ADVERTISEMENT

ಜಮ್ಮು–ಕಾಶ್ಮೀರ: ಆನ್‌ಲೈನ್ ಅಲ್ಲ, ರೇಡಿಯೊ ತರಗತಿ: 45,000 ವಿದ್ಯಾರ್ಥಿಗಳಿಗೆ ಪಾಠ

ಪಿಟಿಐ
Published 13 ಜೂನ್ 2020, 11:59 IST
Last Updated 13 ಜೂನ್ 2020, 11:59 IST
ರೇಡಿಯೊ ತರಗತಿ– ಪ್ರಾತಿನಿಧಿಕ ಚಿತ್ರ
ರೇಡಿಯೊ ತರಗತಿ– ಪ್ರಾತಿನಿಧಿಕ ಚಿತ್ರ   

ಭದರ್ವಾಹ್: ಜಮ್ಮು ಮತ್ತು ಕಾಶ್ಮೀರದ ಶಿಕ್ಷಣ ಇಲಾಖೆ ಡೊಡಾ ಜಿಲ್ಲೆಯಲ್ಲಿ ರೇಡಿಯೊ ತರಗತಿಗಳ ಮೂಲಕವೇ ವಿದ್ಯಾರ್ಥಿಗಳಿಗೆ ಪಠ್ಯ ಪೂರ್ಣಗೊಳಿಸುವ ಪ್ರಯತ್ನ ನಡೆದಿದೆ.

ಕೊರೊನಾ ವೈರಸ್ ಸೋಂಕು ಆತಂಕದಿಂದಾಗಿ ದೇಶದಾದ್ಯಂತ ಶಾಲೆ-ಕಾಲೇಜುಗಳು ತೆರೆದಿಲ್ಲ. ಬಹುತೇಕ ಶಿಕ್ಷಕರು, ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಆನ್‌ಲೈನ್ ಪಾಠ ನಡೆಸುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳ ಮನೆಗಳಲ್ಲಿ ಸ್ಮಾರ್ಟ್‌ಫೋನ್‌ಗಳು, ಹೈ ಸ್ಪೀಡ್ ಇಂಟರ್ನೆಟ್ ಇರದ ಕಾರಣ ಜಮ್ಮು ಮತ್ತು ಕಾಶ್ಮೀರ ಶಿಕ್ಷಣ ಇಲಾಖೆ ರೇಡಿಯೊ ಪಾಠದ ಕಾರ್ಯಕ್ರಮ ನಡೆಸಿ ಯಶಸ್ವಿಯಾಗಿದೆ.

ಆಲ್ ಇಂಡಿಯಾ ರೇಡಿಯೊದ ಪ್ರಾದೇಶಿಕ ಸ್ಟೇಷನ್ 'ಎಐಆರ್‌ ಭದರ್ವಾಹ್' ಬಹುತೇಕ ಇಡೀ ಡೊಡಾ ಜಿಲ್ಲೆಗೆ ತರಂಗಾಂತರದ ವ್ಯಾಪ್ತಿ ಹೊಂದಿದೆ. 101 ಮೆಗಾಹರ್ಟ್ಸ್ ಕಂಪನಾಂಕಗಳಲ್ಲಿ ಮೇ 29ರಿಂದ ನಿತ್ಯ ಒಂದೂವರೆ ಗಂಟೆಗಳು ಶೈಕ್ಷಣಿಕ ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ.

ADVERTISEMENT

ಮಾರ್ಚ್‌ನಿಂದ ಲಾಕ್‌ಡೌನ್‌ನಿಂದಾಗಿ ಶಾಲೆಗಳು ಮುಚ್ಚಿದ್ದವು. ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಹಾಗೂ ಕಡಿಮೆ ಆದಾಯ ಹೊಂದಿರುವ ಪಾಲಕರು ಚಿಂತಿತರಾಗಿದ್ದರು. ಗುಡ್ಡ ಪ್ರದೇಶ ಡೊಡಾ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಡಿಸೆಂಬರ್‌ನಿಂದ ಮಾರ್ಚ್‌ ವರೆಗೂ ಶಾಲೆಗಳು ಮುಚ್ಚಿರುತ್ತವೆ. ಮಾರ್ಚ್‌ನಿಂದ ಸೆಪ್ಟೆಂಬರ್‌ ಪಠ್ಯ ಪೂರ್ಣಗೊಳಿಸಲು ಸಕಾಲವಾಗಿರುತ್ತದೆ. 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಅಕ್ಟೋಬರ್‌–ನವೆಂಬರ್‌ನಲ್ಲಿ ಅಂತಿಮ ಪರೀಕ್ಷೆ ನಡೆಸಲಾಗುತ್ತದೆ.

ಆನ್‌ಲೈನ್‌ ಪಾಠ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಮೀಕ್ಷೆ ನಡೆಸಿತ್ತು. ಇಲ್ಲಿನ ಶೇ 55ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಇಂಟರ್‌ನೆಟ್‌ ಮತ್ತು ಸ್ಮಾರ್ಟ್‌ಫೋನ್‌ ಸೌಲಭ್ಯವಿರುವುದು ತಿಳಿದು ಬಂದಿತ್ತು. 598 ಶಾಲೆಗಳ 63,406 ವಿದ್ಯಾರ್ಥಿಗಳ ಪೈಕಿ 37,837 ವಿದ್ಯಾರ್ಥಿಗಳಲ್ಲಿ ಮಾತ್ರ ಇಂಟರ್‌ನೆಟ್‌ ಮತ್ತು ಸ್ಮಾರ್ಟ್‌ಫೋನ್‌ ಇರುವುದು ಸಮೀಕ್ಷೆಯಿಂದ ತಿಳಿಯಲಾಗಿದೆ ಎಂದು ಡೊಡಾ ಜಿಲ್ಲೆಯ ರೆಡಿಯೊ ತರಗತಿಗಳ ನೋಡಲ್‌ ಅಧಿಕಾರಿ ಅನಿಸ್ ಅಹಮದ್ ಹೇಳಿದ್ದಾರೆ.

ಹಾಗಾಗಿ, ಪ್ರಸಾರ‌ ಭಾರತಿಗೆ ಮನವಿ ಸಲ್ಲಿಸಿ ಎಐಆರ್‌ ಭದರ್ವಾಹ್‌ನಲ್ಲಿ ಸಮಯ ನಿಗದಿ ಪಡಿಸಿಕೊಳ್ಳಲಾಯಿತು. ಮೇ 29ರಿಂದ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ನಡೆಸಲಾಗುತ್ತಿದೆ ಎಂದಿದ್ದಾರೆ.

ಸುಮಾರು 45,000 ವಿದ್ಯಾರ್ಥಿಗಳು ರೇಡಿಯೊ ತರಗತಿಗಳ ಲಾಭ ಪಡೆದಿದ್ದಾರೆ. ಪ್ರತಿ ದಿನ ಬೆಳಿಗ್ಗೆ ವಿದ್ಯಾರ್ಥಿಗಳು ರೆಡಿಯೊ ತರಗತಿಗಳನ್ನು ಕೇಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಇದೊಂದು ಭಿನ್ನ ಅನುಭವಾಗಿದೆ ಎಂದು ರೇಡಿಯೊ ತರಗತಿಗಳ ಸಮನ್ವಯ ನಡೆಸುತ್ತಿರುವ ರಾನಾ ಆರಿಫ್‌ ಹಮಿದ್‌ ಹೇಳಿದ್ದಾರೆ.

'ದಿನಗೂಲಿ ಕಾರ್ಮಿಕರಾಗಿರುವ ನನ್ನ ತಂದೆಗೆ ಲಾಕ್‌ಡೌನ್‌ನಿಂದಾಗಿ ಕೆಲಸ ಇಲ್ಲದಂತಾಗಿದೆ. ನಮಗೆ ಸ್ಮಾರ್ಟ್‌ಫೋನ್‌ ಖರೀದಿಸುವುದು ಸಾಧ್ಯವಿಲ್ಲದೆ, ಆಲ್‌ಲೈನ್‌ ತರಗತಿಗಳಲ್ಲಿ ಭಾಗಿಯಾಗಲು ಸಾಧ್ಯವಾಗದೆ ಆತಂಕ ಎದುರಾಗಿತ್ತು. ಮುಂದಿನ ಓದಿನ ಬಗ್ಗೆ ಚಿಂತೆ ಉಂಟಾಗಿತ್ತು. ಹೇಗೋ ರೇಡಿಯೊ ತರಗತಿಗಳು ಶುರುವಾಗಿದ್ದರಿಂದ ನನ್ನ ಸೋದರ ಸಂಬಂಧಿಗಳು ಎಲ್ಲರೂ ಜೊತೆಯಾಗಿ ಪಾಠ ಕೇಳುತ್ತಿದ್ದೇವೆ' ಎಂದು 11ನೇ ತರಗತಿ ವಿದ್ಯಾರ್ಥಿ ರಿಜ್ವಾನಾ ಬಾನೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.