ADVERTISEMENT

ಮೋದಿಗೆ ಕಸುವು ತುಂಬುವೆ: ಗೌತಮ್‌ ಗಂಭೀರ್‌

ಸಿದ್ದಯ್ಯ ಹಿರೇಮಠ
Published 3 ಮೇ 2019, 19:45 IST
Last Updated 3 ಮೇ 2019, 19:45 IST
ಗೌತಮ್‌ ಗಂಭೀರ್‌
ಗೌತಮ್‌ ಗಂಭೀರ್‌   

ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಈಗ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದಾರೆ. ಈಗ ಅವರು ಪೂರ್ವದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಗಂಭೀರ್‌ ಜತೆ ‘ಪ್ರಜಾವಾಣಿ’ಯ ಸಿದ್ದಯ್ಯ ಹಿರೇಮಠ ನಡೆಸಿರುವ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

* ರಾಜಕಾರಣ ವಿಭಿನ್ನ ಕ್ಷೇತ್ರ. ಕ್ರೀಡಾಪಟುವಾಗಿದ್ದ ನೀವು ರಾಜಕೀಯಕ್ಕೆ ಧುಮುಕಬೇಕು ಅಂದುಕೊಂಡಿದ್ದು ಯಾವಾಗ?
ಕೆಲವು ದಿನಗಳಿಂದ ಮುಂದೇನು ಮಾಡಬೇಕು ಎಂಬುದನ್ನೇ ಆಲೋಚಿಸುತ್ತಿದ್ದೆ. ಮನೆಯಲ್ಲೇ ಕುಳಿತು ಜಗತ್ತಿನ ಆಗುಹೋಗುಗಳ ಬಗ್ಗೆ ಟ್ವೀಟ್ ಮಾಡುತ್ತ ಕಾಲ ಕಳೆಯಬೇಕೇ ಅಥವಾ ಜನಸೇವೆ ಮಾಡಬೇಕೇ ಎಂಬ ಆಲೋಚನೆಗಳು ಮೂಡಿದ್ದವು. ನಾನು ರಾಜಕೀಯ ಕ್ಷೇತ್ರ ಆಯ್ದುಕೊಂಡೆ. ಜನರಿಗಾಗಿ ಏನಾದರೂ ಮಾಡಬೇಕು ಎಂಬ ಬಯಕೆಗೆ ಕುಟುಂಬದವರೂ ಸಮ್ಮತಿ ಸಿದರು.

* ಬಿಜೆಪಿಯೇ ಏಕೆ?
ದೇಶ ಎದುರಿಸುತ್ತಿರುವ ಸಮಸ್ಯೆ ಗಳ ನಿವಾರಣೆಗೆ ಪ್ರಬಲ ನಾಯಕತ್ವದ ಅಗತ್ಯ ಇತ್ತು. ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿ ದಿಟ್ಟ ನಾಯಕರಾಗಿ ಹೊರಹೊಮ್ಮಿದರು. ಅವರ ನಾಯಕತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗಿದೆ. ಭಾರತವನ್ನು ಜಾಗತಿಕ ಪ್ರಬಲ ಶಕ್ತಿಯನ್ನಾಗಿ ರೂಪಿಸಬೇಕೆಂಬುದು ಅವರ ಕನಸು. ಅವರ ಕನಸಿಗೆ ಕಸುವು ತುಂಬಬೇಕೆಂಬುದು ನನ್ನ ಬಯಕೆ. ಉರಿ ಮತ್ತು ಪುಲ್ವಾಮಾ ದಾಳಿಗಳ ನಂತರ ಪ್ರಧಾನಿ ನರೇಂದ್ರ ಮೋದಿ ತೋರಿದ ದಿಟ್ಟತನವನ್ನು ಮೆಚ್ಚಿ ಬಿಜೆಪಿಯತ್ತ ಆಕರ್ಷಿತನಾಗಿದ್ದೆ.

ADVERTISEMENT

* ಪಾಕಿಸ್ತಾನ ಮತ್ತು ರಾಷ್ಟ್ರೀಯತೆಯ ವಿಷಯವೇ ಬಿಜೆಪಿಯ ಪ್ರಚಾರದ ಪ್ರಮುಖ ಭಾಗವಾಗಿದೆಯಲ್ಲ...
ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಭದ್ರತೆ ಈಗ ಪ್ರಮುಖ ವಿಷಯಗಳಾಗಿವೆ. ಹಾಗಾಗಿ ಅವುಗಳನ್ನು ಪ್ರಸ್ತಾಪಿಸುವುದರಲ್ಲಿ ತಪ್ಪೇನೂ ಇಲ್ಲ. ಹಿಂದಿನ ಅನೇಕ ಸರ್ಕಾರಗಳು ಮಾಡದಿರುವುದನ್ನು ನಮ್ಮ ಪ್ರಧಾನಿ ಮಾಡಿ ತೋರಿಸಿದ್ದಾರೆ. ಮುಂಬೈ ಮೇಲೆ ನಡೆದಿದ್ದ 26/11 ದಾಳಿ ಅಥವಾ ಅದಕ್ಕೂ ಮೊದಲಿನ ದಾಳಿಗಳ ಸಂದರ್ಭದಲ್ಲಿ ಆಡಳಿತ ನಡೆಸುತ್ತಿದ್ದವರಿಗೂ ದಿಟ್ಟ ನಿರ್ಧಾರ ಕೈಗೊಂಡು ಪ್ರತ್ಯುತ್ತರ ನೀಡುವ ಅವಕಾಶ ಇತ್ತು. ಆಗ ಏನೂ ಮಾಡದವರು ಈಗ ಪ್ರಧಾನಿಯನ್ನು ಮೆಚ್ಚುವ ಬದಲು ಟೀಕಿಸುವ ಕೆಲಸ ಮಾಡುತ್ತಿದ್ದಾರೆ.

* ಪಕ್ಷ ಸೇರಿದ ತಕ್ಷಣವೇ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದೀರಿ. ನಿಮಗೆ ಟಿಕೆಟ್ ದೊರೆತಿರುವುದು ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರ ಅಸಮಾಧಾನಕ್ಕೆ ಕಾರಣವಾಗುವುದಿಲ್ಲವೇ?
ಇದು ಪಕ್ಷದ ನಿರ್ಧಾರ. ನಾನಂತೂ ಟಿಕೆಟ್‌ ಕೇಳಿರಲಿಲ್ಲ. ಪಕ್ಷ ಸೇರ್ಪಡೆ ಬಯಸಿ ಅಂದೇ ಈ ಕುರಿತು ಸ್ಪಷ್ಟಪಡಿಸಿದ್ದೆ. ವರಿಷ್ಠರು ಸ್ಪರ್ಧಿಸುವಂತೆ ಸೂಚಿಸಿದ್ದರಿಂದ ಚುನಾವಣಾ ಕಣದಲ್ಲಿದ್ದೇನೆ.

* ನಿಮ್ಮ ಪ್ರಚಾರ ವೈಖರಿ ಹೇಗೆ ಭಿನ್ನ?
ನಾನು ಶುದ್ಧ ಮನಸ್ಸಿನೊಂದಿಗೆ, ಸ್ಪಷ್ಟ ಉದ್ದೇಶಗಳೊಂದಿಗೆ ರಾಜಕೀಯಕ್ಕೆ ಬಂದಿದ್ದೇನೆ. ಅಭಿವೃದ್ಧಿ ಕುರಿತು ಮಾತನಾಡುತ್ತ ಈಡೇರಿಸಬಹುದಾದ ಭರವಸೆಗಳನ್ನು ನೀಡಲು ಬಯಸುತ್ತೇನೆ. ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಥವಾ ಅವರ ಎಎಪಿಯಂತೆ ನಾವು ಜನರ ಭಾವನೆಗಳ ಜತೆ ಚೆಲ್ಲಾಟವಾಡಲು ಬಯಸುವುದಿಲ್ಲ.

* ನಿಮ್ಮ ಪ್ರತಿಸ್ಪರ್ಧಿ ಆಗಿರುವ ಎಎಪಿಯ ಆತಿಶಿ ಅವರು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದನ್ನು ನಿರಾಕರಿಸಿ ನೀವು ಕೇಜ್ರಿವಾಲ್‌ ಜೊತೆ ಚರ್ಚೆ ಬಯಸಿದ್ದೀರಲ್ಲ?
ನಾಲ್ಕೂವರೆ ವರ್ಷಗಳಿಂದ ದೆಹಲಿಯಲ್ಲಿ ಬರೀ ಪ್ರತಿಭಟನೆಗಳು ಮತ್ತು ಚರ್ಚೆಗಳೇ ನಡೆದಿವೆ. ನಾನು ಈ ಹಿಂದೆಯೇ ಬಹಿರಂಗ ಚರ್ಚೆಗೆ ಕೇಜ್ರಿವಾಲ್ ಅವರನ್ನು ಆಹ್ವಾನಿಸಿದ್ದೆ. ಮತದಾರರನ್ನು ವಂಚಿಸುವ ಮೂಲಕ ದೆಹಲಿಯು ಅಭಿವೃದ್ಧಿಯಿಂದ ಹಿಂದುಳಿಯುವುದಕ್ಕೆ ಅವರೇ ಕಾರಣರಾಗಿದ್ದಾರೆ. ದೆಹಲಿ ಸರ್ಕಾರದ ಹಾಗೂ ಪಕ್ಷದ ಮುಖ್ಯಸ್ಥರಾಗಿರುವ ಅವರು ನನ್ನೊಂದಿಗೆ ಚರ್ಚಿಸುವುದರಲ್ಲಿ ತಪ್ಪೇನಿದೆ?

* ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿದೆ ಎಂದು ಆರೋಪಿಸಿರುವ ಎಎಪಿ, ಅಪರಾಧ ಪ್ರಕರಣ ದಾಖಲಿಸುವಂತೆ ದೂರು ನೀಡಿದೆಯಲ್ಲ?
ಈ ದೂರಿನ ಬಗ್ಗೆ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಲಿದೆ. ನಾನಂತೂ ಒಂದೇ ಗುರುತಿನ ಚೀಟಿ ಹೊಂದಿದ್ದೇನೆ. ಅನೇಕ ವರ್ಷಗಳಿಂದ ರಾಜೇಂದ್ರ ನಗರದಲ್ಲೇ ಮತ ಚಲಾಯಿಸುತ್ತಿದ್ದೇನೆ. ಜನರ ನಂಬಿಕೆ ಕಳೆದುಕೊಂಡಿರುವ ಎಎಪಿ ನಿನ್ನೆ, ಮೊನ್ನೆ ರಾಜಕೀಯಕ್ಕೆ ಬಂದವನ ನಾಮಪತ್ರ ರದ್ದುಪಡಿಸುವುದಕ್ಕೆ ಯತ್ನಿಸುತ್ತ ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದಂತೂ ಸ್ಪಷ್ಟವಾಗಿದೆ.

* ಮತದಾರರಿಗೆ ನೀಡುವ ಭರವಸೆ ಯಾವುದು?
ದೆಹಲಿ ಜನರನ್ನು ವಾಯು ಮಾಲಿನ್ಯದಿಂದ ಮುಕ್ತ ಗೊಳಿಸಿ, ಶುದ್ಧ ಕುಡಿಯುವ ನೀರು ಪಡೆಯುವಂತೆ ಮಾಡುವುದು ನನ್ನ ಗುರಿ. ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಕಾರಣವಾಗಿರುವ ವಾಹನ ನಿಲುಗಡೆ ಸಮಸ್ಯೆ ನೀಗಿಸುವುದಕ್ಕೂ ಕಾರ್ಯಕ್ರಮ ರೂಪಿಸಲಾಗುವುದು. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲೇ ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ ಇರಲಿ ಎಂಬುದೂ ಆದ್ಯತೆಗಳಲ್ಲೊಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.