ADVERTISEMENT

ಕಂಪನಿಗಳ ಕೈಗೆ ಸಿಕ್ಕ ಕೃಷಿಕನ ಜುಟ್ಟು: ರೈತ ಮುಖಂಡ ಕಡಿದಾಳು ಶಾಮಣ್ಣ

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ | ಅನುಭವ ಮಂಟಪ

ಚಂದ್ರಹಾಸ ಹಿರೇಮಳಲಿ
Published 20 ಮೇ 2020, 6:19 IST
Last Updated 20 ಮೇ 2020, 6:19 IST
ರೈತ ಮುಖಂಡ ಕಡಿದಾಳು ಶಾಮಣ್ಣ
ರೈತ ಮುಖಂಡ ಕಡಿದಾಳು ಶಾಮಣ್ಣ   

ಎಪಿಎಂಸಿ ಕಾಯ್ದೆಗೆ ಸರ್ಕಾರ ತರಾತುರಿಯಲ್ಲಿ ತಿದ್ದುಪಡಿ ತಂದುಕೃಷಿ ಉತ್ಪನ್ನಗಳ ಮಾರಾಟಕ್ಕೆಮುಕ್ತ ವ್ಯವಸ್ಥೆ ಕಲ್ಪಿಸುವ ಬದಲು ಎಪಿಎಂಸಿಯ ನ್ಯೂನತೆಗಳನ್ನು ಸರಿಪಡಿಸುವ ಮೂಲಕ ಅದನ್ನು ರೈತಸ್ನೇಹಿ ಮಾರುಕಟ್ಟೆಯಾಗಿ ರೂಪಿಸಬಹುದಿತ್ತು. ಆದರೆ, ಮುಕ್ತ ಮಾರುಕಟ್ಟೆ ಮೂಲಕ ಕೃಷಿ ಉತ್ಪನ್ನಗಳಿಗೆ ಅಧಿಕ ಬೆಲೆ ದೊರಕಿಸುವ ನೆಪದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಕೈಗೆ ಪರೋಕ್ಷವಾಗಿ ರೈತರ ಜುಟ್ಟನ್ನು ನೀಡಲಾಗಿದೆ ಎನ್ನುವುದು ರಾಜ್ಯದ ಹಿರಿಯ ರೈತ ಮುಖಂಡ ಕಡಿದಾಳು ಶಾಮಣ್ಣ ಅವರ ಅಭಿಮತ.

ಕಾಯ್ದೆಯ ತಿದ್ದುಪಡಿ ಕುರಿತು ಅವರು ‘ಪ್ರಜಾವಾಣಿ’ ಜತೆ ನಡೆಸಿದ ಮಾತುಕತೆಯ ಸಾರ ಇಲ್ಲಿದೆ

*ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತಸ್ನೇಹಿ ಆಗಿಲ್ಲವೇ?

ADVERTISEMENT

ಶಾಮಣ್ಣ: ಮುಕ್ತ ಮಾರುಕಟ್ಟೆ ವ್ಯವಸ್ಥೆಮೇಲುನೋಟಕ್ಕೆ ರೈತಸ್ನೇಹಿಯಾಗಿ ಕಂಡರೂ ದೀರ್ಘಕಾಲದಲ್ಲಿ ಶ್ರೀಮಂತ, ಬಹುರಾಷ್ಟ್ರೀಯ ಕಂಪನಿಗಳಹಿಡಿತಕ್ಕೆ ರೈತರು ಸಿಲುಕುವ ಅಪಾಯವಿದೆ. ಮುಕ್ತವ್ಯವಸ್ಥೆಯಲ್ಲಿ ಪ್ರವೇಶ ಪಡೆಯುವಸಣ್ಣಪುಟ್ಟ ವ್ಯಾಪಾರಿಗಳು ದಿನ ಕಳೆದಂತೆ ಖರೀದಿಗಾಗಿ ನಡೆಸುವ ಪೈಪೋಟಿಯ ಸಾಮರ್ಥ್ಯ ಕಳೆದು
ಕೊಳ್ಳುತ್ತಾರೆ. ಆರಂಭದಲ್ಲಿ ಹೆಚ್ಚಿನ ಬೆಲೆ ದೊರೆಯುವ ಸಾಧ್ಯತೆ ಇದ್ದರೂ ಬರುಬರುತ್ತಾ ಕಂಪನಿಗಳು ಉತ್ಪನ್ನಗಳ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಂಡು ಕೇಳಿದ ಬೆಲೆಗೆ ರೈತರು ಉತ್ಪನ್ನ ಮಾರಾಟ ಮಾಡುವ ಸನ್ನಿವೇಶ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ, ಈ ಕ್ರಮ ರೈತಸ್ನೇಹಿ ಎಂದು ಹೇಳಲು ಸಾಧ್ಯವಿಲ್ಲ.

*ಹಿಂದಿನ ವ್ಯವಸ್ಥೆಯೇ ಉತ್ತಮ ಎನ್ನುವುದು ನಿಮ್ಮ ಅಭಿಪ್ರಾಯವೇ?

ಶಾಮಣ್ಣ: ಇದುವರೆಗಿನ ವ್ಯವಸ್ಥೆಯಲ್ಲೂ ಸಾಕಷ್ಟು ಲೋ‌ಪದೋಷಗಳು ಇದ್ದವು. ಆದರೆ, ಎಪಿಎಂಸಿ ವರ್ತಕರು ಟೆಂಡರ್ ದರ ನಮೂದಿಸಿದರೂ ಉತ್ಪನ್ನ ಮಾರಾಟ ಮಾಡುವ ಅಥವಾ ತಿರಸ್ಕರಿಸುವ ಹಕ್ಕು ರೈತರಿಗೇ ಇತ್ತು. ಉದಾಹರಣೆಗೆ: ನಾವು ಅಡಿಕೆ ಮಂಡಿಗೆ ನೂರುಮೂಟೆ ಬಿಟ್ಟಿದ್ದೇವೆ. ಟೆಂಡರ್ ನಲ್ಲಿ ನಮೂದಿಸಿದ ಬೆಲೆ ಒಪ್ಪಿತವಾಗದೆ ಎಷ್ಟೋ ಬಾರಿ ಮಾರಾಟ ಮಾಡುವುದು ಬೇಡ ಎಂದು ನಿರ್ಧರಿಸಿದ್ದೇವೆ. ಉತ್ತಮ ಧಾರಣೆ ಬಂದಾಗ ಮಾರಾಟ ಮಾಡಿದ್ದೇವೆ. ತೀರಾ ಅನಿವಾರ್ಯ ಇದ್ದಾಗ, ಅಗತ್ಯ ಇರುವಷ್ಟುಮಾರಾಟ ಮಾಡಿ, ಉಳಿದ ಆವಕ ಅಲ್ಲೇ ಬಿಟ್ಟಿದ್ದೇವೆ. ಹೀಗೆ ಹಾಲಿ ಇರುವ ಉತ್ತಮ ವ್ಯವಸ್ಥೆಯನ್ನು ಉಳಿಸಿಕೊಂಡು, ಅದನ್ನು ಮತ್ತಷ್ಟು ಬಲಪಡಿಸಿದ್ದರೆ ಅನುಕೂಲವಾಗುತ್ತಿತ್ತು.

*ಎಪಿಎಂಸಿಯ ನ್ಯೂನತೆಗಳನ್ನು ಸರಿಪಡಿಸುವುದು ಹೇಗೆ?

ಶಾಮಣ್ಣ: ಸರ್ಕಾರವು ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಬೆಲೆಪಟ್ಟಿಯ ಪ್ರಕಾರವೇ ಉತ್ಪನ್ನಗಳನ್ನು ಖರೀದಿಸುವಂತೆ ವರ್ತಕರಿಗೆ ಸೂಚಿಸಬೇಕು. ಜಿಎಸ್‌ಟಿ, ಮಾರುಕಟ್ಟೆ ಸೆಸ್‌ ಕಡಿಮೆ ಮಾಡುವ ಮೂಲಕ ತೆರಿಗೆ ವಂಚನೆಯನ್ನು ತಡೆಯಬೇಕು.ಮಾರುಕಟ್ಟೆ ಹೊರಗೆ ನಡೆಯುವ ಕೈ ವ್ಯಾಪಾರ ಪದ್ಧತಿಯನ್ನು ನಿಯಂತ್ರಿಸಬೇಕು. ರೈತರಿಗೆ ಮೋಸ, ವಂಚನೆ ಮಾಡುವ ವರ್ತಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ವರ್ತಕರು ಮುಂಗಡ ಸಾಲ ನೀಡಿ, ಅಧಿಕ ಬಡ್ಡಿವಸೂಲಿ ಮಾಡುವವ್ಯವಸ್ಥೆಗೆ ಕಡಿವಾಣ ಹಾಕಬೇಕು. ರೈತರಿಗಾಗುವ ತೊಂದರೆಗಳನ್ನು ತ್ವರಿತವಾಗಿ ನಿವಾರಿಸಬೇಕು.ಬೆಳೆದ ಬೆಳೆಯನ್ನು ಸಂಗ್ರಹಿಸಿಡುವ ಸಾಮರ್ಥ್ಯ ವೃದ್ಧಿಸಲು ಸರ್ಕಾರದಿಂದಲೇಮುಂಗಡ ಪಾವತಿ ನೆರವುಕಲ್ಪಿಸಬೇಕು.

*ಕಾಯ್ದೆಯ ಹೊಸ ಸ್ವರೂಪದಲ್ಲೂ ರೈತರು ವಂಚನೆಗೆ ಒಳಗಾಗುತ್ತಾರೆಯೇ?

ಶಾಮಣ್ಣ: ಹೌದು, ಎಷ್ಟೋ ರೈತರು ಈಗಲೂ ಮಾರುಕಟ್ಟೆಯ ಹೊರಗೆ ಬೆಳೆಗಳ ಮಾರಾಟ ಮಾಡುತ್ತಲೇ ಇದ್ದಾರೆ. ತೆರಿಗೆ ಉಳಿಸಲು ಕಂಪನಿಗಳೇ ನೇರವಾಗಿ ರೈತರ ಮನೆ ಬಾಗಿಲಿಗೆ ಹೋಗಿ ಕೈ ವ್ಯಾಪಾರ ನಡೆಸುತ್ತಾ ಬಂದಿವೆ. ಸ್ವಲ್ಪ ಹೆಚ್ಚಿನ ಲಾಭದ ಆಸೆಗೆ ಬೆಳೆ ಮಾರಾಟ ಮಾಡಿದ ಹಲವು ರೈತರಿಗೆ ವಂಚನೆಯೂ ಆಗಿದೆ. ವರ್ಷವಿಡೀ ದುಡಿದ ದುಡಿಮೆ ಕಳೆದುಕೊಂಡು ಹಣ ವಸೂಲಿಗೆ ಪೊಲೀಸ್‌ ಠಾಣೆಗೆ ಅಲೆದಿದ್ದಾರೆ.

ಮುಕ್ತ ಮಾರುಕಟ್ಟೆಯಲ್ಲಿ ಇಂತಹ ವಂಚನೆ ಪ್ರಕರಣಗಳು ಮತ್ತಷ್ಟು ಹೆಚ್ಚಾಗುತ್ತವೆ. ಬ್ಯಾಂಕ್‌ ಸಾಲವನ್ನೇ ಮುಳುಗಿಸುವ ದೊಡ್ಡ ದೊಡ್ಡ ಕಂಪನಿಗಳು, ರೈತರ ಬಾಕಿ ನೀಡದೇ ವಂಚಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸರ್ಕಾರವೇ ಬೆಲೆ ನಿಗದಿ ಮಾಡಿದ್ದರೂ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ನೇರವಾಗಿ ಕಬ್ಬು ಪೂರೈಸಿದ ಎಷ್ಟೋ ಬೆಳೆಗಾರರಿಗೆ ಪೂರ್ಣ ಹಣ ಬಂದಿದೆಯೇ? ಇಂತಹ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಲೇ ಇರುತ್ತವೆ. ಲಾಭಕ್ಕಿಂತ ಮೋಸವೇ ಹೆಚ್ಚಾದರೆ ಯಾರನ್ನು ಹೊಣೆ ಮಾಡುವುದು? ಸದ್ಯದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬೆಳೆ ಮಾರಾಟಮಾಡಿದ್ದ ಹಣಕ್ಕೆ ಮೋಸವಿರಲಿಲ್ಲ.

*ವೈಜ್ಞಾನಿಕ ಬೆಲೆನಿಗದಿಯೇ ಮಾರುಕಟ್ಟೆ ಸಮಸ್ಯೆಗೆ ಪರಿಹಾರವೇ?

ಶಾಮಣ್ಣ: ಖಂಡಿತ. ಅದೊಂದೇ ಶಾಶ್ವತ ಪರಿಹಾರದ ದಾರಿ. ಪ್ರತಿ ಬಾರಿ ಚುನಾವಣೆ ಸಮಯದಲ್ಲಿ ಇಂತಹ ಚರ್ಚೆಗಳು ಜೀವ ಪಡೆಯುತ್ತವೆ. ನಂತರ ಮರೆಯಾಗುತ್ತವೆ. ರೈತರು ಬೆಳೆದ ಬೆಳೆಗೆ ತಗುಲಿದ ವೆಚ್ಚ ಹಾಗೂ ಅದಕ್ಕೆ ಲಾಭವನ್ನು ಸೇರಿಸಿ ಬೆಲೆ ನಿಗದಿಯಾದರೆ ಈ ಮಾರುಕಟ್ಟೆ ಚರ್ಚೆಗಳೇ ಅಪ್ರಸ್ತುತವಾಗುತ್ತವೆ. ರೈತರಿಗೆ ಸಾಲದ ಪ್ಯಾಕೇಜ್, ಸಾಲ ಮನ್ನಾ ಯೋಜನೆಗಳ ಅಗತ್ಯವೂ ಇರುವುದಿಲ್ಲ. ಆದರೆ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಯಾವ ಸರ್ಕಾರವೂ ಈ ವಿಷಯದಲ್ಲಿ ಗಂಭೀರ ಪ್ರಯತ್ನ ನಡೆಸಲಿಲ್ಲ. ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ಬೆಲೆ ಆಯೋಗಗಳೂ ಸಹಾಯಕ್ಕೆ ಬರಲಿಲ್ಲ. ಹಾಗೆಯೇ ರೈತರಲ್ಲೂ ಮಾಹಿತಿ ಕೊರತೆ ಇದ್ದು, ಬೆಳೆ ವೈವಿಧ್ಯ, ಮಾರುಕಟ್ಟೆ ವ್ಯವಸ್ಥೆ, ವಹಿವಾಟಿನ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.