ADVERTISEMENT

ಮೂತ್ರಕೋಶದಲ್ಲಿ ಚಾರ್ಜಿಂಗ್‌ ಕೇಬಲ್‌: ವ್ಯಕ್ತಿಯ ಕಾಮ ವರ್ತನೆಗೆ ದಂಗಾದ ವೈದ್ಯರು

ಏಜೆನ್ಸೀಸ್
Published 5 ಜೂನ್ 2020, 17:35 IST
Last Updated 5 ಜೂನ್ 2020, 17:35 IST
ವ್ಯಕ್ತಿಯ ಮೂತ್ರಕೋಶದ ಎಕ್ಸ್‌ರೇ ಚಿತ್ರ
ವ್ಯಕ್ತಿಯ ಮೂತ್ರಕೋಶದ ಎಕ್ಸ್‌ರೇ ಚಿತ್ರ    

ಗುವಾಹಟಿ: ಅಸ್ಸಾಂನಲ್ಲಿ ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರು, ಮೂತ್ರಕೋಶದಲ್ಲಿದ್ದ ಮೊಬೈಲ್ ಚಾರ್ಜರ್ ಕೇಬಲ್ ಕಂಡು ಆಶ್ಚರ್ಯಚಕಿತರಾಗಿದ್ದಾರೆ.

30 ವರ್ಷದ ವ್ಯಕ್ತಿಯೊಬ್ಬ ತಾನು ಬಾಯಿಯ ಮೂಲಕ ಸುಮಾರು ಎರಡು ಅಡಿ ಉದ್ದದ ಕೇಬಲ್ ಅನ್ನು ನುಂಗಿದ್ದು, ಈಗ ಕೆಳಹೊಟ್ಟೆ ನೋವು ಇರುವುದಾಗಿ ಹೇಳಿಕೊಂಡು ಅಸ್ಸಾಂನ ಗುವಾಹಟಿಯ ವೈದ್ಯ ವಾಲಿಯುಲ್‌ ಇಸ್ಲಾಂ ಅವರ ಬಳಿಗೆಬಂದಿದ್ದ. ಆದರೆ ಮೂತ್ರಕೋಶದ ಶಸ್ತ್ರಚಿಕಿತ್ಸೆ ನೆರವೇರಿಸಿ ಕೇಬಲ್‌ ಅನ್ನು ಹೊರತೆಗೆದಿರುವ ವೈದ್ಯರಿಗೆ ಸತ್ಯ ಏನೆಂದು ಗೊತ್ತಾಗಿದೆ. ವ್ಯಕ್ತಿಯು ಶಿಶ್ನದ ಮೂಲಕ ಕೇಬಲ್ ಅನ್ನು ಮೂತ್ರಕೋಶಕ್ಕೆ ಸೇರಿಸಿದ್ದ ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ.

‘ರೋಗಿಯು ಹೊಟ್ಟೆಯ ನೋವಿನಿಂದ ನಮ್ಮ ಬಳಿಗೆ ಬಂದಿದ್ದ. ಅಲ್ಲದೆ ತಾನು ಹೆಡ್‌ಫೋನ್ ಕೇಬಲ್ ಅನ್ನು ಆಕಸ್ಮಿಕವಾಗಿ ನುಂಗಿರುವುದಾಗಿ ಹೇಳಿದ್ದ. ನಾವು ಆತನ ಮಲಪರೀಕ್ಷೆ ನಡೆಸಿದ್ದೆವು. ಎಂಡೋಸ್ಕೋಪಿಯನ್ನು ಸಹ ನಡೆಸಿದ್ದೆವು. ಆದರೆ ಕೇಬಲ್ ಸಿಗಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿದಾಗ ಜಠರ, ಕರುಳಿನಲ್ಲಿ ಏನೂ ಇರಲಿಲ್ಲ’ ಎಂದು ಶಸ್ತ್ರಚಿಕಿತ್ಸಕ ಡಾ.ವಾಲಿಯುಲ್ ಇಸ್ಲಾಂ ಹೇಳಿದ್ದಾರೆ.

ADVERTISEMENT

ಆಶ್ಚರ್ಯಕರ ಸಂಗತಿ ಏನೇಂದರೆ, ರೋಗಿಯು ಶಸ್ತ್ರಚಿಕಿತ್ಸೆಯ ಮೇಜಿನಲ್ಲಿರುವಾಗಲೇ ವೈದ್ಯ ಇಸ್ಲಾಂ ಅವರು ಎಕ್ಸ್‌ರೇ ನಡೆಸಿದ್ದಾರೆ. ಆಗ ಮೂತ್ರಕೋಶದಲ್ಲಿ ಕೇಬಲ್‌ ಇರುವುದು ಪತ್ತೆಯಾಗಿದೆ. ‘ಶಸ್ತ್ರಚಿಕಿತ್ಸೆ ನಡೆಸಿ ಕೇಬಲ್ ಹೊರತೆಗೆಯಲಾಗಿದೆ. ರೋಗಿಯು ಚೇತರಿಸಿಕೊಳ್ಳುತ್ತಿದ್ದಾನೆ,’ ಎಂದು ವೈದ್ಯ ಹೇಳಿದ್ದಾರೆ.

‘ಅವರು ಹೆಡ್‌ಫೋನ್‌ ಅನ್ನು ಬಾಯಿಯ ಮೂಲಕ ನುಂಗಿರುವುದಾಗಿ ಹೇಳಿದ್ದರು. ಆದರೆ ವಾಸ್ತವವಾಗಿ ಅವರು ಶಿಶ್ನದ ಮೂಲಕ ಮೊಬೈಲ್ ಚಾರ್ಜರ್ ಕೇಬಲ್ ಅನ್ನು ಮೂತ್ರಕೋಶದೊಳಗೆ ತಳ್ಳಿದ್ದರು. ನನ್ನ 25 ವರ್ಷಗಳ ವೃತ್ತಿ ಜೀವನದಲ್ಲಿ ಹಲವು ಶಸ್ತ್ರಚಿಕಿತ್ಸೆ ನಡೆಸಿದ್ದೇನೆ. ಆದರೆ, ಆಪರೇಷನ್ ಟೇಬಲ್‌ನಲ್ಲಿ ಪ್ರಕರಣ ತಿರುವು ಪಡೆದಿದ್ದು ಇದೇ ಮೊದಲು,’ ಎಂದು ಇಸ್ಲಾಂ ಹೇಳಿದ್ದಾರೆ. ಈ ಕುರಿತು ಅವರು ಫೇಸ್‌ಬುಕ್‌ನಲ್ಲಿ ಬರಹ ಹಂಚಿಕೊಂಡಿದ್ದಾರೆ.

‘ರೋಗಿಯು ಲೈಂಗಿಕ ಆನಂದಕ್ಕಾಗಿ ಶಿಶ್ನದ ನಾಳಕ್ಕೆ ಕೇಬಲ್‌ ಸೇರಿದಂತೆ ಇತರ ವಸ್ತುಗಳನ್ನು ಸೇರಿಸುವ ಅಭ್ಯಾಸ ಬೆಳೆಸಿಕೊಂಡಿದ್ದಾನೆ. ಇಂಥ ಸನ್ನಿವೇಶಗಳು ಕೈಮೀರಿ ಹೋಗುವ ಸಾಧ್ಯತೆಗಳಿರುತ್ತವೆ. ಕೇಬಲ್‌ ಮೂತ್ರ ಕೋಶ ಸೇರಿರುವುದೂ ಹೀಗೆಯೇ,’ ಎಂದು ವೈದ್ಯರು ಹೇಳಿದ್ದಾರೆ.

‘ಯುರೇಥ್ರಲ್‌ ಸೌಂಡಿಂಗ್‌’ ಎಂಬ ಕಾಮದ ವರ್ತನೆ ವ್ಯಕ್ತಿಯಲ್ಲಿದೆ. ಈ ಬಗೆಯ ಹಸ್ತಮೈಥುನದಲ್ಲಿ ಮೂತ್ರನಾಳಕ್ಕೆ ವಸ್ತು ಅಥವಾ ದ್ರವವನ್ನು ಸೇರಿಸಲಾಗುತ್ತದೆ,’ ಎಂದೂ ವೈದ್ಯರು ತಿಳಿಸಿದ್ದಾರೆ.

‘ಕೇಬಲ್‌ ಹಾಕಿದ್ದ ರೀತಿಯನ್ನು ವ್ಯಕ್ತಿ ಮೊದಲೇ ಹೇಳಿದ್ದರೆ, ನಾವು ಮೂತ್ರನಾಳದ ಮೂಲಕವೇ ಅದನ್ನು ತೆಗೆಯುತ್ತಿದ್ದೆವು. ಆದರೆ, ಆತ ಸುಳ್ಳು ಹೇಳಿದ್ದರಿಂದ ನಾವು ಶಸ್ತ್ರಚಿಕಿತ್ಸೆ ಮಾರ್ಗ ಹಿಡಿಯಬೇಕಾಯಿತು,’ ಎಂದು ವೈದ್ಯ ಇಸ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.