ADVERTISEMENT

ಮುಂದಿನ ಸೆಮಿಸ್ಟರ್‌ ಸಂಪೂರ್ಣ ಆನ್‌ಲೈನ್‌ ಶಿಕ್ಷಣ: ಐಐಟಿ ಬಾಂಬೆ

ಇತರ ಐಐಟಿಗಳು ಸಹ ಇದೇ ಮಾದರಿ ಅನುಸರಿಸಲು ಮುಂದಾಗಿವೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 8:51 IST
Last Updated 25 ಜೂನ್ 2020, 8:51 IST
ಐಐಟಿ ಬಾಂಬೆ
ಐಐಟಿ ಬಾಂಬೆ   

ನವದೆಹಲಿ: ಮುಂದಿನ ಸೆಮಿಸ್ಟರ್‌ ಅನ್ನು ಸಂಪೂರ್ಣವಾಗಿ ಆನ್‌ಲೈನ್‌ ಮೂಲಕವೇ ಬೋಧಿಸಲು ಭಾರತೀಯ ತಂತ್ರಜ್ಞಾನ ಸಂಸ್ಥೆ– ಬಾಂಬೆ ನಿರ್ಧರಿಸಿದೆ.

‘ಕೋವಿಡ್‌–19 ಸಾಂಕ್ರಾಮಿಕ ರೋಗದಿಂದಾಗಿ ಈ ಕ್ರಮಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ವಿಷಯದಲ್ಲಿ ರಾಜಿಯಾಗುವುದಿಲ್ಲ’ ಎಂದು ಸಂಸ್ಥೆಯ ನಿರ್ದೇಶಕ ಸುಭಾಷಿಸ್‌ ಚೌಧರಿ ಗುರುವಾರ ತಿಳಿಸಿದ್ದಾರೆ.

‘ಸೆನೆಟ್‌ನಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿದ ಬಳಿಕ ಆನ್‌ಲೈನ್‌ ತರಗತಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಶೈಕ್ಷಣಿಕ ವರ್ಷ ಮತ್ತಷ್ಟು ವಿಳಂಬವಾಗಬಾರದು ಎನ್ನುವ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

’ಈ ಸಂಸ್ಥೆಯ ಬಹುತೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದ್ದಾರೆ. ಹೀಗಾಗಿ, ಸಾರ್ವಜನಿಕರು ದೇಣಿಗೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಬೇಕು. ಇದರಿಂದ, ಆನ್‌ಲೈನ್‌ ತರಗತಿಗಳಿಗೆ ಅಗತ್ಯವಿರುವ ಲ್ಯಾಪ್‌ಟಾಪ್‌ ಸೇರಿದಂತೆ ಇತರ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗುತ್ತದೆ’ ಎಂದು ಅವರು ಕೋರಿದ್ದಾರೆ.

ಸಂಸ್ಥೆಯ 62 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಲ್ಲದೆಯೇ ಹೊಸ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಲಾಗುತ್ತಿದೆ.

ದೇಶದಲ್ಲಿನ ಉಳಿದ ಐಐಟಿಗಳು ಸಹ ಆನ್‌ಲೈನ್‌ ಶಿಕ್ಷಣಕ್ಕೆ ಮೊರೆ ಹೋಗುವ ಸಾಧ್ಯತೆ ಇದೆ. ಜುಲೈ ತಿಂಗಳಿಂದ ಡಿಸೆಂಬರ್‌ ಅವಧಿಯ ಸೆಮಿಸ್ಟರ್‌ಗೆ ಆನ್‌ಲೈನ್‌ ವ್ಯವಸ್ಥೆ ಮೂಲಕವೇ ಬೋಧಿಸುವ ನಿರೀಕ್ಷೆ ಇದೆ.

‘ಶೈಕ್ಷಣಿಕ ಚಟುವಟಿಕೆಗಳು ವಿಳಂಬವಾಗುತ್ತಿರುವುದರಿಂದ ಪರ್ಯಾಯ ಯೋಚನೆ ಮಾಡಬೇಕಾಗಿದೆ. ಕಂಪ್ಯೂಟರ್‌ ಮತ್ತು ಇಂಟರ್‌ನೆಟ್‌ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳಿಗೆ ಯಾವ ರೀತಿ ನೆರವು ನೀಡಬೇಕು ಎನ್ನುವ ಬಗ್ಗೆ ಮೊದಲು ಯೋಚಿಸಬೇಕಾಗಿದೆ’ ಎಂದು ದೆಹಲಿ ಐಐಟಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.