ADVERTISEMENT

ಬರದ ಗಾಯಕ್ಕೆ ಲದ್ದಿ ಹುಳು ‘ಬರೆ’

ಕಂಗಾಲಾದ ರೈತರು; ನಿಯಂತ್ರಣಕ್ಕೆ ಇಲಾಖೆಯಿಂದ ಯತ್ನ

ಎಂ.ಮಹೇಶ
Published 14 ಜುಲೈ 2019, 19:45 IST
Last Updated 14 ಜುಲೈ 2019, 19:45 IST
ಗೋವಿನ ಜೋಳದ ಸುಳಿಯಲ್ಲಿ ಲದ್ದಿ ಹುಳು ಇರುವುದು
ಗೋವಿನ ಜೋಳದ ಸುಳಿಯಲ್ಲಿ ಲದ್ದಿ ಹುಳು ಇರುವುದು   

ಬೆಳಗಾವಿ: ಜಿಲ್ಲೆಯಾದ್ಯಂತ ಗೋವಿನಜೋಳಕ್ಕೆ ಲದ್ದಿ ಹುಳುಗಳ ಕಾಟ ಕಾಣಿಸಿಕೊಂಡಿರುವುದು, ಸತತ ಬರಗಾಲದಿಂದ ನೊಂದು–ಬೆಂದಿರುವ ರೈತರ ಮೇಲೆ ಬರೆ ಎಳೆದಂತಾಗಿದೆ. ಬೆಳೆ ಹಾಳಾಗುವ ಅಥವಾ ಇಳುವರಿ ಕುಸಿತದ ಆತಂಕ ಎದುರಾಗಿದೆ.

ಹೊಸ ನಮೂನೆಯ ಲದ್ದಿಹುಳ (ಫಾಲ್ ಆರ‍್ಮಿವರ್ಮ್) ಕೀಡೆಯು ಗೋವಿನ ಜೋಳ ಬೆಳೆಯಲ್ಲಿ ಸತತ 2ನೇ ವರ್ಷವೂ ಕಂಡುಬಂದಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಮುಂಗಾರು ಹಂಗಾಮಿನಲ್ಲಿ ಬೆಳವಣಿಗೆ ಹಂತದಲ್ಲಿರುವ 15ದಿನಗಳಿಂದ ಒಂದು ತಿಂಗಳ ಬೆಳೆಯಲ್ಲಿಯೇ ಹುಳುಗಳ ಕಾಟ ಆರಂಭವಾಗಿರುವುದು, ಅನ್ನದಾತರ ತಲೆನೋವಿಗೆ ಕಾರಣವಾಗಿದೆ.

ಸುಳಿಯಲ್ಲಿ ಇದ್ದುಕೊಂಡು ರಾತ್ರಿ ಹೊತ್ತು ತಿನ್ನುತ್ತಾ ಹೋಗುವ ಈ ಹುಳುಗಳು, ಬೆಳೆಯನ್ನು ನಿಧಾನವಾಗಿ ಹಾಳು ಮಾಡುತ್ತಿವೆ. ಇದು ಅಷ್ಟೋ ಇಷ್ಟೋ ಪ್ರಮಾಣದಲ್ಲಿ ಬಿದ್ದ ಮಳೆಯನ್ನೇ ನಂಬಿಕೊಂಡು, ಗೋವಿನಜೋಳದ ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗದವರಿಗೆ ಬರಸಿಡಿಲು ಬಡಿದಂತಾಗಿದೆ.

ADVERTISEMENT

ಎಚ್ಚೆತ್ತ ಅಧಿಕಾರಿಗಳು

ಈ ರೀತಿ ಸಮಸ್ಯೆಗೆ ಒಳಗಾಗಿರುವ ಬೆಳೆಗಳನ್ನು ಕೃಷಿ ಇಲಾಖೆಯ ಆಯಾ ಭಾಗದ ಅಧಿಕಾರಿಗಳು ಹಾಗೂ ತಜ್ಞರ ತಂಡದವರು ಪರಿಶೀಲಿಸುತ್ತಿದ್ದಾರೆ. ಸಮಸ್ಯೆ ಹತೋಟಿಗೆ ತರಲು ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸಪಡಬೇಕಾಗಿದೆ.

ಜಿಲ್ಲೆಯ ಬಹುತೇಕ ಭಾಗಗಳಲ್ಲಿ ತಿಂಗಳು ವಿಳಂಬವಾಗಿ ಮುಂಗಾರು ಮಳೆ ಆರಂಭವಾಗಿದೆ. ಇದೀಗ, ಹಾಕಿದ ಬೆಳೆಗೂ ‘ಪೀಡೆ ಕಾಟ’ ಶುರುವಾಗಿರುವುದು ಕಳವಳ ಮೂಡಿಸಿದೆ. ಪ್ರಕೃತಿಯ ಈ ಮುನಿಸಿನಿಂದಾಗಿ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಈ ಹಂಗಾಮಿನಲ್ಲಿ 1.40 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆಯ ಗುರಿ ಹೊಂದಲಾಗಿದೆ. ಈ ಪೈಕಿ ಈಗಾಗಲೇ 40ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮುಗಿದಿದೆ. ಇದರಲ್ಲಿ ಶೇ 60ರಷ್ಟು ಕಡೆಗಳಲ್ಲಿ 15 ದಿನಗಳಿಂದ ಒಂದು ತಿಂಗಳ ಬೆಳೆ ಇದೆ. ಇವುಗಳನ್ನು ಲದ್ದಿ ಹುಳು ಕಾಡುತ್ತಿದೆ. ಇತರ ಪ್ರದೇಶಗಳಿಗೂ ಈ ಹುಳುವಿನ ಕಾಟ ವಿಸ್ತರಣೆಯಾಗುವ ಮುನ್ಸೂಚನೆಗಳಿವೆ. ಹೀಗಾಗಿ, ರೈತರು ಗೋವಿನ ಜೋಳ ಬಿತ್ತುವುದೋ, ಬೇಡವೋ ಎಂದು ಚಿಂತನೆಯಲ್ಲಿದ್ದಾರೆ. ಗೋವಿನ ಜೋಳ ಈ ಭಾಗದಲ್ಲಿ ಜಾನುವಾರುಗಳಿಗೆ ಪ್ರಮುಖ ಆಹಾರವಾಗಿದೆ.

ಕ್ರಮ ವಹಿಸಿದ್ದೇವೆ

‘ಜಿಲ್ಲೆಯಾದ್ಯಂತ ಗೋವಿನ ಜೋಳ ಬೆಳೆಯಲಾಗುತ್ತದೆ. ಬಿತ್ತನೆ ಕಾರ್ಯ ಇನ್ನೂ ನಡೆಯುತ್ತಿದೆ. ಈಗಾಗಲೇ ಬಿತ್ತನೆಯಾಗಿರುವ ಪ್ರದೇಶಗಳಲ್ಲಿ ಈ ಬೆಳೆಗೆ ಲದ್ದಿಹುಳುಗಳ ಕಾಟ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳ ತಂಡ ಇದನ್ನು ಪರಿಶೀಲಿಸಿ, ರೈತರಿಗೆ ಸೂಕ್ತ ಸಲಹೆ–ಸೂಚನೆಗಳನ್ನು ಕೊಡುತ್ತಿದೆ. ಪೀಡೆಗಳ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹೋದ ವರ್ಷವೂ ಈ ಹುಳುಗಳ ಕಾಟ ಕಾಣಿಸಿಕೊಂಡಿತ್ತು. ಇಲಾಖೆಯಿಂದ ಕೈಗೊಂಡ ಕ್ರಮಗಳಿಂದಾಗಿ ನಿಯಂತ್ರಣಕ್ಕೆ ಬಂದಿತ್ತು. ಈ ಬಾರಿಯೂ ಅದೇ ಮಾದರಿಯಲ್ಲಿ ಕ್ಷೇತ್ರಗಳಲ್ಲಿ ಅಭಿಯಾನದ ರೀತಿ ಕೆಲಸ ಮಾಡುತ್ತಿದ್ದೇವೆ. ಈ ಹುಳುಗಳ ನಿಯಂತ್ರಣಕ್ಕೆ ಬಳಸಬಹುದಾದ ಕೆಮಿಕಲ್‌ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ರೈತರಿಗೆ ಸಬ್ಸಿಡಿಯಲ್ಲಿ ದೊರೆಯುತ್ತದೆ. ರೈತರ ಜಮೀನುಗಳಲ್ಲೇ ಅದನ್ನು ವಿತರಿಸುವುದಕ್ಕೂ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಗೋವಿನ ಜೋಳದ ಜೊತೆಗೆ ದ್ವಿದಳ ಧಾನ್ಯ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯಬೇಕು. ಕೈಯಿಂದ ತತ್ತಿ ಅಥವಾ ಮರಿ ಕೀಡೆಗಳನ್ನು ಆರಿಸಿ ನಾಶಪಡಿಸಬೇಕು ಅಥವಾ ಸೀಮೆಎಣ್ಣೆಯಲ್ಲಿ ಅದ್ದಿ ನಾಶಪಡಿಸಬೇಕು. ಔಷಧಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಎಲೆಗಳಿಗೆ ಅದರಲ್ಲೂ ಮುಖ್ಯವಾಗಿ ಸುಳಿಯಲ್ಲಿ ಸಿಂಪಡಿಸಬೇಕು. ರೈತ ಸಂಪರ್ಕ ಕೇಂದ್ರದವರ ನೆರವು ಪಡೆದುಕೊಳ್ಳಬೇಕು’ ಎಂದು ಬೆಳಗಾವಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಜಿ.ಬಿ. ಕಲ್ಯಾಣಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.