಿತು. ಆಗ ಕೊರಿಯರ್‌ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದೆ. ಅಪಘಾತದ ನಂತರ ಆ ಕೆಲಸವನ್ನು ಬಿಟ್ಟು, ಆಟೊ ಖರೀದಿಸಿದೆ. ಅಮ್ಮನೇ ತನ್ನ ಉಳಿತಾಯದ ಹಣದಿಂದ ಬಂಡವಾಳ ಕೊಟ್ಟಿದ್ದಳು.ಕೆಲ ದಿನಗಳವರೆಗೆ ಆಟೊ ಚಲಾಯಿಸಿದೆ. ಆಗನಾನು ಕೀಬೋರ್ಡ್‌ ಸಹ ನುಡಿಸುತ್ತಿದ್ದೆ. ನಾಗ್ಪುರದ ಮೆಲೊಡಿ ಮೇಕರ್ಸ್‌ ತಂಡದಲ್ಲಿದ್ದೆ.

‘ವಿವಿಧ ಕಾರ್ಯಕ್ರಮಗಳಿಗೆ ಹೋಗಲು ನಮ್ಮ ತಂಡಕ್ಕಾಗಿ ಒಂದು ಬಸ್‌ ಖರೀದಿಸಬೇಕೆಂದು ಆಲೋಚಿಸಿದ್ದೆ. ನನ್ನ ಕೆಲವೊಂದು ವಸ್ತುಗಳನ್ನು ಮಾರಿ ಬಸ್‌ ಖರೀದಿಸಿದೆ. ಆದರೆ, ಇದು ಬಹಳಷ್ಟು ದಿನ ಉಳಿಯಲಿಲ್ಲ. ಅದಾದ ನಂತರ 2004ರಲ್ಲಿ ಟ್ರಕ್‌ ಖರೀದಿಸಬೇಕೆಂದು ನಿರ್ಧರಿಸಿದೆ. ಅದು ನನ್ನ ಕೈಹಿಡಿಯಿತು.2007ರ ವೇಳೆಗೆ 8 ಟ್ರಕ್‌ಗಳನ್ನು ಖರೀದಿಸಿದ್ದೆ. 2013ರಲ್ಲಿ ಕಂಪನಿ ನೋಂದಣಿ ಮಾಡಿಸಿದೆ.

‘ಕೆಇಸಿ ಇಂಟರ್‌ನ್ಯಾಷನಲ್‌, ಕೆಎಸ್‌ಡಬ್ಲ್ಯೂ ಸ್ಟೀಲ್‌, ಟಾಟಾ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಕಂಪನಿಗಳಉತ್ಪನ್ನ ಸಾಗಣೆಗೆ ನನ್ನ ಟ್ರಕ್‌ಗಳು ಬಳಕೆಯಾಗುತ್ತಿವೆ.2016ರಲ್ಲಿ ಕೆಇಸಿ ಇಂಟರ್‌ನ್ಯಾಷನಲ್‌ ಕಂಪನಿಯ ಟ್ರಾನ್ಸ್‌ಫಾರ್ಮರ್‌ಗಳನ್ನು ಭೂತಾನ್‌ಗೆ ಸಾಗಿರುವ ಗುತ್ತಿಗೆಪಡೆದುಕೊಂಡೆ. ಇದಕ್ಕಾಗಿ ಈಶಾನ್ಯ ಭಾಗದಲ್ಲಿನ ದುರ್ಗಮ ಪ್ರದೇಶವೊಂದರಲ್ಲಿ ಮರಗಳನ್ನು ಕಡಿದು 30 ಕಿ.ಮೀ ರಸ್ತೆ ನಿರ್ಮಿಸಬೇಕಾಯಿತು.ದುರ್ಬಲ ಸೇತುಗಳನ್ನು ರಿಪೇರಿ ಮಾಡಲಾಯಿತು. ಕೊನೆಗೂ ಟ್ರಕ್‌ ಭೂತಾನ್‌ ತಲುಪಿತು. ಆದರೆ, ಅಲ್ಲಿ ಪ್ರವೇಶ ಕಮಾನಿನೊಳಗೆ ಟ್ರಕ್‌ ಹೋಗುತ್ತಿರಲಿಲ್ಲ. ಅದಕ್ಕಾಗಿ ರಸ್ತೆಯನ್ನು ಅಗೆಯಬೇಕಿತ್ತು. ಅಲ್ಲಿನ ಅಧಿಕಾರಿಗಳಲ್ಲಿ ಅನುಮತಿ ಪಡೆದು ರಸ್ತೆಯನ್ನು ಅಗೆದು ಟ್ರಕ್‌ ಸಾಗಿಸಿದೆವು. ನಂತರ ಆ ರಸ್ತೆಯನ್ನು ಮರು ನಿರ್ಮಿಸಿ ಕೊಡಲಾಯಿತು.

‘2018ರಲ್ಲಿಅಹಮದಬಾದ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಮತ್ತುಮಹೀಂದ್ರ ಟ್ರಕ್‌ ಅಂಡ್ ಬಸ್ಕಂಪನಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಸಾರಿಗೆ ಉದ್ಯಮಿ ವಿಭಾಗದಸ್ಪರ್ಧೆಯಲ್ಲಿ ನನಗೆ ಮೊದಲ ಬಹುಮಾನ ಲಭಿಸಿತು. ಅಮೆರಿಕದ ಇಬ್ಬರು ಸ್ಪರ್ಧಿಗಳನ್ನು ಒಳಗೊಂಡು ಒಟ್ಟು18 ಮಂದಿ ಈ ಸ್ಪರ್ಧೆಯಲ್ಲಿದ್ದರು.

‘ಕಾರ್ಯಕ್ರಮ ಸಂಘಟಕರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕೇಳಿದಾಗ ನನಗೆ ಐಐಎಂ ಎಂದರೇನು ಎಂಬುದೂ ತಿಳಿದಿರಲಿಲ್ಲ. ಹಾಗಾಗಿ ಮನಸ್ಸಿಲ್ಲದೆ ಅದರಲ್ಲಿ ಭಾಗವಹಿಸಿದ್ದೆ. ಎಲ್ಲರೂ ಲ್ಯಾಪ್‌ಟಾಪ್‌ ಹಿಡಿದುಕೊಂಡು ತಮ್ಮ ಉದ್ಯಮದ ಬಗ್ಗೆ ವಿವರಿಸುತ್ತಿದ್ದರು. ಇದರ ಮಧ್ಯೆ ನಾನು, ಹಿಂದಿಯಲ್ಲಿ ನನ್ನ ಹಾದಿಯನ್ನು ವಿವರಿಸಿದ್ದೆ. ಈಗನೋಡಿ ನನ್ನ ಬದುಕು ಐಐಎಂ ವಿದ್ಯಾರ್ಥಿಗಳಕೇಸ್ ಸ್ಟಡಿ. ಹೇಗಿದೆ ಅಲ್ವಾ ಬದುಕು?

‘ನನ್ನ ಅಮ್ಮನೇ ನನಗೆ ಸ್ಫೂರ್ತಿ. ಮಗ ಕೋಟ್ಯಾಧೀಶನಾದರೂ ಅಮ್ಮ ಇಂದೂ ಚಿಕ್ಕ ಕಿರಾಣಿ ಅಂಗಡಿಯಲ್ಲಿ ಕೂರುವುದು ಬಿಟ್ಟಿಲ್ಲ. ‘ನಾವು ಎಷ್ಟು ಸಂಪಾದಿಸ್ತೀವಿ ಅನ್ನೋದು ಮುಖ್ಯವಲ್ಲ. ಸದಾ ಏನಾದ್ರೂ ಕೆಲಸ ಮಾಡಬೇಕು ಅನ್ನೋದು ಮುಖ್ಯ’ ಅನ್ನೋದು ಅಮ್ಮನ ಬದುಕಿನ ಸಿದ್ಧಾಂತ. ಎಂಥ ಒಳ್ಳೇ ಅಮ್ಮ ಅಲ್ವಾ?’

ಮಾಹಿತಿ: ವಿವಿಧ ವೆಬ್‌ಸೈಟ್‌ಗಳು,ಕನ್ನಡ ಅನುವಾದ: ಯೋಗಿತಾ ಆರ್‌.ಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.