ADVERTISEMENT

ಲಾಕ್‌ಡೌನ್‌ ಪರಿಣಾಮ| 3ನೇ ಎರಡರಷ್ಟು ಮಂದಿ ಉದ್ಯೋಗಕ್ಕೆ ಕುತ್ತು

ಲಾಕ್‌ಡೌನ್‌ ಸಂಕಷ್ಟದ ಬಗ್ಗೆ ಅಜೀಂ ಪ್ರೇಮ್‌ಜಿ ವಿ.ವಿ.ಯಿಂದ ಸಮೀಕ್ಷೆ

ಪಿಟಿಐ
Published 12 ಮೇ 2020, 20:15 IST
Last Updated 12 ಮೇ 2020, 20:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""

ಬೆಂಗಳೂರು: ‘ಕೊರೊನಾ ಕಾರಣದಿಂದ ಜಾರಿ ಮಾಡಿರುವ ಲಾಕ್‌ಡೌನ್‌ ಅವಧಿಯಲ್ಲಿ ಒಟ್ಟಾರೆ ಶೇ 67ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ’ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಕರ್ನಾಟಕ ಸೇರಿ 12 ರಾಜ್ಯಗಳ ಸುಮಾರು 4,000 ಕಾರ್ಮಿಕರನ್ನು ದೂರವಾಣಿಯ ಮುಖಾಂತರ ಸಂದರ್ಶಿಸಿ ಸಮೀಕ್ಷೆ ನಡೆಸಿದ ವಿಶ್ವವಿದ್ಯಾಲಯವು, ಪ್ರಾಥಮಿಕ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

‘ಮಾರ್ಚ್ 24ರಿಂದ ಜಾರಿಯಾಗಿರುವ ಲಾಕ್‌ಡೌನ್ ಅರ್ಥವ್ಯವಸ್ಥೆಗೆ ಹಾಗೂ ಸಾಮಾನ್ಯ ಮತ್ತು ವಲಸೆ ಕಾರ್ಮಿಕ ಕುಟುಂಬಗಳಿಗೆ‌ ಇನ್ನಿಲ್ಲದ ಸಂಕಷ್ಟವನ್ನು ತಂದೊಡ್ಡಿದೆ. ಇವರ ಉದ್ಯೋಗ ಮತ್ತು ಜೀವನೋಪಾಯದ ಮೇಲೆ ಆದ ಪರಿಣಾಮ ಹಾಗೂ ಸರ್ಕಾರದ ಪರಿಹಾರ ಯೋಜನೆಗಳ ಲಭ್ಯತೆಯ ವಿಚಾರಗಳನ್ನು ಸಮೀಕ್ಷೆ ಕೇಂದ್ರೀಕರಿಸಿತ್ತು’ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ‘ನಗರ ಪ್ರದೇಶಗಳಲ್ಲಿ ಹತ್ತರಲ್ಲಿ ಎಂಟು ಮಂದಿ (ಶೇ 80) ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹತ್ತರಲ್ಲಿ ಸುಮಾರು ಆರು ಮಂದಿ (ಶೇ 57)ನಿರುದ್ಯೋಗಿಗಳಾಗಿದ್ದಾರೆ’ ಎಂದು ವರದಿ ತಿಳಿಸಿದೆ.

ADVERTISEMENT

ಈಗಲೂ ಕೆಲಸ ಮಾಡುತ್ತಿರುವ, ಕೃಷಿಯೇತರ ಸ್ವಯಂ ಉದ್ಯೋಗಿಗಳ ಸರಾಸರಿ ವಾರದ ಆದಾಯವು ಫೆಬ್ರುವರಿ ತಿಂಗಳಿನಲ್ಲಿದ್ದ ₹2,240ರಿಂದ ₹218ಕ್ಕೆ (ಶೇ 90ರಷ್ಟು) ಕುಸಿದಿದೆ. ಇತರ ಸಾಮಾನ್ಯ ಕಾರ್ಮಿಕರ ವಾರದ ಆದಾಯವು ₹ 940ರಿಂದ ₹ 495ಕ್ಕೆ (ಸುಮಾರು ಅರ್ಧಕ್ಕೆ) ಇಳಿದಿದೆ. ವೇತನದಾರರಲ್ಲಿ ಶೇ 50ರಷ್ಟು ಮಂದಿ ವೇತನ ಕಡಿತ ಕಂಡಿದ್ದಾರೆ ಅಥವಾ ವೇತನವನ್ನೇ ಪಡೆದಿಲ್ಲ. ಶೇ 49ರಷ್ಟು ಕುಟುಂಬಗಳವರು ಒಂದು ವಾರಕ್ಕೆ ಬೇಕಾದಷ್ಟು ಆಹಾರ ಸಾಮಗ್ರಿ ಖರೀದಿಸಲು ಬೇಕಾದಷ್ಟು ಹಣವೂ ಇಲ್ಲ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.

ವರದಿಯಲ್ಲಿ ನೀಡಲಾದ ಸಲಹೆಗಳು

- ಕಾರ್ಮಿಕರ ಸಮಸ್ಯೆ ನಿವಾರಿಸಿ ಆರ್ಥಿಕತೆಗೆ ಚೇತರಿಕೆ ನೀಡಲು ಕೆಲವು ತುರ್ತು ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಮಧ್ಯಮಾವಧಿ ಹಾಗೂ ದೀರ್ಘಾವಧಿಯ ನೀತಿಯನ್ನು ರೂಪಿಸುವುದು ಅಗತ್ಯ

- ಪಡಿತರ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಬೇಕು ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು

- ಬಡ ಕುಟುಂಬಗಳ ಖಾತೆಗೆ ಮಾಸಿಕ ₹ 7,000ದಂತೆ ಎರಡು ತಿಂಗಳು ನಗದು ವರ್ಗಾವಣೆ ಮಾಡಬೇಕು. ಆರ್ಥಿಕತೆಯನ್ನು ಬಲಗೊಳಿಸಲು ದೊಡ್ಡ ಪ್ರಮಾಣದಲ್ಲಿ ಹಣದ ವರ್ಗಾವಣೆ ಅತ್ಯಗತ್ಯ

- ಅಂತರ ಕಾಯ್ದುಕೊಳ್ಳುವ ನಿರ್ಬಂಧದೊಂದಿಗೆ ಉದ್ಯೋಗ ಖಾತ್ರಿ
ಕಾಮಗಾರಿಗಳನ್ನು ತುರ್ತಾಗಿ ಆರಂಭಿಸಬೇಕು. ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವುದೇ ಮುಂತಾದ ಪ್ರಗತಿಪರ ಹೆಜ್ಜೆಗಳನ್ನಿಡಬೇಕು

- ‘ನಗರ ಉದ್ಯೋಗ ಖಾತ್ರಿ ಯೋಜನೆ’ ಆರಂಭಿಸುವುದು, ಮೂಲಸೌಲಭ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡುವಂತ ಕ್ರಮಗಳನ್ನು ಕೈಗೊಳ್ಳಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.