ADVERTISEMENT

19 ವಿ.ವಿಗಳಲ್ಲಿ ಶೈಕ್ಷಣಿಕ ಮೀಸಲಾತಿ

ಕೆ.ಓಂಕಾರ ಮೂರ್ತಿ
Published 6 ಜುಲೈ 2019, 20:15 IST
Last Updated 6 ಜುಲೈ 2019, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಲೈಂಗಿಕ ಶೋಷಿತರ ಹಾಗೂ ದೇವದಾಸಿ ಪದ್ಧತಿ ತೊರೆದವರ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ 19 ವಿಶ್ವವಿದ್ಯಾಲಯಗಳಲ್ಲಿ ಮೀಸಲಾತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಶೇ 1ರಷ್ಟು ಶೈಕ್ಷಣಿಕ ಮೀಸಲಾತಿ ನೀಡಲು ಉನ್ನತ ಶಿಕ್ಷಣ ಇಲಾಖೆಯು (ವಿಶ್ವವಿದ್ಯಾಲಯಗಳು) ಬುಧವಾರ ಆದೇಶ ಹೊರಡಿಸಿದೆ.

ಈಗಾಗಲೇ ಅವಕಾಶ ಕಲ್ಪಿಸುತ್ತಿರುವ ಮೈಸೂರು ವಿಶ್ವವಿದ್ಯಾಲಯದ ಯೋಜನೆಯನ್ನು ಮಾದರಿಯಾಗಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲೂ ಈ ಮೀಸಲಾತಿ ಲಭಿಸಲಿದೆ. ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್‌ ಕೋರ್ಸ್‌ಗಳಲ್ಲೂ ಮೀಸಲಾತಿ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಅವರು ಈಚೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಮನವಿ ಮಾಡಿದ್ದರು.

ADVERTISEMENT

ಲೈಂಗಿಕ ಶೋಷಿತರ ಶೈಕ್ಷಣಿಕ ಅಭಿವೃದ್ಧಿಗಾಗಿ ಮೈಸೂರು ವಿ.ವಿ 2011–12ನೇ ಶೈಕ್ಷಣಿಕ ಸಾಲಿನಿಂದಲೇ ಮೀಸಲಾತಿ ಕಲ್ಪಿಸುತ್ತಿದೆ. ಪದವಿ ಕೋರ್ಸ್‌ಗಳಲ್ಲಿ ಎರಡು ಸೀಟು ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಒಂದು ಸೀಟನ್ನು ಹೆಚ್ಚುವರಿಯಾಗಿ ನೀಡಲು ಅವಕಾಶ ಕಲ್ಪಿಸಿದೆ. ಇಂಥ ವಿದ್ಯಾರ್ಥಿಗಳನ್ನು ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಎಂದು ಪರಿಗಣಿಸಿ ಶೇ 50ರಷ್ಟು ಶುಲ್ಕ ವಿನಾಯಿತಿ ನೀಡುತ್ತಿದೆ.

ಈಗಾಗಲೇ ಪದವಿ ಕೋರ್ಸ್‌ಗಳಲ್ಲಿ ಐವರು ಅಭ್ಯರ್ಥಿಗಳು ಈ ಅವಕಾಶ ಪಡೆದುಕೊಂಡಿದ್ದಾರೆ. 2019–20ನೇ ಶೈಕ್ಷಣಿಕ ಸಾಲಿನಲ್ಲೂ ಒಬ್ಬರು ವ್ಯಾಸಂಗ ಮಾಡುತ್ತಿದ್ದಾರೆ.

‘ಒಡನಾಡಿ ಸಂಸ್ಥೆಯಿಂದ ಬರುವ ಅಭ್ಯರ್ಥಿಗಳಿಗೆ ನಾವು ಶೈಕ್ಷಣಿಕ ಮೀಸಲಾತಿ ಕಲ್ಪಿಸಿದ್ದೇವೆ. ಇದಷ್ಟೇ ಅಲ್ಲ; ಹುತಾತ್ಮ ಯೋಧರ ಮಕ್ಕಳು ಹಾಗೂ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುತ್ತಿದ್ದೇವೆ’ ಎಂದು ಮೈಸೂರು ವಿ.ವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‌

ಲೈಂಗಿಕ ಶೋಷಿತರ ಪರವಾಗಿ ಕೆಲಸ ಮಾಡುತ್ತಿರುವ ಮೈಸೂರಿನ ಒಡನಾಡಿ ಸಂಸ್ಥೆಯು ಶೈಕ್ಷಣಿಕ ಮೀಸಲಾತಿಯನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಈ ಹಿಂದೆಯೇ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಕೌಟುಂಬಿಕ ದೌರ್ಜನ್ಯ, ವರ
ದಕ್ಷಿಣೆ ಕಿರುಕುಳ, ಆಸಿಡ್‌ ದಾಳಿ, ದೇವದಾಸಿಯರು ಮತ್ತು ಅವರ ಮಕ್ಕಳಿಗೆ ಈ ಸೌಲಭ್ಯ ಕಲ್ಪಿಸಬೇಕೆಂದು ಕೋರಿತ್ತು.

***

ಲೈಂಗಿಕ ಸಂತ್ರಸ್ತರು, ಅವರ ಮಕ್ಕಳಿಗೆ ಎಲ್ಲಾ ವಿ.ವಿಗಳಲ್ಲಿ ಶೈಕ್ಷಣಿಕ ಮೀಸಲಾತಿ ಕೊಡಿಸಲು 12 ವರ್ಷಗಳಿಂದ ಹೋರಾಟ ನಡೆಸಿದ್ದೆವು. ಒಂದಿಷ್ಟು ಯಶಸ್ಸು ಲಭಿಸಿದೆ.

– ಎಂ.ಎಲ್‌.ಪರಶುರಾಂ, ಸಂಸ್ಥಾಪಕ, ಒಡನಾಡಿ ಸೇವಾ ಸಂಸ್ಥೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.