ADVERTISEMENT

ಉಪಚುನಾವಣೆ ಫಲಿತಾಂಶ| ಸ್ಥಿರತೆಗೆ ಮತ: ಸಂಪುಟದತ್ತ ಚಿತ್ತ

15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ– ಬಿಜೆಪಿ ದಿಗ್ವಿಜಯ l ಕಾಂಗ್ರೆಸ್‌ಗೆ ಮುಖಭಂಗ l ಮುಗ್ಗರಿಸಿಬಿದ್ದ ಜೆಡಿಎಸ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 2:09 IST
Last Updated 10 ಡಿಸೆಂಬರ್ 2019, 2:09 IST
   

ಬೆಂಗಳೂರು: ಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12 ರಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದ್ದು, ರಾಜ್ಯ ರಾಜಕೀಯದ ಮೇಲೆ ಕವಿದಿದ್ದ ಅಸ್ಥಿರತೆಗೆ ತೆರೆ ಬಿದ್ದಿದೆ. ಅದರ ಬೆನ್ನಲ್ಲೇ, ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆ ಚುರುಕುಗೊಂಡಿದೆ.

ಆಯಕಟ್ಟಿನ ಖಾತೆಗಾಗಿ ಗೆದ್ದವರು ಹಾಗೂ ಬಿಜೆಪಿಯ ಹಿರಿಯರು ಲಾಬಿ ಆರಂಭಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸರ್ಕಾರ ಬರಲು ರಣರಾದವರಿಗಾಗಿ 34 ಸದಸ್ಯ ಬಲದ ಸಚಿವ ಸಂಪುಟದಲ್ಲಿ 16 ಸ್ಥಾನ ಉಳಿಸಿಕೊಳ್ಳಲಾಗಿದೆ. ಚುನಾವಣೆಯಲ್ಲಿ ಗೆದ್ದ 11 ಮಂದಿ ಹಾಗೂ ಶಂಕರ್‌ ಅವರಿಗೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತ. ಉಳಿದ ಎರಡು ಸ್ಥಾನಗಳನ್ನು ಚುನಾವಣೆ ನಡೆಯಬೇಕಿರುವ ಎರಡು ಕ್ಷೇತ್ರಗಳ ಅನರ್ಹರಿಗೆ ಮೀಸಲಿಡುವ ಸಾಧ್ಯತೆ ಇದೆ.

ಉಳಿಯುವ ಸ್ಥಾನಗಳ ಮೇಲೆ ಪ್ರಭಾವಿ ಶಾಸಕರು ಕಣ್ಣಿಟ್ಟಿದ್ದಾರೆ. ಅವುಗಳನ್ನು ಖಾಲಿ ಉಳಿಸಿಕೊಳ್ಳಲಾಗುತ್ತದೋ ಅಥವಾ ಭರ್ತಿ ಮಾಡಲಾಗುತ್ತದೆಯೋ ಎಂಬ ಚರ್ಚೆ ಆರಂಭವಾಗಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸದ್ಯವೇ ದೆಹಲಿಗೆ ತೆರಳಲಿದ್ದು, ವರಿಷ್ಠರ ಜತೆ ಚರ್ಚಿಸಿದ ಬಳಿಕ ಸಂಪುಟ ವಿಸ್ತರಣೆಯ ದಿನಾಂಕ ನಿಗದಿ ಯಾಗಲಿದೆ. ವಾರಾಂತ್ಯದೊಳಗೆ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಉಪಚುನಾವಣೆಯ ಮಹಾ ಗೆಲುವಿನೊಂದಿಗೆ ವಿಧಾನಸಭೆಯಲ್ಲಿ ಬಿಜೆಪಿಯ ಸದಸ್ಯ ಬಲ 105ರಿಂದ 117ಕ್ಕೆ ಏರಿದ್ದು, ನಿಚ್ಚಳ ಬಹುಮತ ಪಡೆದಂತಾಗಿದೆ. ಇದರಿಂದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಯಾವುದೇ ಹರಾಕಿರಿ ಇಲ್ಲದೇ ಮುಂದಿನ ಮೂರೂವರೆ ವರ್ಷ ನಿಶ್ಚಿಂತೆಯಿಂದ ಅಧಿಕಾರ ನಡೆಸುವ ಪರಿಸ್ಥಿತಿ ಬಂದೊದಗಿದೆ.

ರಾಜರಾಜೇಶ್ವರಿ ನಗರದ ಮುನಿರತ್ನ ಹಾಗೂ ಮಸ್ಕಿಯ ಪ್ರತಾಪಗೌಡ ಪಾಟೀಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿದ್ದಾರೆ. ಆದರೆ, 2018ರಲ್ಲಿ ನಡೆದ ಚುನಾವಣೆಯ ಫಲಿತಾಂಶ ಪ್ರಶ್ನಿಸಿ ಪರಾಜಿತರು ಕೋರ್ಟ್‌ ಮೊರೆಹೋಗಿರುವುದರಿಂದಾಗಿ ಈ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿಲ್ಲ. ವಿಧಾನಸಭೆಯ 224 ಸದಸ್ಯರ ಸಂಖ್ಯೆಗೆ ಲೆಕ್ಕ ಹಾಕಿದರೂ ಬಿಜೆಪಿ ಸರಳ ಬಹುಮತಕ್ಕಿಂತ (113) ಹೆಚ್ಚಿನ ಬಲದ ಪಕ್ಷವಾಗಿ ಹೊರಹೊಮ್ಮಿದೆ.

13 ಶಾಸಕರು ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಿದ್ದರು. ಈ ಕ್ಷೇತ್ರಗಳ ಪೈಕಿ ಒಂದನ್ನು ಕಾಂಗ್ರೆಸ್ ಉಳಿಸಿಕೊಂಡಿದ್ದು, ಹಿಂದೆ ಜೆಡಿಎಸ್‌ ಶಾಸಕರು ಪ್ರತಿನಿಧಿಸುತ್ತಿದ್ದ ಹುಣಸೂರನ್ನು ಕಿತ್ತುಕೊಳ್ಳುವಲ್ಲಿ ಕೈ ನಾಯಕರು ಯಶ ಪಡೆದಿದ್ದಾರೆ.

3 ಶಾಸಕರನ್ನು ಜೆಡಿಎಸ್ ಕಳೆದುಕೊಂಡಿತ್ತು. ಒಂದೇ ಒಂದು ಕ್ಷೇತ್ರ ಗೆಲ್ಲಲೂ ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಒಂದು ಕ್ಷೇತ್ರ ಪಕ್ಷೇತರರ ಪಾಲಾಗಿದೆ.

ಸಿದ್ದರಾಮಯ್ಯ, ದಿನೇಶ್‌ ರಾಜೀನಾಮೆ

ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ.

‘ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ. ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಸಿದ್ದರಾಮಯ್ಯ ತಿಳಿಸಿದರು. ‘ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಚುನಾವಣೆ ಯಾವ ರೀತಿಯಲ್ಲಿ ನಡೆಯಿತು ಎಂಬ ವಿಚಾರವನ್ನು ವರಿಷ್ಠರ ಗಮನಕ್ಕೆ ತಂದಿದ್ದೇನೆ’ ಎಂದು ದಿನೇಶ್‌ ಹೇಳಿದರು.


ಎಂಟಿಬಿಗೆ ಸಚಿವ ಸ್ಥಾನ: ವಿಶ್‌ವನಾಥ್‌ಗೆ ಅನುಮಾನ
ಎಚ್‌.ವಿಶ್ವನಾಥ್‌ ಮತ್ತು ಎಂ.ಟಿ.ಬಿ.ನಾಗರಾಜ್‌ ಅವರ ಭವಿಷ್ಯವೇನು ಎಂಬ ಚರ್ಚೆ ಆರಂಭವಾಗಿದೆ.

ಈ ಇಬ್ಬರಿಗೂ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಬಿಜೆಪಿ ಬಂಡಾಯ ಅಭ್ಯರ್ಥಿಯಿಂದಲೇ ಹೊಸಕೋಟೆಯಲ್ಲಿ ಸೋತಿರುವುದರಿಂದ ಅವರನ್ನು ಮಂತ್ರಿ ಮಾಡಲು ಯಡಿಯೂರಪ್ಪ ಮನಸ್ಸು ಮಾಡಿದ್ದಾರೆ. ವಿಶ್ವನಾಥ್‌ ಅವರಿಗೂ ಸ್ಥಾನ ನೀಡಬಹುದು. ಬಿಜೆಪಿಗಾಗಿ
‘ತ್ಯಾಗ’ ಮಾಡಿದವರಿಗೆ ಅನ್ಯಾಯ ಆಗಲ್ಲ ಎಂಬ ಸಂದೇಶ ರವಾನಿಸಲು ಬಿಜೆಪಿ ನಿರ್ಧರಿಸಿದೆ.

ನಾಗರಾಜ್‌ ಅವರಿಗೆ ದೂರವಾಣಿ ಕರೆ ಮಾಡಿದ ಯಡಿಯೂರಪ್ಪ, ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ ಎಂಬ ಭರವಸೆ ನೀಡಿದ್ದಾರೆ. ವಿಶ್ವನಾಥ್‌ ಅವರಿಗೆ ಈ ಭರವಸೆ ಸಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.

ಮಂಡ್ಯದಲ್ಲಿ ಖಾತೆ ತೆರೆದ ಬಿಜೆಪಿ

ಜೆಡಿಎಸ್‌ ಭದ್ರಕೋಟೆ ಎಂದೇ ಹೇಳಲಾಗಿದ್ದ ಮಂಡ್ಯದ ಕೆ.ಆರ್. ಪೇಟೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರಿದ್ದರೂ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಪಕ್ಷಕ್ಕೆ ನೆಲೆ ಇರಲಿಲ್ಲ. ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿದ್ದ ಡಾ. ಸುಧಾಕರ್‌ ಗೆಲ್ಲುವ ಮೂಲಕ ಅಲ್ಲಿಯೂ ತನ್ನ ನೆಲೆಯನ್ನು ಆ ಪಕ್ಷ ವಿಸ್ತರಿಸಿಕೊಂಡಂತಾಗಿದೆ.

***

ಈ ಗೆಲುವು ಯಾವುದೇ ಒಬ್ಬ ವ್ಯಕ್ತಿಯ ಪರಿಶ್ರಮದ ಫಲವಲ್ಲ. ಸಾಮೂಹಿಕ ನೇತೃತ್ವದ ವಿಜಯ. ಸರ್ಕಾರ ಮತ್ತು ಪಕ್ಷದ ಮಧ್ಯೆ ಸಮನ್ವಯ ಇದ್ದರೆ ಇಂತಹ ಗೆಲುವು ಸಾಧ್ಯ
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

***

ಕುದುರೆ ವ್ಯಾಪಾರಕ್ಕೆ ಒಳಗಾಗಿದ್ದ ಅನರ್ಹ ಶಾಸಕರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಮತದಾರರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ.
- ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಇದೊಂದು ಅಸಹ್ಯ ಸರ್ಕಾರ. ರಾಜ್ಯದ 15 ಕ್ಷೇತ್ರಗಳ ಮತದಾರರು ‘ಪವಿತ್ರ’ ಹಾಗೂ ‘ಸುಭದ್ರ’ ಸರ್ಕಾರಕ್ಕೆ ಮುದ್ರೆ ಒತ್ತಿರುವುದಕ್ಕೆ ಅಭಿನಂದನೆಗಳು.
- ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನಿಸಿದವರಿಗೆ ಉಪಚುನಾವಣೆಯಲ್ಲಿ ಕರ್ನಾಟಕದ ಜನರು ಸರಿಯಾದ ಪಾಠ ಕಲಿಸಿದ್ದಾರೆ
- ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.