ADVERTISEMENT

ದೆಹಲಿ ಹಿಂಸಾಚಾರ | ಸಂಸತ್‌ನಲ್ಲಿ 'ತಳ್ಳಾಟ': ಶಾ ರಾಜೀನಾಮೆಗೆ ವಿಪಕ್ಷಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:45 IST
Last Updated 2 ಮಾರ್ಚ್ 2020, 19:45 IST
   
""
""
""

ನವದೆಹಲಿ: ‘ದೆಹಲಿಯಲ್ಲಿ ನಡೆದ ಹಿಂಸಾಚಾರ ನಿಯಂತ್ರಿಸದ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿ ಸೋಮವಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ, ತಳ್ಳಾಟ ನಡೆಯಿತು.

ಲೋಕಸಭೆಯಲ್ಲಿ ಬೆಳಿಗ್ಗೆ ಆರಂಭವಾದ ಬಜೆಟ್‌ ಅಧಿವೇಶನದ ಎರಡನೇ ಹಂತದ ಕಲಾಪವನ್ನು ಸ್ಪೀಕರ್‌ ಓಂ ಬಿರ್ಲಾ ಮಧ್ಯಾಹ್ನಕ್ಕೆ ಮುಂದೂಡಿದರು. ಮಧ್ಯಾಹ್ನ ಕಲಾಪ ಆರಂಭ ಆಗುತ್ತಿದ್ದಂತೆಯೇ ಸ್ಪೀಕರ್‌ ಎದುರಿನ ಜಾಗಕ್ಕೆ ಬಂದು ಪ್ರತಿಭಟನೆ ನಡೆಸಿದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ ಹಾಗೂ ಇತರ ವಿರೋಧ ಪಕ್ಷಗಳ ಸದಸ್ಯರು, ಅಮಿತ್‌ ಶಾ ರಾಜೀನಾಮೆ ಸಲ್ಲಿಸುವಂತೆ ಘೋಷಣೆ ಕೂಗಿದರು.

ಈಶಾನ್ಯ ದೆಹಲಿಯ ಶಿವವಿಹಾರದಲ್ಲಿ ಸ್ಥಳೀಯರು ಶಾಂತಿಯುತವಾಗಿ ಪಥಸಂಚಲನ ನಡೆಸಿದರು

‘ಸುಸೂತ್ರ ಆಡಳಿತ ನಡೆಸದ ಸರ್ಕಾರ ತೊಲಗಲಿ’ ಎಂಬ ಘೋಷಣೆಯು ಸದನದಲ್ಲಿ ಪ್ರತಿಧ್ವನಿಸುತ್ತಿದ್ದಂತೆಯೇ ಆಡಳಿತಾರೂಢ ಬಿಜೆಪಿ ಸದಸ್ಯರ ಆಕ್ರೋಶ ತೀವ್ರವಾಯಿತು.

ADVERTISEMENT

ಈ ಸಂದರ್ಭ, ಪ್ರತಿಭಟನೆ ನಡೆಸುತ್ತಲೇ ಆಡಳಿತ ಪಕ್ಷದ ಸದಸ್ಯರು ಕುಳಿತಿದ್ದ ಆಸನದ ಬಳಿ ತೆರಳಿ ಭಿತ್ತಿಪತ್ರ ಪ್ರದರ್ಶಿಸಿದ ಕಾಂಗ್ರೆಸ್‌ ಸದಸ್ಯರನ್ನು ಕೆಲವರು ತಳ್ಳಿದರಲ್ಲದೆ, ಪರಸ್ಪರ ಹಲ್ಲೆ ನಡೆಸಿದ ಪ್ರಕರಣವೂ ನಡೆಯಿತು.

ಬಿಜೆಪಿ ಸದಸ್ಯೆ ಜಸ್ಕೌರ್ ಮೀನಾ ಹಲ್ಲೆ ನಡೆಸಿದ್ದಾರೆ ಎಂದು ದೂರಿ ಕಾಂಗ್ರೆಸ್ ಸದಸ್ಯೆ ರಮ್ಯಾ ಹರಿದಾಸ್‌ ಸ್ಪೀಕರ್‌ಗೆ ಪತ್ರ ಬರೆದಿದ್ದು, ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಬಿಜೆಪಿ ಸದಸ್ಯೆಯರೂ ದೂರಿದ್ದಾರೆ.

ಶಾ ರಾಜೀನಾಮೆ ನೀಡಲಿ:ಸತತ ಮೂರು ದಿನ ಮತ್ತು ರಾತ್ರಿ ಈಶಾನ್ಯ ದೆಹಲಿ ಹೊತ್ತಿ ಉರಿಯುತ್ತಿದ್ದಾಗ ನಿಯಂತ್ರಣ ಕ್ರಮ ಕೈಗೊಳ್ಳದ ಅಮಿತ್‌ ಶಾ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮದ ಆಯೋಜನೆಯಲ್ಲಿ ತಲ್ಲೀನರಾಗಿದ್ದರು ಎಂದು ಕಾಂಗ್ರೆಸ್‌ನ ಅಧೀರ್‌ ರಂಜನ್‌ ಚೌಧರಿ ಪ್ರತಿಭಟನೆ ವೇಳೆ ಆರೋಪಿಸಿದರು.

ಪ್ರಧಾನಿ ಮೋದಿ ಅವರು ಗಲಭೆ ನಡೆದ ಮೂರು ದಿನಗಳ ನಂತರ ಪ್ರತಿಕ್ರಿಯೆ ನೀಡಿದರು. ಆದರೆ, ಗೃಹ ಸಚಿವರು ಈ ಸಂಬಂಧ ಮಾತನಾಡದೆ, ಪರಿಶೀಲನೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಕಳುಹಿಸಿರುವುದು ಸರ್ಕಾರದ ವೈಫಲ್ಯ ಎಂದ ಅವರು, ದೆಹಲಿ ಕೋಮು ಗಲಭೆಯ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದರು.

ರಾಜ್ಯಸಭೆಯಲ್ಲೂ ಪ್ರತಿಭಟನೆ:ರಾಜ್ಯಸಭೆಯಲ್ಲೂ ಬೆಳಿಗ್ಗೆ ಮತ್ತು ಮಧ್ಯಾಹ್ನ ದೆಹಲಿ ಗಲಭೆ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳ ಸದಸ್ಯರು, ‘ಕೋಮು ಗಲಭೆಗಳಿಗೆ ಸರ್ಕಾರದ ನಿಷ್ಕ್ರಿಯತೆಯೇ’ ಕಾರಣ ಎಂದು ಹರಿಹಾಯ್ದರು.

ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸರ್ಕಾರದ ವೈಫಲ್ಯದ ಕುರಿತು ಘೋಷಣೆ ಕೂಗಿದ ಟಿಎಂಸಿಯ ಶಾಂತಾ ಚೆಟ್ರಿ, ಅಬಿರ್‌ ರಂಜನ್‌ ಬಿಸ್ವಾಸ್‌ ಹಾಗೂ ಅಹಮದ್‌ ಹಸನ್‌ ಅವರು ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿದರು.

ಇಂತಹ ಪ್ರಕ್ರಿಯೆಯನ್ನು ಸಹಿಸಲಾಗದು ಎಂದ ಸಭಾಪತಿ ವೆಂಕಯ್ಯ ನಾಯ್ಡು ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಕಾಂಗ್ರೆಸ್‌, ಟಿಎಂಸಿ, ಎಎಪಿ ಪ್ರತಿಭಟನೆ
ದೆಹಲಿ ಹಿಂಸಾಚಾರವನ್ನು ಖಂಡಿಸಿ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ)ಗಳ ಸದಸ್ಯರು ಸಂಸತ್‌ ಭವನದ ಆವರಣದಲ್ಲಿ ಸೋಮವಾರ ಬೆಳಿಗ್ಗೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಲೋಕಸಭೆಯ ಕಾಂಗ್ರೆಸ್‌ ಗುಂಪಿನ ನಾಯಕ ಅಧೀರ್‌ ರಂಜನ್‌ ಚೌಧರಿ ಹಾಗೂ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ ಕಾಂಗ್ರೆಸ್‌ ಸದಸ್ಯರು, ಆಡಳಿತಾರೂಢ ಬಿಜೆಪಿ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿದರಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಗೃಹ ಸಚಿವ ಅಮಿತ್‌ ಶಾ ಅವರ ನಡೆಯೇ ಭದ್ರತಾ ವೈಫಲ್ಯಕ್ಕೆ ಕಾರಣವಾಗಿದ್ದು, ದೆಹಲಿ ಹಿಂಸಾಚಾರದ ಸಂಪೂರ್ಣ ಹೊಣೆ ಹೊರುವ ಮೂಲಕ ಅವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಕೋಲ್ಕತ್ತಾದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕೆಲವರು ಅಮಿತ್ ಶಾ ಅವರ ಎದುರೇ ‘ಗೋಲಿ ಮಾರೊ’ ಘೋಷಣೆ ಕೂಗಿದ್ದಾರೆ. ಈ ಕುರಿತೂ ಸಮಗ್ರ ತನಿಖೆ ನಡೆಯಲಿ ಎಂದು ಕೋರಿ ಸೌಗತ್ ರಾಯ್ ನೇತೃತ್ವದಲ್ಲಿ ಟಿಎಂಸಿ ಸದಸ್ಯರು ಕಣ್ಣಿಗೆ ಕಪ್ಪುಪಟ್ಟ ಧರಿಸಿಕೊಂಡು ಪ್ರತಿಭಟಿಸಿದರು.

ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದಲೇ ದೆಹಲಿ ಹಿಂಸಾಚಾರ ನಡೆದಿದ್ದು, ಅದಕ್ಕೆ ಕಾರಣರಾದ ಅಮಿತ್‌ ಶಾ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿ ಎಎಪಿ ಸದಸ್ಯರಾದ ಭಗವಂತ ಮಾನ್‌, ಸಂಜಯ್‌ ಸಿಂಗ್‌, ಎನ್‌.ಡಿ. ಗುಪ್ತಾ ಹಾಗೂ ಸುಶೀಲ್‌ ಗುಪ್ತಾ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.