ADVERTISEMENT

ಮನೆ ಬಾಗಿಲಿಗೆ 11 ಬಗೆಯ ತರಕಾರಿ, ಸೊಪ್ಪು: ₹100ಕ್ಕೆ ಮಾರಾಟ

ಏಜೆನ್ಸೀಸ್
Published 4 ಏಪ್ರಿಲ್ 2020, 1:54 IST
Last Updated 4 ಏಪ್ರಿಲ್ 2020, 1:54 IST
ತರಕಾರಿ – ಸಂಗ್ರಹ ಚಿತ್ರ
ತರಕಾರಿ – ಸಂಗ್ರಹ ಚಿತ್ರ   

ಶಿವಗಂಗಾ: 'ಕರಿಬೇವು, ಕೊತ್ತಂಬರಿ ಬೇಕು, ಈರುಳ್ಳಿ, ಟೊಮೆಟೊ ಬೇಕು,...' ಎಂದು ಪದೇ ಪದೇ ಮನೆ ಬಿಟ್ಟು ಹೊರಗೆ ಸುತ್ತಾಡುವುದನ್ನು ತಪ್ಪಿಸಲು 11 ಅಗತ್ಯ ತರಕಾರಿಗಳನ್ನು ಒಳಗೊಂಡ ಚೀಲಮಾಡಿ ವಿತರಿಸಲಾಗುತ್ತಿದೆ. ಬಟ್ಟೆಯ ಬ್ಯಾಗ್‌ನಲ್ಲಿ ತರಕಾರಿಗಳನ್ನು ಇಟ್ಟು ₹100ಕ್ಕೆ ಮಾರಾಟ ಮಾಡಲಾಗುತ್ತಿದೆ.

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಾರೈಕುಡಿಯಲ್ಲಿ ಇಂಥ ವ್ಯವಸ್ಥೆ ಜಾರಿಗೊಳಿಸಲಾಗಿದೆ. ರಾಜ್ಯದ ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಸಚಿವ ಜಿ.ಭಾಸ್ಕರನ್‌ಚೀಲದಲ್ಲಿ ತರಕಾರಿ ಮಾರಾಟ ಮತ್ತು ವಿತರಣೆಗೆ ಶುಕ್ರವಾರ ಚಾಲನೆ ನೀಡಿರುವುದಾಗಿ ದಿ ಹಿಂದು ವರದಿ ಮಾಡಿದೆ.

ಕೋವಿಡ್‌–19 ಆತಂಕ ವ್ಯಾಪಿಸಿರುವುದರಿಂದ ಜನರ ಓಡಾಟ ನಿಯಂತ್ರಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ 'ತರಕಾರಿ ಯೋಜನೆ' ಜಾರಿಗೊಳಿಸಿದೆ. ಬೆಳಿಗ್ಗೆ ಮತ್ತು ಸಂಜೆ ಜನರು ಮಾರುಕಟ್ಟೆ ಪ್ರದೇಶ ಹಾಗೂ ಅಂಗಡಿಗಳ ಮುಂದೆ ಗುಂಪು ಗೂಡುವುದನ್ನು ತಪ್ಪಿಸಲು ನಿತ್ಯ ಬಳಕೆಗೆ ಅಗತ್ಯವಿರುವ ಆಹಾರ ಪದಾರ್ಥಗಳು ಮನೆಯ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಪುರಸಭೆಕೈಗೊಂಡಿದೆ. ಒಂದು ಸಣ್ಣ ಕುಟುಂಬಕ್ಕೆ 3–4 ದಿನಗಳ ವರೆಗೂ ಸಾಕಾಗುವಂತೆ 11 ಬಗೆಯ ತರಕಾರಿಗಳ ಚೀಲಸಿದ್ಧಪಡಿಸಲಾಗುತ್ತಿದೆ.

ADVERTISEMENT

ಈರುಳ್ಳಿ, ಆಲೂಗಡ್ಡೆ, ಬದನೇಕಾಯಿ, ಟೊಮೆಟೊ, ನುಗ್ಗೇಕಾಯಿ, ಬಾಳೆಕಾಯಿ, ಕರಿಬೇವಿನ ಸೊಪ್ಪು ಸೇರಿದಂತೆ 11 ರೀತಿಯ ತರಕಾರಿ–ಸೊಪ್ಪುಗಳನ್ನು ಬಟ್ಟೆಯ ಬ್ಯಾಗ್‌ಗಳಲ್ಲಿ ಪ್ಯಾಕ್‌ ಮಾಡಲಾಗುತ್ತಿದೆ. ಇದಕ್ಕೆ ₹100 ನಿಗದಿ ಪಡಿಸಿರುವುದರಿಂದ ಜನರಿಗೂ ಅನಗತ್ಯ ಬೆಲೆ ಏರಿಕೆಯ ಬಿಸಿ ತಟ್ಟುವುದಿಲ್ಲ. ಕುಟುಂಬವೊಂದಕ್ಕೆಕನಿಷ್ಠ 3 ದಿನಗಳ ವರೆಗೂ ಊಟ–ತಿಂಡಿಗೆ ₹100 ತರಕಾರಿ ಚೀಲ ಸಾಕಾಗುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಸೋಂಕು ನಿವಾರಕ ಔಷಧಿಗಳನ್ನು ಸಿಂಪಡಿಸುವ ಕಾರ್ಯಗಳಿಗೂ ಇಲ್ಲಿನ ಪುರಸಭೆಮುಂದಾಗಿದೆ. ಶಿವಗಂಗಾ ಜಿಲ್ಲೆಯಲ್ಲಿ 51 ಜನರನ್ನು ಪ್ರತ್ಯೇಕವಾಗಿರಿಸಲಾಗಿದ್ದು, ಅವರಲ್ಲಿ 5 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.