ADVERTISEMENT

ಪ್ಯಾಂಟ್‌ಗೆರಡು ರೆಕ್ಕೆ?

ಫ್ಯಾಷನ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 19:45 IST
Last Updated 30 ಜನವರಿ 2019, 19:45 IST
ಗ್ರೋನ್‌ ಅಪ್‌ ಟ್ರೌಶರ್‌ನಲ್ಲಿಜೂಲಿಯಾ ರಾಬರ್ಟ್ಸ್‌
ಗ್ರೋನ್‌ ಅಪ್‌ ಟ್ರೌಶರ್‌ನಲ್ಲಿಜೂಲಿಯಾ ರಾಬರ್ಟ್ಸ್‌   

ಎರಡು ವರ್ಷಗಳಿಂದ ಟ್ರೆಂಡ್‌ನಲ್ಲಿರುವ ಲಾಂಗ್‌ ಗೌನ್‌, ಮಹಿಳೆಯರು ಧರಿಸುತ್ತಿದ್ದ ನೈಟಿ ಎಂಬ ರಾತ್ರಿಯುಡುಗೆಯನ್ನು ಹೋಲುತ್ತದೆ.ಶ್ರಗ್‌ ಎಂಬ ಮೇಲುಡುಗೆ, ಸ್ವೆಟರ್‌ ಮತ್ತು ಜಾಕೆಟ್‌ ಮಾದರಿಯದ್ದೇ ಆದರೂ ಹೆಚ್ಚಿನ ಉದ್ದಳತೆಯುಳ್ಳದ್ದು. ಒಂದು ರೀತಿಯಲ್ಲಿ ಎಕ್ಸ್‌ಟೆನ್ಷನ್‌ ಅಥವಾ ಗ್ರೋನ್‌ ಅಪ್‌ ಫ್ಯಾಷನ್‌ ಎನ್ನಬಹುದು. ಹೆಣ್ಣು ಮಕ್ಕಳ ಪ್ಯಾಂಟ್‌ನಲ್ಲಿಈ ಗ್ರೋನ್‌ ಅಪ್‌ ಪ್ರಯೋಗ ನಡೆಯುತ್ತಿದೆ.

ಕೆಲದಿನಗಳ ಹಿಂದೆ ಅಮೆರಿಕದ ಲಾಸ್‌ ಏಂಜಲಿಸ್‌ನಲ್ಲಿ ನಡೆದ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಗ್ರೋನ್‌ ಅಪ್‌ ಪ್ಯಾಂಟ್‌ (ಟ್ರೌಶರ್) ಪರಿಚಯಗೊಂಡಿತು.ಅದನ್ನು ಧರಿಸಿದ್ದವರು ಹಾಲಿವುಡ್‌ನ ಬಹುಬೇಡಿಕೆಯ ನಟಿ, ‘ಪ್ರೆಟಿ ವುಮನ್‌’ ಖ್ಯಾತಿಯ ಜೂಲಿಯಾ ರಾಬರ್ಟ್ಸ್‌. ಇತ್ತೀಚಿನ ‘ಬೆನ್‌ ಈಸ್‌ ಬ್ಯಾಕ್‌’ ಸಿನಿಮಾದಲ್ಲಿನ ಮನೋಜ್ಞ ನಟನೆಯಿಂದ ಚಿತ್ರ ವಿಮರ್ಶಕರಿಂದ ಭೇಷ್ ಅನಿಸಿಕೊಂಡವರು ಈ ಜೂಲಿಯಾ.

ಜೂಲಿಯಾ ಧರಿಸಿದ್ದುದು ಸಿಗರೇಟ್‌ ಪ್ಯಾಂಟ್‌. ಕೆಲವು ವರ್ಷಗಳಿಂದ ಚಾಲ್ತಿಯಲ್ಲಿರುವ ಈ ಪ್ಯಾಂಟ್‌ ಆಕರ್ಷಣೆಯ ಕೇಂದ್ರವಾದುದು ಗ್ರೋನ್‌ ಅಪ್‌ ವಿನ್ಯಾಸದ
ಸೇರ್ಪಡೆಯಿಂದ.

ADVERTISEMENT

ಗ್ರೋನ್‌ ಅ‍ಪ್‌ ಅಂದರೆ...

ಗ್ರೋನ್‌ ಅಪ್‌ ಟ್ರೌಶರ್‌ ಮೇಲ್ನೋಟಕ್ಕೆ, ರೆಕ್ಕೆ ಸಿಕ್ಕಿಸಿಕೊಂಡ ಪ್ಯಾಂಟ್‌ನಂತೆ ಕಾಣುತ್ತದೆ. ಜೂಲಿಯಾ ಧರಿಸಿದಂತೆ ಸಿಗರೇಟ್‌ ಪ್ಯಾಂಟ್‌ಗೆ ‘ರೆಕ್ಕೆ’ ಸಿಕ್ಕಿಸಿಕೊಳ್ಳಬಹುದು.

ಈ ರೆಕ್ಕೆ ಮತ್ತು ಒಟ್ಟಾರೆ ನೋಟ ಹೇಗಿರುತ್ತದೆ ಗೊತ್ತಾ? ದುಪಟ್ಟಾವನ್ನೋ, ಹಾಫ್‌ ಸೀರೆಯನ್ನೋ ಪ್ಯಾಂಟ್‌ ಮೇಲೆ ಸೊಂಟದ ಭಾಗಕ್ಕೆ ಸಿಕ್ಕಿಸಿಕೊಂಡ ಹಾಗೆ ಭಾಸವಾಗುತ್ತದೆ.

ಜೂಲಿಯಾ ರಾಬರ್ಟ್ಸ್‌ ಧರಿಸಿದ್ದ ಗ್ರೋನ್‌ ಅಪ್‌ ಟ್ರೌಶರ್‌ ವಿವರವನ್ನು ನೋಡೋಣ. ಕಪ್ಪು ಬಣ್ಣದ ಸಿಗರೇಟ್‌ ಪ್ಯಾಂಟ್‌ಗೆ ತಿಳಿಗೇಸರಿ (ಪೀಚ್‌) ಬಣ್ಣದ ಡ್ರೇಪರ್‌ ಧರಿಸಿದ್ದಾರೆ. ಪ್ಯಾಂಟ್‌ ಮತ್ತು ಡ್ರೇಪರ್‌ ಒಂದಕ್ಕೊಂದು ವಿರುದ್ಧ ಬಣ್ಣದ್ದಾಗಿದ್ದರೆ ಉತ್ತಮ ಎಂಬ ಸೂಕ್ಷ್ಮ ಇಲ್ಲಿದೆ. ಅವರು ಧರಿಸಿರುವ ಡ್ರೇಪರ್‌ನ್ನು ಸೊಂಟದಿಂದ ಮೇಲ್ಭಾಗದಲ್ಲಿ ಕ್ರಾಪ್‌ ಟಾಪ್‌ನಂತೆ ವಿನ್ಯಾಸ ಮಾಡಲಾಗಿದೆ. ಸೊಂಟಕ್ಕೆ ಎರಡು ಇಂಚು ಅಗಲದ, ಡ್ರೇಪರ್‌ನದೇ ಬಣ್ಣದ ಬೆಲ್ಟ್‌ ಇದೆ. ಸೊಂಟದ ಭಾಗವನ್ನಷ್ಟೇಡ್ರೇಪರ್‌ ಆವರಿಸಿಕೊಂಡಿದೆ.

ಸಿಗರೇಟ್‌ ಪ್ಯಾಂಟ್‌ನಂತೆ ಸ್ವಲ್ಪ ಸಡಿಲವಾದ ಆದರೆ ನೇರ ಕಟ್‌ ಇರುವ, ಸೊಂಟದ ಭಾಗದಲ್ಲಿ ಸ್ವಲ್ಪ ಸಡಿಲವಾದ ವಿನ್ಯಾಸದ ಯಾವುದೇ ಫ್ಯಾಬ್ರಿಕ್‌ನ ಪ್ಯಾಂಟ್‌ ಇದಕ್ಕೆ ಹೊಂದಿಕೊಳ್ಳುತ್ತದೆ. ವಿರುದ್ಧ ಬಣ್ಣದಬೆಲ್ಟ್‌ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಡ್ರೇಪರ್‌ನದೇ ಬಣ್ಣದ್ದಾಗಿದ್ದರೆ ಪ್ರತ್ಯೇಕ ಅನಿಸುವುದಿಲ್ಲ. ಇದು, ಒಟ್ಟಾರೆ ಉಡುಗೆಯನ್ನು ಟೂ ಪೀಸ್‌ ಎಂಬ ನೋಟವನ್ನು ಕಟ್ಟಿಕೊಡುತ್ತದೆ.

ಪ್ಯಾಂಟ್‌ನದೇ ಬಣ್ಣದ ಶೂ/ ಹೈಹೀಲ್ಡ್ ಚಪ್ಪಲಿ ಧರಿಸಿ. ಡ್ರೇಪರ್‌ ಬಣ್ಣದ ಪರ್ಸ್‌, ಕಿವಿಗೆ ಸರಳ ವಿನ್ಯಾಸದ ನೇತಾಡುವ ಓಲೆಗಳು ಅಥವಾ ಸ್ಟಡ್‌ ಧರಿಸಿದರೆ ಹೊಸ ಟ್ರೆಂಡ್‌ಗೆ ನೀವೇ ರೂಪದರ್ಶಿಯಾಗುತ್ತೀರಿ!

ಹೀಗೆ, ಫ್ಯಾಷನ್ ಜಗತ್ತಿನಲ್ಲಿ ಹಳತು ಎನಿಸಿರುವ ಸಿಗರೇಟ್ ಪ್ಯಾಂಟ್‌, ಡ್ರೇಪರ್‌ನಿಂದಾಗಿ ‘ಗ್ರೋನ್‌ ಅಪ್‌ ಟ್ರೌಶರ್‌’ ಹೆಸರಿನಲ್ಲಿ ಮತ್ತೆ ಬೇಡಿಕೆ ಕುದುರಿಸಿಕೊಳ್ಳಲಿದೆ.

ಡ್ರೇಪರ್‌ನಲ್ಲೂ ವಿಭಿನ್ನತೆ

ಗ್ರೋನ್‌ ಅಪ್‌ ಟ್ರೌಶರ್‌ನಲ್ಲಿ ಕೇಂದ್ರಬಿಂದುವೇ ಡ್ರೇಪರ್‌. ರೆಡಿ ಟು ವೇರ್‌ (ಜೂಲಿಯಾ ಮಾದರಿಯದ್ದು) ಧರಿಸಲು ಸುಲಭ. ರ‍್ಯಾಪ್‌ ಓವರ್ ಡ್ರೇಪರ್‌ಗಳೂ ಇಷ್ಟರಲ್ಲೇ ಚಾಲ್ತಿಗೆ ಬರಲಿವೆ ಎಂದು ಹಾಲಿವುಡ್‌ನ ಸ್ಟೈಲಿಸ್ಟ್‌ವೊಬ್ಬರು ಹೇಳಿದ್ದಾರೆ.

ಡ್ರೇಪರ್‌ ವೈಶಿಷ್ಟ್ಯ ಏನೆಂದರೆಇದನ್ನು ಜೂಲಿಯಾ ಧರಿಸಿದ ಮಾದರಿಯಲ್ಲಿ ಹೊಲಿಸಿಕೊಳ್ಳಬಹುದು. ಇಲ್ಲವೇ ಲಾಂಗ್‌ ಶ್ರಗ್‌ ಅಥವಾ ಸಿಂಗಲ್‌ ಲೇಯರ್‌ ರ‍್ಯಾಪ್‌ ಓವರ್‌ನ್ನೇ ಪ್ಯಾಂಟ್‌ನ ಹಿಂಭಾಗಕ್ಕೆ ಬರುವಂತೆ ಬೆಲ್ಟ್‌ನಲ್ಲಿ ಹೊಂದಿಸಿ ಕೂರಿಸಬಹುದು. ಹೀಗೆ ಮಾಡುವುದಾದರೆ ಕ್ರಾಪ್‌ ಟಾಪ್‌, ಓಪನ್‌ ಶೋಲ್ಡರ್‌ ಟಾಪ್‌ ಅಥವಾ ಆಫ್‌ ಶೋಲ್ಡರ್‌ ಟಾಪ್‌ನ್ನು ಪ್ಯಾಂಟ್‌ಗೆ ಇನ್‌ಶರ್ಟ್‌ ಮಾಡಿರ‍್ಯಾಪ್‌ ಓವರ್ ಧರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.