ADVERTISEMENT

ಕ್ಯಾಪ್ಸಿಕಂ: ಬೆಳೆ ನಿರ್ವಹಣೆಯೂ ಕಷ್ಟಕರ

ಮೈಸೂರು ಜಿಲ್ಲೆಯಲ್ಲಿ 100 ಎಕರೆಯಲ್ಲಿ ಕೃಷಿ, ಮಾರುಕಟ್ಟೆ ಕೊರತೆ, ಸಂಕಷ್ಟದಲ್ಲಿ ಬೆಳೆಗಾರ

ಡಿ.ಬಿ, ನಾಗರಾಜ
Published 10 ಮೇ 2020, 20:00 IST
Last Updated 10 ಮೇ 2020, 20:00 IST
ಗಂಗನಹೊಸಹಳ್ಳಿ ಬಳಿಯ ಗ್ರೀನ್‌ಹೌಸ್‌ನಲ್ಲಿನ ಕ್ಯಾಪ್ಸಿಕಂ
ಗಂಗನಹೊಸಹಳ್ಳಿ ಬಳಿಯ ಗ್ರೀನ್‌ಹೌಸ್‌ನಲ್ಲಿನ ಕ್ಯಾಪ್ಸಿಕಂ   

ಮೈಸೂರು: ಹಸಿ ಮೆಣಸಿನಕಾಯಿಗೆ ಬೆಲೆ, ಮಾರುಕಟ್ಟೆ ಸಿಗದೆ ರೈತರು ಒಂದೆಡೆ ಹೊಲದಲ್ಲೇ ಬೆಳೆ ನಾಶಪಡಿಸುತ್ತಿದ್ದರೆ, ಇನ್ನೊಂದೆಡೆ ಗ್ರೀನ್‌ಹೌಸ್‌ನಲ್ಲಿ ದಪ್ಪಮೆಣಸಿನಕಾಯಿ (ಕ್ಯಾಪ್ಸಿಕಂ)ಬೆಳೆದು ನಿರ್ವಹಣೆಗೂ ಕಾಸಿಲ್ಲದೆ ಕಷ್ಟಪಡುತ್ತಿದ್ದಾರೆ.

ಜಿಲ್ಲೆಯ ವಿವಿಧೆಡೆ ‘ಬೈ ಬ್ಯಾಕ್‌’ ಪದ್ಧತಿಯಡಿ ಕ್ಯಾಪ್ಸಿಕಂ ಬೆಳೆಯಲಾಗಿದೆ. ಅದರೆ, ಖರೀದಿ ಒಪ್ಪಂದ ಮಾಡಿಕೊಂಡಿದ್ದ ವ್ಯಾಪಾರಿಗಳು ‘ಲಾಕ್‌ಡೌನ್‌’ ಕಾರಣದಿಂದ ಬರುತ್ತಿಲ್ಲ. ಪರಿಣಾಮ, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಒಂದು ಕೆ.ಜಿ. ಕ್ಯಾಪ್ಸಿಕಂ ಅನ್ನು ₹ 10ರಿಂದ ₹ 15ರ ದರದಲ್ಲಿ ಸ್ಥಳೀಯ ಎಪಿಎಂಸಿಯಲ್ಲೇ ಮಾರಾಟ ಮಾಡುತ್ತಿದ್ದೇವೆ. ಇದು ಬೆಳೆ ನಿರ್ವಹಣೆಗೂ ಸಾಕಾಗುತ್ತಿಲ್ಲ ಎಂಬ ಅಳಲು ಬೆಳೆಗಾರರದ್ದಾಗಿದೆ.

ADVERTISEMENT

‘ಜಿಲ್ಲೆಯಲ್ಲಿ ಗ್ರೀನ್‌ಹೌಸ್‌ನಲ್ಲಿ 10 ಎಕರೆಗೂ ಹೆಚ್ಚು ಜಮೀನಿನಲ್ಲಿ ಕ್ಯಾಪ್ಸಿಕಂ ಬೆಳೆಯಿದ್ದರೆ, 100 ಎಕರೆಗೂ ಹೆಚ್ಚು ಹೊಲದಲ್ಲಿ ಬೆಳೆಯಿದೆ’
ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ರುದ್ರೇಶ್ ಮಾಹಿತಿ ನೀಡಿದರು.

ಲಕ್ಷ–ಲಕ್ಷ ವೆಚ್ಚ: ‘ನಾನು ಕೆಂಪು, ಹಳದಿ ಕ್ಯಾಪ್ಸಿಕಂ ಬೆಳೆದಿರುವೆ. ಆದರೆ, ಮಾರುಕಟ್ಟೆಯಿಲ್ಲದೆ ಬೆಳೆ ನಿರ್ವಹಣೆಯ ವೆಚ್ಚವೂ ಕೈ ಸೇರದಾಗಿದೆ’
ಎಂದು ಮೈಸೂರಿನ ಆಲನಹಳ್ಳಿಯ ಗುರುಸ್ವಾಮಿ ಬಳಿ ಅಲವತ್ತುಕೊಂಡರು.

‘ಬ್ಯಾಂಕಿಂಗ್‌ ಸೇವೆಯಿಂದ ನಿವೃತ್ತನಾದ ಬಳಿಕ ಗಂಗನಹೊಸಹಳ್ಳಿ ಗ್ರಾಮದ ಬಳಿ 20 ಗುಂಟೆ ಜಮೀನಿನಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಧನದೊಂದಿಗೆ ₹ 15 ಲಕ್ಷ ವೆಚ್ಚದಲ್ಲಿ ಗ್ರೀನ್‌ಹೌಸ್ ಮಾಡಿರುವೆ’ ಎಂದು ತಿಳಿಸಿದರು.

‘ಹತ್ತು ತಿಂಗಳ ಬೆಳೆ. ಮೊದಲ ತಿಂಗಳೇ 3 ಟನ್ ಫಸಲು ದೊರಕಿದೆ. ನಿತ್ಯ ಬೆಳೆ ನಿರ್ವಹಣೆಗೆ ಕನಿಷ್ಠ ₹ 1,000 ಬೇಕಿದೆ. ಇದೀಗ ಪ್ರತಿ ಕೆ.ಜಿ.ಗೆ ಸರಾಸರಿ ₹ 16 ಸಿಕ್ಕಿದೆ. ಉಳಿದ 7 ತಿಂಗಳಲ್ಲಿ 12 ಟನ್ ಫಸಲು ನಿರೀಕ್ಷಿಸಲಾಗಿದೆ‘ ಎಂದು ಹೇಳಿದರು.

***

ಪ್ರೂನಿಂಗ್ ಕೈಗೊಂಡು, ಫಸಲು ಬರುವುದನ್ನು ಬೆಳೆಗಾರರೇ ಮುಂದೂಡಬಹುದು. ಹಾಪ್‌ಕಾಮ್ಸ್‌, ಎಪಿಎಂಸಿಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದೇವೆ

-ಕೆ.ರುದ್ರೇಶ್‌, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

***

ನಾವು ಕೆಂಪು, ಹಳದಿ ಕ್ಯಾಪ್ಸಿಕಂ ಬೆಳೆದಿದ್ದೇವೆ.. ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದ ಕಾರಣ ಕಡಿಮೆ ಬೆಲೆಗೆ ಹಸಿರು ಇದ್ದಾಗಲೇ ಮಾರುತ್ತಿದ್ದೇನೆ

-ಸೂರಜ್, ಕ್ಯಾಪ್ಸಿಕಂ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.