ADVERTISEMENT

ರಾಜ್ಯಕ್ಕೆ ಈ ಬಾರಿ ಬೇಗನೆ ಬರಲಿದೆ ಮುಂಗಾರು

ಜೂನ್‌ ಮೊದಲ ವಾರವೇ ಪ್ರವೇಶ l ಉತ್ತಮ ಪ್ರಮಾಣದಲ್ಲಿ ಮಳೆ

​ಪ್ರಜಾವಾಣಿ ವಾರ್ತೆ
Published 14 ಮೇ 2020, 2:13 IST
Last Updated 14 ಮೇ 2020, 2:13 IST
ಮಳೆ ಸನ್ನಿವೇಶದ ಸಂಗ್ರಹ ಚಿತ್ರ
ಮಳೆ ಸನ್ನಿವೇಶದ ಸಂಗ್ರಹ ಚಿತ್ರ    

ಬೆಂಗಳೂರು: ಈ ಬಾರಿ ಮುಂಗಾರು ರಾಜ್ಯವನ್ನು ಬೇಗನೆ ಪ್ರವೇಶಿಸಲಿದ್ದು,ಉತ್ತಮ ಪ್ರಮಾಣದಲ್ಲಿ ಮಳೆಯಾಗಲಿದೆ.

ಇದೇ 16 ಕ್ಕೆ ಮುಂಗಾರು ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹವನ್ನು ಪ್ರವೇಶಿಸಲಿದೆ. ಆ ಬಳಿಕ 15 ದಿನಗಳಲ್ಲಿ ಅಂದರೆ ಮೇ ಕೊನೆ ಅಥವಾ ಜೂನ್‌ ಮೊದಲ ವಾರವೇ ಕೇರಳ ಪ್ರವೇಶಿಸಲಿದೆ. ಕರ್ನಾಟಕಕ್ಕೂ ಜೂನ್‌ ಮೊದಲ ವಾರವೇ ಮುಂಗಾರು ತಂಪೆರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರದ ನಿರ್ದೇಶಕ ಡಾ.ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಲಿದೆ. ಅಂದರೆ, ಸಾಮಾನ್ಯಕ್ಕಿಂತಲೂ ಶೇ 71 ರಷ್ಟು ಅಧಿಕ ಮಳೆಯಾಗುವ ಮುನ್ಸೂಚನೆ ಇದೆ. ಈ ಬಾರಿ ಮುಂಗಾರಿನ ಮೇಲೆ ಎಲ್‌ನೀನೋ ಪರಿಣಾಮ ಆಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಫೆಸಿಫಿಕ್ ಸಾಗರದ ಮೇಲಿನ ಉಷ್ಣಾಂಶ ನ್ಯೂಟ್ರಲ್‌ ಇದೆ. ಇಂತಹ ಸ್ಥಿತಿ ಇದ್ದಾಗ ಮುಂಗಾರು ಮಳೆ ಚೆನ್ನಾಗಿ ಆಗುತ್ತದೆ ಎಂದು ಅವರು ವಿವರಿಸಿದರು.

ADVERTISEMENT

ತಿಂಗಳ ಕೊನೆಯಲ್ಲಿ ದಕ್ಷಿಣ ರಾಜ್ಯಗಳ ಮಳೆಗೆ ಸಂಬಂಧಿಸಿದಂತೆ ಮುನ್ಸೂಚನೆ ವರದಿ ಬರಲಿದೆ. ಅದರಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿ ಸಿಗಲಿದೆ. ಮುಂಗಾರು ಪೂರ್ವ ಮಳೆಯಿಂದಾಗಿ ಅಂತರ್ಜಲ ಮಟ್ಟದ ವೃದ್ಧಿಯಾಗಿದೆ. ಮೈಸೂರು, ಹಾಸನ, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಬೇಸಿಗೆ ಬಿತ್ತನೆ ಶುರುವಾಗಿದೆ ಎಂದರು.

ರೈತರು ಮುಂಗಾರು ಕೃಷಿಗೂ ಸಿದ್ಧತೆಗಳನ್ನು ನಡೆಸಿಕೊಳ್ಳಬಹುದು. ಮುಂಗಾರು ಮಳೆ ಚೆನ್ನಾಗಿ ಆದರೂ ಮಳೆಯ ಹಂಚಿಕೆ ವ್ಯಾಪಿಸಿದರಷ್ಟೇ, ಅದರಿಂದ ರಾಜ್ಯಕ್ಕೆ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಶ್ರೀನಿವಾಸ್‌ ರೆಡ್ಡಿ ವಿವರಿಸಿದರು.

ಜಲಾಶಯ ಪರಿಸ್ಥಿತಿ: ತುಂಗಭದ್ರಾ ಬಿಟ್ಟರೆ ಉಳಿದ ಎಲ್ಲ ಜಲಾಶಯಗಳಲ್ಲೂ ನೀರಿನ ಪರಿಸ್ಥಿತಿ ಚೆನ್ನಾಗಿದೆ. ಕುಡಿಯುವ ಉದ್ದೇಶಕ್ಕೆ ನೀರಿನ ಅಭಾವವಾಗುವುದಿಲ್ಲ

ಬರದ ಛಾಯೆ: ಸುಮಾರು 400 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಇಲ್ಲಿ ಟ್ಯಾಂಕರ್‌ಗಳ ಮೂಲಕ ಮತ್ತು ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಕೆ

ಮುಂಗಾರು ಪೂರ್ವದ ಮಳೆ: ಕಳೆದ ವರ್ಷಕ್ಕೆ ಹೋಲಿಸಿದರೆ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಶೇ 10 ರಷ್ಟು ಹೆಚ್ಚಾಗಿ ಸುರಿದಿದೆ. ಕಳೆದ ವರ್ಷ ವಾಡಿಕೆಗಿಂತ ಶೇ 45 ರಷ್ಟು ಕಡಿಮೆ ಇತ್ತು.

ವಾಡಿಕೆ ಮಳೆ 67 ಮಿ.ಮೀ. ಈ ವರ್ಷ ಈವರೆಗೆ 74 ಮಿ.ಮೀ ಮಳೆ

ಅಂತರ್ಜಲ ಸ್ಥಿತಿ: ರಾಜ್ಯದಲ್ಲಿ ಅಂತರ್ಜಲ ಮಟ್ಟ ಶೇ 50 ರಷ್ಟಿದೆ, ಪ್ರವಾಹ ಪೀಡಿತವಾಗಿದ್ದ ಪ್ರದೇಶದಲ್ಲೂ ಅಂತರ್ಜಲ ಉತ್ತಮವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.