ADVERTISEMENT

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: 16ಕ್ಕೆ ಮುಂಗಾರು ಚುರುಕು

ಪಿಟಿಐ
Published 13 ಮೇ 2020, 19:30 IST
Last Updated 13 ಮೇ 2020, 19:30 IST
ಮಳೆ ಸನ್ನಿವೇಶದ ಸಂಗ್ರಹ ಚಿತ್ರ
ಮಳೆ ಸನ್ನಿವೇಶದ ಸಂಗ್ರಹ ಚಿತ್ರ    

ನವದೆಹಲಿ: ನೈರುತ್ಯ ಮುಂಗಾರು ಮಾರುತಗಳು ನಿಗದಿತ ದಿನಾಂಕಕ್ಕಿಂತ ಆರು ದಿನ ಮೊದಲೇ ಅಂದರೆ ಮೇ 16ರ ವೇಳೆಗೆ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಸಮೂಹದ ಬಳಿ ಚುರುಕುಗೊಳ್ಳಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಮುನ್ಸೂಚನೆ ನೀಡಿದೆ.

‘ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಸೃಷ್ಟಿಯಾಗಿ, ಮುಂಗಾರು ಚುರುಕುಗೊಳ್ಳಲಿದೆ’ ಎಂದುಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ತಿಳಿಸಿದ್ದಾರೆ.

ವಾಡಿಕೆಯಂತೆ ಮೇ 20ರ ವೇಳೆಗೆ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಸಮೂಹದಲ್ಲಿ ಮುಂಗಾರು ಮಳೆ ಬೀಳುವುದು. ನಂತರ 10–11 ದಿನಗಳಲ್ಲಿ, ಅಂದರೆ ಜೂನ್‌ 1ರಂದು ಈ ಮಾರುತಗಳು ಕೇರಳ ಕರಾವಳಿಯನ್ನು ಪ್ರವೇಶಿಸುತ್ತವೆ.

ADVERTISEMENT

ಈ ಬಾರಿ ಮುಂಗಾರು ಮಾರುತಗಳು ಕೇರಳ ಕರಾವಳಿಯನ್ನು ಪ್ರವೇಶಿಸುವ ದಿನಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರ ಗುಜರಾತ್‌, ಮಧ್ಯಪ್ರದೇಶ, ಛತ್ತೀಗಡ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್, ಬಿಹಾರ ಹಾಗೂ ಉತ್ತರ ಪ್ರದೇಶದ ಕೆಲ ಪ್ರದೇಶಗಳಲ್ಲಿ ವಾಡಿಕೆಗಿಂತ 3–7 ದಿನ ತಡವಾಗಿ ಮುಂಗಾರು ಪ್ರವೇಶಿಸಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಡಿಕೆಯಂತೆ ಜೂನ್‌ 23ರ ಬದಲಾಗಿ 27ರಂದು ಮುಂಗಾರು ಮಳೆಯ ಸಿಂಚನವಾಗಲಿದೆ ಎಂದೂ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.