ADVERTISEMENT

ಎಂಎಚ್ಆರ್‌ಡಿ ಮಾರ್ಗದರ್ಶಿ ಸೂತ್ರದೊಂದಿಗೆ ಶೈಕ್ಷಣಿಕ ಚಟುವಟಿಕೆ: ಸುರೇಶ್ ಕುಮಾರ್ 

​ಪ್ರಜಾವಾಣಿ ವಾರ್ತೆ
Published 30 ಮೇ 2020, 13:08 IST
Last Updated 30 ಮೇ 2020, 13:08 IST
   

ಬೆಂಗಳೂರು: ಕೊರೊನಾ ಕಾಲಘಟ್ಟದಲ್ಲಿ ವರ್ಷಕ್ಕೆ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಾರ್ಗದರ್ಶಿ ಸೂತ್ರದ ಆಧಾರದಲ್ಲಿ ನಮ್ಮ ರಾಜ್ಯದ ಅಗತ್ಯತೆಗಳಿಗುನುಗುಣವಾಗಿ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ರೂಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿಗಳಿಗೆ ಒದಗಿಸಲು ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕ ಹಾಗೂ ಎಂಬೆಸಿ ಗ್ರೂಪ್ ಕಂಪನಿಗಳು ಶನಿವಾರ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದ ಸಮಾರಂಭದಲ್ಲಿ ಸಚಿವರು ಮಾತನಾಡಿದರು. ಈ ವೇಳೆ,ಶೈಕ್ಷಣಿಕ ವರ್ಷ, ಶಾಲಾ ಅವಧಿ, ಪಠ್ಯದ ಇತಿಮಿತಿ ಸೇರಿದಂತೆ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ನಮ್ಮ ರಾಜ್ಯದ ಅವಶ್ಯಕತೆಗಳ ಆಧಾರದಲ್ಲಿ ರೂಪಿಸಲಾಗುವುದು ಎಂದರು.

ಇಡೀ ವಿಶ್ವವೇ ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿ ತಂಡ ಸ್ಫೂರ್ತಿಯಿಂದ ಕೆಲಸ ಮಾಡಬೇಕಾದ ಸಂದರ್ಭ ಬಂದಿದೆ. ಹಾಗೆಯೇ ನಮ್ಮ ಎಸ್ಎಸ್ಎಲ್‌ಸಿಪರೀಕ್ಷಾರ್ಥಿಗಳೂ ಸಹ ಇಂತಹ ಸಂದರ್ಭದಲ್ಲಿ ಪರೀಕ್ಷೆ ಎದುರಿಸಬೇಕಾಗಿರುವುದರಿಂದ ನಮ್ಮೊಂದಿಗೆ ಈ ಎರಡು ಸಂಸ್ಥೆಗಳು ಕೈಜೋಡಿಸಿರುವುದು ನಮಗೆ ಇಂತಹ ಸಂದರ್ಭದಲ್ಲೂ ಮುನ್ನುಗ್ಗಿ ಆತ್ಮವಿಶ್ವಾಸದಿಂದ ಕೆಲಸ ಮಾಡಲು ಶಕ್ತಿ ಮತ್ತು ಸ್ಫೂರ್ತಿ ಬಂದಂತಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ADVERTISEMENT

ಈ ಎರಡು ಸಂಸ್ಥೆಗಳು ನೀಡಿರುವ ಇಂತಹ ಮಹೋನ್ನತ ಕೊಡುಗೆಗಳನ್ನು ನಾವು ಯಾವುದೇ ಲೋಪವಾಗದಂತೆ ನಮ್ಮ ಮಕ್ಕಳಿಗೆ ನೇರವಾಗಿ ತಲುಪಿಸುತ್ತೇವೆ. ಭಾರತ್ ಸ್ಕೌಟ್ಸ್-ಗೈಡ್ಸ್ ಸಂಸ್ಥೆಯು ನೀಡಿದ ಮಾಸ್ಕ್‌ಗಳನ್ನು ಆ ಸಂಸ್ಥೆಯ ಸದಸ್ಯರಾದ ನಾಡಿನ ಮಕ್ಕಳು ಮತ್ತು ಶಿಕ್ಷಕರೇ ಉಚಿತವಾಗಿ ಹೊಲಿದು ಕೊಟ್ಟಿದ್ದು, ಅವುಗಳಲ್ಲಿ ಅವರ ಪ್ರೀತಿ, ಶ್ರಮ, ಸಮಯಗಳಿರುವುದರಿಂದ ಅವುಗಳಿಗೆ ಕೊರೋನಾ ಹೆಮ್ಮಾರಿಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವಿದೆ ಎಂದು ಸಚಿವರು ಹೇಳಿದರು.

ಹಾಗೆಯೇ ಎಂಬೆಸಿ ಸೇರಿದಂತೆ ಸಮಾನ ಮನಸ್ಕ ಸಂಸ್ಥೆಗಳು ಇಂತಹ ಕಷ್ಟ ಕಾಲದಲ್ಲಿ ಮಕ್ಕಳ ಆರೋಗ್ಯ ಪಾಲನೆಗೆ ಅವಶ್ಯವಾದ ₹ 75 ಲಕ್ಷ ಮೌಲ್ಯದ ಸ್ಯಾನಿಟೈಸರ್ ನೀಡಿರುವುದು ಆ ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ತೋರಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಭಾರತ್ ಸ್ಕೌಟ್ಸ್-ಗೈಡ್ಸ್ ಕರ್ನಾಟಕ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾಸ್ಕ್‌ಗಳನ್ನು ಹಸ್ತಾಂತರಿಸಿ ಮಾತನಾಡಿ, ಸಮಯದಲ್ಲಿ ಮಕ್ಕಳಿಗೆ ಒಂದು ಸಣ್ಣ ಸಹಾಯ ಹಸ್ತ ಚಾಚಲು ಸಾಧ್ಯವಾಗಿರುವುದು ನಿಜಕ್ಕೂ ನಮಗೆ ಅಭಿಮಾನದ ವಿಷಯವಾಗಿದೆ ಎಂದರು. ಈ ಮಾಸ್ಕ್‌ಗಳನ್ನು ನಮ್ಮ ಸಂಸ್ಥೆಯಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮನೆಯಲ್ಲಿ ಪ್ರೀತಿಯಿಂದ ಹೊಲಿದು ತಂದು ಒಪ್ಪಿಸಿದ್ದಾರೆ ಎಂದು ಅವರ ಸಹಾಯವನ್ನು ಸ್ಮರಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯವರು ರಾಜ್ಯದ ಎಲ್ಲ ಎಸ್ಎಸ್ಎಲ್‌ಸಿಪರೀಕ್ಷಾರ್ಥಿಗಳಿಗೆ ಮಾಸ್ಕ್‌ಗಳನ್ನು ಮತ್ತು ಎಂಬೆಸಿ ಗ್ರೂಪ್ ಆಫ್ ಕಂಪನಿಯು ತಮ್ಮ ವಿವಿಧ ಸಹ ಸಂಸ್ಥೆಗಳೊಂದಿಗೆ ನೀಡಿದ ಸ್ಯಾನಿಟೈಸರ್‌ಗಳನ್ನು ಸಚಿವರು ಸ್ವೀಕರಿಸಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರಿಗೆ ಹಸ್ತಾಂತರಿಸಿದರು.

ಸಮಾರಂಭದಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ. ಕೆ.ಜಿ. ಜಗದೀಶ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ ಷಣ್ಮುಖಪ್ಪ ಕೊಂಡಜ್ಜಿ, ಮಂಜುಳಾ, ಎಂ.ಕೆ.ಖಾನ್, ಬಾಲಾಜಿ, ಶ್ರೀನಿಧಿ, ಎಂಬೆಸ್ಸಿ ಕಂಪನಿಯ ಸಿಇಒ ಮಿಲ್ಕೆ ಹಾಲೆಂಡ್, ಸಿಎಸ್ಆರ್ ಹೆಡ್ ಶೈನಾ ಗಣಪತಿ, ದೀಪಕ್ ಪ್ರಭು, ಪ್ರದೀಪ್ ಲಾಲಾ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.