ADVERTISEMENT

ದಾವಣಗೆರೆ | ಹಸುಗಳಿಗೆ ‘ಆಟೊ ಡ್ರಿಂಕಿಂಗ್‌’: 10ನೇ ತರಗತಿ ಓದಿದ ರೈತನ ಆವಿಷ್ಕಾರ

ನೀರಿನ ಸಮಸ್ಯೆ ನೀಗಲು ರೈತ ದ್ಯಾಮಪ್ಪ ಕಂಡುಕೊಂಡ ತಂತ್ರಜ್ಞಾನ

ಬಾಲಕೃಷ್ಣ ಪಿ.ಎಚ್‌
Published 29 ಜನವರಿ 2020, 6:48 IST
Last Updated 29 ಜನವರಿ 2020, 6:48 IST
ದಾವಣಗೆರೆ ಜಿಲ್ಲೆ ಹಾಲುವರ್ತಿಯ ಕೊಟ್ಟಿಗೆಯೊಂದರಲ್ಲಿ ಹಸುಗಳಿಗೆ ‘ಆಟೊ ಡ್ರಿಂಕಿಂಗ್‌’ ವ್ಯವಸ್ಥೆ
ದಾವಣಗೆರೆ ಜಿಲ್ಲೆ ಹಾಲುವರ್ತಿಯ ಕೊಟ್ಟಿಗೆಯೊಂದರಲ್ಲಿ ಹಸುಗಳಿಗೆ ‘ಆಟೊ ಡ್ರಿಂಕಿಂಗ್‌’ ವ್ಯವಸ್ಥೆ   
""

ದಾವಣಗೆರೆ: ನೀರು ವ್ಯರ್ಥವಾಗಿ ಹೋಗಬಾರದು. ಆದರೆ ಹಸುಗಳಿಗೆ ನೀರು ಕಡಿಮೆಯಾಗಬಾರದು ಎಂದು ಚಿಂತಿಸಿದತಾಲ್ಲೂಕಿನ ಹಾಲುವರ್ತಿಯ ರೈತ ದ್ಯಾಮಪ್ಪ ತಮ್ಮ ಹಸುಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಅಗತ್ಯ ಪ್ರಮಾಣದ ನೀರುಣಿಸುವ ‘ಆಟೊ ಡ್ರಿಂಕಿಂಗ್‌’ ವ್ಯವಸ್ಥೆಯನ್ನು ಕಂಡುಕೊಂಡಿದ್ದಾರೆ. ನೀರಿನ ಸಮಸ್ಯೆ ನೀಗಿಸಲು ಈ ಉಪಾಯ ಮಾಡಿದ್ದಾರೆ.

ಹಸುವೊಂದು ಎಷ್ಟು ನೀರು ಕುಡಿದು ಖಾಲಿ ಮಾಡುತ್ತದೆಯೋ ಅಷ್ಟು ನೀರು ಮತ್ತೆ ಬಂದು ಸಂಗ್ರಹವಾಗುವ ತಂತ್ರಜ್ಞಾನವಿದು.

₹300 ವೆಚ್ಚ: ಒಂದೂವರೆ ಅಡಿ ಉದ್ದದ ಕೇಸಿಂಗ್‌ ಪೈಪ್‌. ಒಂದೂಕಾಲು ಇಂಚು ಉದ್ದದ ಪೈಪ್‌ ಬಳಸಿಕೊಂಡು ಇದನ್ನು ತಯಾರಿಸಲಾಗಿದೆ. ದೊಡ್ಡ ನೀರಿನ ಟ್ಯಾಂಕ್ ಇದ್ದು, ಅದರಿಂದ ಒಂದು ಅಡಿ ಉದ್ದ, ಒಂದು ಅಡಿ ಅಗಲದ ನೀರಿನ ಟ್ಯಾಂಕ್‌ಗೆ ನೀರು ಹರಿಸಲಾಗುತ್ತದೆ. ಅಲ್ಲಿಂದ ಫುಟ್‌ವಾಲ್ವ್ ಅಳವಡಿಸಿ ಈ ಕೇಸಿಂಗ್‌ ಪೈಪ್‌ಗಳಿಗೆ ನೀರು ತುಂಬಿಸಲಾಗುತ್ತದೆ. ಹಸುಗಳ ಮುಖ ಹೋಗುವಷ್ಟು ದೊಡ್ಡದಾಗಿ ಕೇಸಿಂಗ್‌ ಪೈಪ್‌ ಇರುವುದರಿಂದ ನೀರು ಕುಡಿಯುವುದಕ್ಕೆ ಸಮಸ್ಯೆಯಾಗುವುದಿಲ್ಲ. ನೀರು ಕುಡಿದ ಕೂಡಲೇ ಮತ್ತೆ ಅದು ತುಂಬುತ್ತದೆ. ಆದರೆ ತುಂಬಿ ಹರಿಯುವ ಮೊದಲೇ ನೀರು ಬರುವುದನ್ನು ಫುಟ್‌ವಾಲ್ವ್ ತಡೆಯುತ್ತದೆ.

ADVERTISEMENT

ಒಂದು ಆಟೊ ಡ್ರಿಂಕಿಂಗ್‌ ವ್ಯವಸ್ಥೆಗೆ ₹300 ವೆಚ್ಚವಾಗಿದೆ. ದಾಮಪ್ಪ ಅವರ ಕೊಟ್ಟಿಗೆಯಲ್ಲಿ 16 ಹಸುಗಳಿದ್ದು, ಅದಕ್ಕಾಗಿ 16 ‘ಆಟೊ ಡ್ರಿಂಕಿಂಗ್‌’ ವ್ಯವಸ್ಥೆ ಮಾಡಿದ್ದಾರೆ.

ರೈತ ದ್ಯಾಮಪ್ಪ

‘ಕೋಳಿ ಫಾರ್ಮ್‌ ಮಾಡಬೇಕು ಎಂದು ಯೋಚನೆ ಮಾಡಿದ್ದೆ. ಅದಕ್ಕೆ ಸ್ವಯಂಚಾಲಿತನೀರಿನ ವ್ಯವಸ್ಥೆ ಮಾಡಬೇಕು ಎಂದು ಅಡ್ಡಾಡಿದೆ. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಡಾ. ಜಯದೇವಪ್ಪ ಕೆಲವು ತಂತ್ರಜ್ಞಾನಗಳನ್ನು ಅವರ ಲ್ಯಾಪ್‌ಟಾಪ್‌ನಲ್ಲಿ ತೋರಿಸಿದರು. ಆದರೆ ಕೋಳಿ ಫಾರ್ಮ್‌ ಮಾಡಲಾಗಲಿಲ್ಲ. ಇದೇ ತಂತ್ರಜ್ಞಾನವನ್ನು ಬಳಸಿ, ಹಸುಗಳಿಗೆ ನೀರುಣಿಸುವಂತೆ ಮಾಡಿದರೆ ಹೇಗೆ ಎಂದು ಯೋಚಿಸಿದೆ’ ಎಂದು ಕೇವಲ 10ನೇ ತರಗತಿ ಕಲಿತಿರುವ ದ್ಯಾಮಪ್ಪ ಹೊಸ ತಂತ್ರಜ್ಞಾನದ ಬಗ್ಗೆ ವಿವರಿಸಿದರು.

ಈ ಬಾರಿ ಕೋಳಿ ಫಾರ್ಮ್‌ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಹೈನುಗಾರಿಕೆಯಲ್ಲಿ ವರ್ಷದ 365 ದಿನವೂ ಸರಾಸರಿ 120 ಲೀಟರ್‌ ಹಾಲು ಕರೆಯುತ್ತಾರೆ. ಅವರ ಜತೆಗೆ ಅವರ ಸಹೋದರರಾದ ಬಸವರಾಜ್‌, ಮನು, ಪತ್ನಿ ಸಿದ್ಧಬಸಮ್ಮ, ಸೊಸೆ ಶ್ರುತಿ ಹೀಗೆ ಮನೆಯ ಸದಸ್ಯರೆಲ್ಲ ಕೈ ಜೋಡಿಸಿದ್ದಾರೆ.

ನೀರಿನ ಸಮಸ್ಯೆ ಉಂಟಾದಾಗ ನೀರುಳಿಸುವ ವಿಧಾನವನ್ನು ಕಂಡು ಕೊಳ್ಳಬೇಕಾಯಿತು ಎನ್ನುವುದು ದ್ಯಾಮಪ್ಪ ಅವರ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.